ದೀಪಾವಳಿ ಹಬ್ಬಕ್ಕೆ ಮತ್ತೆ ದುಪ್ಪಟ್ಟು ದರ ವಸೂಲಿಗೆ ಇಳಿದ ಖಾಸಗಿ ಟೂರಿಸ್ಟ್‌ ಬಸ್‌ಗಳು

Mangaluru News: ಹಬ್ಬದ ದಿನಗಳು ಸಮೀಪಿಸುತ್ತಿರುವಾಗ ಖಾಸಗಿ ಟೂರಿಸ್ಟ್‌ ಬಸ್‌ಗಳಿಂದ ಪ್ರಯಾಣಿಕರಿಂದ ದುಬಾರಿ ಟಿಕೆಟ್‌ ದರ ಸುಲಿಗೆ ಅವ್ಯಾಹತವಾಗಿ ದೀಪಾವಳಿಗೂ ಮುಂದುವರಿದಿದೆ

Mangaluru Bengaluru Bus fares shoot up ahead of Deepavali mnj

ಮಂಗಳೂರು (ಅ. 14): ಹಬ್ಬದ ದಿನಗಳು ಸಮೀಪಿಸುತ್ತಿರುವಾಗ ಖಾಸಗಿ ಟೂರಿಸ್ಟ್‌ ಬಸ್‌ಗಳಿಂದ ಪ್ರಯಾಣಿಕರಿಂದ ದುಬಾರಿ ಟಿಕೆಟ್‌ ದರ ಸುಲಿಗೆ ಅವ್ಯಾಹತವಾಗಿ ದೀಪಾವಳಿಗೂ ಮುಂದುವರಿದಿದೆ. ಈ ಬಾರಿಯೂ ದೀಪಾವಳಿಗೆ ಬೆಂಗಳೂರು ಮತ್ತಿತರ ಕಡೆಗಳಿಂದ ಕರಾವಳಿಗೆ ಆಗಮಿಸುವವರು ಎರಡ್ಮೂರು ಪಟ್ಟು ದರ ತೆತ್ತು ಆಗಮಿಸಬೇಕಾಗಿದೆ. ಖಾಸಗಿ ಟೂರಿಸ್ಟ್‌ ಬಸ್‌ಗಳ ದರ ಏರಿಕೆಗೆ ರಾಜ್ಯ ಸರ್ಕಾರವೇ ಸಾರಿಗೆ ಇಲಾಖೆ ಮೂಲಕ ಲಗಾಮು ಹಾಕುವುದಾಗಿ ದಸರಾ ಸಂದರ್ಭ ಘೋಷಿಸಿದ್ದರೂ ಅಂತಹ ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆದಿರುವುದು ಕಂಡುಬರುತ್ತಿಲ್ಲ. ದೂರದ ಊರುಗಳಲ್ಲಿ ಉದ್ಯೋಗದಲ್ಲಿರುವ ಮಂದಿ ಊರಿಗೆ ಅನಿವಾರ್ಯವಾಗಿ ಹಬ್ಬಗಳಿಗೆ ಬರಬೇಕಾಗುವುದರಿಂದ ದುಬಾರಿ ದರ ನೀಡಿ ಪ್ರಯಾಣಿಸಬೇಕಾಗಿದೆ. 

ಇಂತಹ ಸಂದರ್ಭಗಳಲ್ಲಿ ಸಾರಿಗೆ ಇಲಾಖೆಗೆ ದೂರು ನೀಡಲು ಮುಂದಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಟೂರಿಸ್ಟ್‌ ಬಸ್‌ಗಳು ಮನಬಂದಂತೆ ಟಿಕೆಟ್‌ ದರ ನಿಗದಿಪಡಿಸಿವೆ. ಆನ್‌ಲೈನ್‌ಗಳನ್ನು ತೆರೆದು ನೋಡಿದರೆ ದೀಪಾವಳಿ ಶುರುವಾಗುವುದಕ್ಕೆ ಮುನ್ನವೇ ಖಾಸಗಿ ಟೂರಿಸ್ಟ್‌ ಬಸ್‌ಗಳಲ್ಲಿ ಟಿಕೆಟ್‌ ದರ ಮುಗಿಲು ಮುಟ್ಟಿದೆ. ದೀಪಾವಳಿ ಮುಗಿಸಿ ವಾಪಸ್‌ ಉದ್ಯೋಗಕ್ಕೆ ತೆರಳುವಾಗಲೂ ದುಬಾರಿ ದರ ನೀಡಿಯೇ ಪ್ರಯಾಣಿಸಬೇಕಾಗಿದೆ.

ಮಂಗಳೂರಿಗೆ ಗರಿಷ್ಠ ದರ 3,400 ರು.!: ಖಾಸಗಿ ಟೂರಿಸ್ಟ್‌ ಬಸ್‌ಗಳ ವೆಬ್‌ಸೈಟ್‌ನ್ನು ನೋಡಿದ ಕರಾವಳಿ ಮಂದಿ ಹೌಹಾರುವಂತಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಒಬ್ಬರಿಗೆ ಪ್ರಯಾಣ ದರ ಕನಿಷ್ಠ 1,300 ರು.ನಿಂದ 3,400 ರು. ವರೆಗೆ ಕಾಣಿಸಲಾಗಿದೆ. ಈ ದರ ಅ.21ರಿಂದಲೇ ಆರಂಭವಾಗಿದ್ದು, ದೀಪಾವಳಿ ಹಬ್ಬ ಮುಗಿಸಿ ಅ. 26ರಂದು ಮತ್ತೆ ದುಬಾರಿ ದರ ನೀಡಿಯೇ ಬೆಂಗಳೂರಿಗೆ ಪ್ರಯಾಣಿಸಬೇಕಾಗಿದೆ. ಈಗಾಗಲೇ ಕೆಲವು ಸೀಟುಗಳು ಬುಕ್ಕಿಂಗ್‌ ಆಗಿದೆ. ಸ್ವಂತ ವಾಹನ ಇಲ್ಲದವರು, ಕೆಎಸ್‌ಆರ್‌ಟಿಸಿಯಲ್ಲಿ ಸೀಟು ಸಿಗದೇ ಇದ್ದವರು ಅನಿವಾರ್ಯವಾಗಿ ಖಾಸಗಿ ಟೂರಿಸ್ಟ್‌ ಬಸ್‌ ಮೊರೆ ಹೋಗುತ್ತಾರೆ. 

ಇದುವೇ ಸಂದರ್ಭ ಎಂದು ಖಾಸಗಿ ಟೂರಿಸ್ಟ್‌ ಬಸ್‌ಗಳು ನಿಗದಿಗಿಂತ ಅತ್ಯಧಿಕ ದರವನ್ನು ವಸೂಲಿ ಮಾಡುತ್ತಿವೆ. ಹಾಗೆಂದು ಹೊಸ ಸೌಲಭ್ಯ ಅಥವಾ ಹೆಚ್ಚುವರಿ ಬಸ್‌ ಅಥವಾ ಚಾಲಕ/ ನಿರ್ವಾಹಕ ವ್ಯವಸ್ಥೆ ಇರುವುದಿಲ್ಲ. ನಿತ್ಯ ಸಂಚರಿಸುವ ಮಾರ್ಗಗಳಲ್ಲೇ ವಿನಾ ಕಾರಣ ದುಬಾರಿ ದರ ವಸೂಲಿ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸುತ್ತಾರೆ ನೊಂದ ಪ್ರಯಾಣಿಕರು.

Bengaluru Auto Services: ಕೇಂದ್ರದ ನಿಯಮ ಬಳಸಿ ಸುಲಿಗೆ: ಓಲಾ, ಉಬರ್‌ ಕೇಸ್‌ ಹೈಕೋರ್ಟ್‌ಗೆ

ಸಾರಿಗೆ ಅಧಿಕಾರಗಳ ನಿರ್ಲಕ್ಷ್ಯ: ಖಾಸಗಿ ಟೂರಿಸ್ಟ್‌ ಬಸ್‌ಗಳು ಹಬ್ಬದ ದಿನಗಳಲ್ಲಿ ದುಬಾರಿ ದರ ವಸೂಲಿ ವಿರುದ್ಧ ಸಾರಿಗೆ ಅಧಿಕಾರಿಗಳು ಕ್ರಮ ಜರುಗಿಸುವುದನ್ನು ಹೇಳಿಕೆಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ಪ್ರಯಾಣಿಕರಿಂದ ದೂರು ಬಂದಿಲ್ಲ ಎನ್ನುತ್ತಾರೆ. ಆದರೆ ತಪ್ಪಿಯೂ ಟೂರಿಸ್ಟ್‌ ಬಸ್‌ಗಳ ಹಗಲು ದರೋಡೆ ದರ ವೆಬ್‌ಸೈಟ್‌ಗಳಲ್ಲಿ ರಾಜಾರೋಷವಾಗಿ ಕಂಡುಬರುತ್ತಿದ್ದರೂ ಅದನ್ನು ಪ್ರಶ್ನಿಸುವ ಗೋಜಿಗೂ ಅಧಿಕಾರಿಗಳು ಹೋಗುತ್ತಿಲ್ಲ. 

ದುಬಾರಿ ದರ ವಸೂಲಿ ಮಾಡುವ ಖಾಸಗಿ ಟೂರಿಸ್ಟ್‌ ಬಸ್‌ಗಳ ಪರವಾನಗಿ ರದ್ದುಗೊಳಿಸುವುದಾಗಿ ಬೆದರಿಸುತ್ತಾರೆಯೇ ವಿನಃ ಅಂತಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಇದು ಸಾರಿಗೆ ಅಧಿಕಾರಿಗಳ ಕರ್ತವ್ಯ ನಿಷ್ಠೆ ಬಗ್ಗೆ ಪ್ರಯಾಣಿಕರು ಶಂಕೆ ಪಡುವಂತೆ ಆಗಿದೆ.

ಖಾಸಗಿ ಟೂರಿಸ್ಟ್‌ ಬಸ್‌ಗಳು ಅ.21ರಿಂದ ಅ.26ರ ವರೆಗೆ ಬೆಂಗಳೂರು-ಮಂಗಳೂರು ನಡುವೆ ದುಬಾರಿ ಟಿಕೆಟ್‌ ದರ ವಸೂಲಿ ಬಗ್ಗೆ ವೆಬ್‌ಸೈಟ್‌ನಲ್ಲಿ ಹಾಕಿರುವ ದರಪಟ್ಟಿಯನ್ನು ಈ ಲಿಂಕ್‌ ಮೂಲಕ ನೋಡಬಹುದು. https://www.redbus.in/bus-tickets/bangalore-to-mangalore ಇದನ್ನು ನೋಡಿಯಾದರೂ ಸಾರಿಗೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂಬುದು ಪ್ರಯಾಣಿಕರ ನಿರೀಕ್ಷೆ.

Latest Videos
Follow Us:
Download App:
  • android
  • ios