Asianet Suvarna News Asianet Suvarna News

Monsoon Rain ಒಂದೇ ತಾಸಲ್ಲಿ 10 ಸೆಂ.ಮೀ. ಮಳೆಗೆ ಬೆಂಗಳೂರು ತತ್ತರ!

  • 12.5 ಸೆಂ.ಮೀ.: ಸಂಪಂಗಿರಾಮನಗರದಲ್ಲಿ ಸುರಿದ ಭಾರಿ ಮಳೆ
  • 8 ಕಡೆ: 10 ಸೆಂ.ಮೀ.ಗಿಂತ ಹೆಚ್ಚು ಮಳೆಯಾದ ಪ್ರದೇಶಗಳು
  • ನದಿಯಂತಾದ ರಸ್ತೆಗಳು, ವಾಹನ ಪಲ್ಟಿ, ಮನಗೆ ನುಗ್ಗಿದ ನೀರು
     
Thunderstorms accompanied by heavy rain lashed Bengaluru  flood like situation in several parts of city ckm
Author
Bengaluru, First Published May 18, 2022, 2:18 AM IST

ಬೆಂಗಳೂರು(ಮೇ.18):  ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಒಂದೇ ತಾಸಿನಲ್ಲಿ ನಗರದ ಹಲವು ಭಾಗಗಳಲ್ಲಿ 10 ಸೆಂ.ಮೀ.ಗಿಂತ ಅಧಿಕ ಮಳೆ ಸುರಿದಿದೆ. ಇದರಿಂದಾಗಿ ರಸ್ತೆ, ಅಂಡರ್‌ಪಾಸ್‌ಗಳು ನದಿಯಂತಾಗಿ, ಕಚೇರಿ ಮುಗಿಸಿ ಮನೆಗೆ ಮರಳಲು ಜನರು ಪರದಾಡಿದ್ದಾರೆ. ಧಾರಾಕಾರ ಮಳೆಯಿಂದಾಗಿ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ವಾಹನಗಳು ಮಳೆ ನೀರಿನಲ್ಲಿ ಮುಳುಗಡೆಯಾಗಿವೆ.

ಶಿವಾನಂದ ಸರ್ಕಲ್, ಮೈಸೂರು ರಸ್ತೆ, ಮೆಜೆಸ್ಟಿಕ್, ಜೆಪಿ ನಗರ, ಜಯನಗರ, ಲಾಲ್‌ಬಾಗ್, ಚಿಕ್ಕಪೇಟೆ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ವಿಜಯನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಮಾಗಡಿ ರಸ್ತೆ ಸೇರಿದಂತೆ ನಗರದ ಬಹುತೇಕ ಕಡಗಳಲ್ಲಿ ಜಲಾವೃತವಾಗಿದೆ. ರಸ್ತೆಗಳು ನದಿಯಂತಾಗಿದೆ. 

ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ!

ಮಳೆ ಅನಾಹುತ ಎದುರಿಸಲು ಸಜ್ಜಾಗಿ: ತುಷಾರ್‌
ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗುವ ಅನಾಹುತಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಿಪತ್ತು ನಿರ್ವಹಣೆಗೆ ಆಯಾ ವಲಯದಲ್ಲಿ ಸ್ವಯಂ ಸೇವಕ ತಂಡ ಗುರುತಿಸಿ ಸಕ್ರಿಯಗೊಳಿಸುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ ನೀಡಿದ್ದಾರೆ.

ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳದ ಅಧಿಕಾರಿಗಳೊಂದಿಗೆ ಮಂಗಳವಾರ ವಚ್ರ್ಯುವಲ್‌ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಬೇಕು. ಅದರಲ್ಲೂ ಎಸ್‌ಡಿಆರ್‌ಎಫ್‌ ಸದಾ ಜಾಗೃತವಾಗಿರಬೇಕು. ವಲಯ ಆಯುಕ್ತರುಗಳು ವಿಪತ್ತು ನಿರ್ವಹಣೆಗಾಗಿ ತಮ್ಮ ವಲಯ ವ್ಯಾಪ್ತಿಯಲ್ಲಿ ಸ್ವಯಂ ಸೇವಕ ತಂಡ ಗುರುತಿಸಿ, ಸಕ್ರಿಯಗೊಳಿಸಬೇಕು,ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ (ಎಸ್‌ಡಿಆರ್‌ಎಫ್‌) ಬಿಬಿಎಂಪಿ ಪ್ರತಿ ವಲಯಕ್ಕೆ ಒಬ್ಬರನ್ನು ಮೇಲ್ವಿಚಾರಕರನ್ನು ನಿಯೋಜಿಸುವಂತೆ ತಿಳಿಸಿದರು.

Monsoon Rain ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್!

ಜನರಿಗೆ ಮಾಹಿತಿ ಕೊಡಿ:
ಮಳೆಗಾಲದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಇಲಾಖೆಯ ಅಧಿಕಾರಿ ಸಿಬ್ಬಂದಿ ಹೆಸರು, ಮೊಬೈಲ್‌ ಸಂಖ್ಯೆಯ ಮಾಹಿತಿಯನ್ನು ನಾಗರಿಕರಿಗೆ ಮಾಹಿತಿ ನೀಡಬೇಕು. ಅದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಪ್ರವಾಹ ಉಂಟಾಗುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು, ಮರ, ರೆಂಬೆ ಬೀಳುವುದು ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ನಾಗರಿಕರು ದೂರು ನೀಡಿದ ಕೂಡಲೇ ಪರಿಹಾರಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಬಿಬಿಎಂಪಿ ಅರಣ್ಯ ವಿಭಾಗ ಮರಗಳನ್ನು ತೆರವು ಮಾಡಲು ರಚಿಸಿರುವ 21 ತಂಡಗಳ ಪೈಕಿ ಹಗಲು 18 ಹಾಗೂ ರಾತ್ರಿ ವೇಳೆ 3 ತಂಡಗಳು ಕೆಲಸಮಾಡುತ್ತಿವೆ. ಆದರೆ ರಾತ್ರಿ ವೇಳೆ ಹೆಚ್ಚಿನ ತಂಡಗಳು ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನಾ ವಿಭಾಗದ ವಿಶೇಷ ಆಯುಕ್ತ ಪಿ.ಎನ್‌.ರವೀಂದ್ರ, ಎಲ್ಲ ವಲಯ ಆಯುಕ್ತರು, ಜಂಟಿ ಆಯುಕ್ತರು, ಇಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಸ್‌ಡಿಆರ್‌ಎಫ್‌ ಸಿದ್ಧ
ನಗರದ ವಿಪತ್ತು ನಿರ್ವಹಣೆಗಾಗಿ ಎಸ್‌ಡಿಆರ್‌ಎಫ್‌ನಿಂದ ಸಿದ್ಧತೆ ಮಾಡಿಕೊಂಡಿದೆ, 4 ಪೋರ್ಟೆಬಲ್‌ ಪಂಪ್‌, 4 ಬೋಟುಗಳು, 44 ಲೈಫ್‌ ಜಾಕೆಟ್‌, 33 ಕಟಾವು ಯಂತ್ರ, 33 ಪಂಪ್‌ ಸೇರಿ ಇನ್ನಿತರ ಸಲಕರಣೆಗಳನ್ನು ಮೀಸಲಿರಿಸಲಾಗಿದೆ. ಜತೆಗೆ 20 ಕಡೆ ಅಗ್ನಿ ಶಾಮಕ ದಳಗಳ ನಿಯೋಜನೆ ಮಾಡಲಾಗಿದೆ. 1 ಪಾಳಿಯಲ್ಲಿ 10ರಿಂದ 12 ಮಂದಿಯಂತೆ 3 ಪಾಳಿಯಲ್ಲಿ ಕೆಲಸ ಮಾಡುವಂತೆ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಜತೆಗೆ 7 ರಕ್ಷಣಾ ವಾಹನಗಳಿದ್ದು ಸಮಸ್ಯೆ ಎದುರಾದ ಸ್ಥಳಗಳಿಗೆ ನಾಗರಿಕರ ರಕ್ಷಣೆ ಮಾಡುವ ಕೆಲಸ ಮಾಡಲಿದೆ ಎಂದು ಎಸ್‌ಡಿಆರ್‌ಎಫ್‌ ಉಪ ನಿರ್ದೇಶಕ ಸಿ.ಗುರುಲಿಂಗಯ್ಯ ಮಾಹಿತಿ ನೀಡಿದರು.
 

Follow Us:
Download App:
  • android
  • ios