ಬೆಂಗಳೂರು(ಸೆ.03): 2019ರಲ್ಲಿ ನಡೆದಿದ್ದ ರಾಜ್ಯ ಕೃಷಿ ಮಾರಾಟ ಮಂಡಳಿಯ (ಕೆಎಸ್‌ಎಎಂಬಿ) 50 ಕೋಟಿ ಹಣ ದುರುಪಯೋಗ ಪ್ರಕರಣದ ಕಿಂಗ್‌ಪಿನ್‌ ವಿಜಯ್‌ ಆಕಾಶ್‌, ಆತನ ಪುತ್ರ ಹಾಗೂ ಅಳಿಯ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಚೆನ್ನೈ ಮೂಲದ ವಿಜಯ್‌ ಆಕಾಶ್‌, ಆತನ ಪುತ್ರ ಪ್ರೇಮರಾಜ್‌ ಹಾಗೂ ದಿನೇಶ್‌ ಬಾಬು ಬಂಧಿತರಾಗಿದ್ದು, ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಚೆನ್ನೈನಲ್ಲಿ ಬಂಧಿಸಿ ನಗರಕ್ಕೆ ಸಿಸಿಬಿ ತಂಡ ಕರೆ ತಂದಿದೆ. ಈಗಾಗಲೇ ಈ ಪ್ರಕರಣದಲ್ಲಿ ಕೆಎಸ್‌ಎಎಬಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿದ್ದಲಿಂಗಯ್ಯ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಅಧಿಕಾರಿಗಳು ಸೇರಿದಂತೆ 15 ಆರೋಪಿಗಳ ಬಂಧನವಾಗಿದೆ. ನ್ಯಾಯಾಲಯಕ್ಕೂ ಪ್ರಾಥಮಿಕ ಹಂತದ ಆರೋಪ ಪಟ್ಟಿಯನ್ನು ಸಿಸಿಬಿ ಸಲ್ಲಿಸಿದೆ.

ಡ್ರಗ್ಸ್‌ ಮಾಫಿಯಾ ದಂಧೆಯ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಪೆಡ್ಲರ್

ಏನಿದು ಪ್ರಕರಣ?:

ರಾಜ್ಯದ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ದರಗಳಲ್ಲಿ ನಷ್ಟವಾದ ಸಂದರ್ಭದಲ್ಲಿ ರೈತರಿಗೆ ಬೆಂಬಲ ನೀಡಲು ಸರ್ಕಾರವು ಆವರ್ತ ನಿಧಿ (ರಿವಾಲ್ವಿಂಗ್‌ ಫಂಡ್‌) ಹಣವನ್ನು ಇಡಲಾಗಿತ್ತು‡. ಆದರೆ ಮಂಡಳಿಯ ಖಾತೆಯಲ್ಲಿದ್ದ ಹೆಚ್ಚುವರಿ .100 ಕೋಟಿ ಹಣವನ್ನು ಅಧಿಕಾರಿಗಳು, 2019ರ ನವೆಂಬರ್‌ನಲ್ಲಿ ಉತ್ತರಹಳ್ಳಿ ಶಾಖೆಯ ಸಿಂಡಿಕೇಟ್‌ ಬ್ಯಾಂಕ್‌ಗೆ ಒಂದು ವರ್ಷದ ಅವಧಿಗೆ ಶೇ.6ರಷ್ಟುಬಡ್ಡಿ ದರದಲ್ಲಿ ನಿಶ್ಚಿತ ಠೇವಣಿಗಾಗಿ ವರ್ಗಾವಣೆ ಮಾಡಿದ್ದರು. ಆಗ ನಕಲಿ ಅಧಿಕಾರಿಯ ಹೆಸರಿನಲ್ಲಿ ಠೇವಣಿ ಇಟ್ಟು ಮಂಡಳಿಗೆ ವಂಚಿಸಿದ್ದರು. ಅಲ್ಲದೆ .48 ಕೋಟಿ ಹಣವು ವಿವಿಧ ಬ್ಯಾಂಕ್‌ಗಳ 60 ಖಾಸಗಿ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಅಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ಅವರು, ಮಂಡಳಿಯ ಹಣಕಾಸು ವ್ಯವಹಾರಗಳ ಬಗ್ಗೆ ಅನುಮಾನಗೊಂಡು ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿತ್ತು.

ಕೂಡಲೇ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಸಿಸಿಬಿ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದ ತಂಡ, ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಹಾಗೂ ಮಂಡಳಿಯ ಸಹಾಯಕ ನಿರ್ದೇಶಕ ಸಿದ್ದಲಿಂಗಯ್ಯ ಸೇರಿದಂತೆ 15 ಮಂದಿಯನ್ನು ಬಂಧಿಸಿದ್ದರು. ಆದರೆ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಆಕಾಶ್‌ ಹಾಗೂ ಆತನ ಪರಿವಾರ ಪತ್ತೆಗೆ ಸಿಸಿಬಿ ಹುಡುಕಾಟ ನಡೆಸುತ್ತಿತ್ತು. ಕೊನೆಗೆ ಆತ ಸಿಕ್ಕಿಬಿದ್ದಿದ್ದಾನೆ.

ವಂಚಕನಾದ ಬ್ಯಾಂಕ್‌ ಅಧಿಕಾರಿ

ವಿಜಯ್‌ ಆಕಾಶ್‌ ನಿವೃತ್ತ ಬ್ಯಾಂಕ್‌ ಅಧಿಕಾರಿಯಾಗಿದ್ದು, ಠೇವಣಿ ರೂಪದಲ್ಲಿ ಬ್ಯಾಂಕ್‌ಗಳಿಗೆ ಸರ್ಕಾರದ ಹಣ ವರ್ಗಾಯಿಸಿ ವಂಚಿಸುವುದರಲ್ಲಿ ಸಿದ್ಧಹಸ್ತನಾಗಿದ್ದಾನೆ. ಈ ಕೃತ್ಯಕ್ಕೆ ಆತನಿಗೆ ಪುತ್ರ ಪ್ರೇಮರಾಜ್‌, ದಿನೇಶ್‌ ಹಾಗೂ ಸೊಸೆ ಮೋನಿಕಾ ಸಾಥ್‌ ಕೊಟ್ಟಿದ್ದರು. ಕೆಎಸ್‌ಎಎಂಬಿ ಸಹಾಯಕ ವ್ಯವಸ್ಥಾಪಕ ನಿರ್ದೇಕ ಸಿದ್ದಲಿಂಗಯ್ಯ ಅವರಿಗೆ ರೇವಣ್ಣ ಎಂಬಾತನ ಮೂಲಕ ವಿಜಯ್‌ ಆಕಾಶ್‌ ಪರಿಚಯವಾಗಿತ್ತು. ಈ ಸ್ನೇಹದಲ್ಲೇ ಮಂಡಳಿ ಹಾಗೂ ಬ್ಯಾಂಕ್‌ ಅಧಿಕಾರಿಗಳಿಗೆ ಹಣದಾಸೆ ತೋರಿಸಿ ತನ್ನ ವಂಚನೆ ಜಾಲಕ್ಕೆ ಬೀಳಿಸಿಕೊಂಡಿದ್ದ. ಠೇವಣಿ ನೆಪದಲ್ಲಿ ಬ್ಯಾಂಕ್‌ಗೆ ಮಂಡಳಿಯ ಆವರ್ತ ನಿಧಿಯನ್ನು ವರ್ಗಾಯಿಸಿದ್ದ ಆಕಾಶ್‌, ತನ್ನ ಸಹಚರರ 60 ಖಾತೆಗಳಿಗೆ ಅಕ್ರಮವಾಗಿ 50 ಕೋಟಿ ವರ್ಗಾಯಿಸಿಕೊಂಡಿದ್ದ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಇದೇ ರೀತಿ ಬ್ಯಾಂಕ್‌ ವಂಚನೆ ಸಂಬಂಧ ಬೆಂಗಳೂರು ಮಾತ್ರವಲ್ಲದೆ ವಿಜಯ್‌ ಆಕಾಶ್‌ ವಿರುದ್ಧ ತಿರುಪತಿ, ಕೊಯಮತ್ತೂರು ಹಾಗೂ ಹೈದರಾಬಾದ್‌ನಲ್ಲೂ ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಮೂರು ವಂಚನೆ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ಸಹ ನಡೆದಿದೆ. ಈ ಕೃತ್ಯದಲ್ಲಿ ಈತನ ಸೊಸೆ ಮೋನಿಕಾಳನ್ನು ಸಹ ಬಂಧಿಸಲಾಗಿತ್ತು. ಬಳಿಕ ಆಕೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.