* ಮೈಸೂರು ಕೊಪ್ಪಳದಲ್ಲಿ ಸಿಡಿಲಿಗೆ ಇಬ್ಬರು, ಮಂಡ್ಯದಲ್ಲಿ ಮರ ಬಿದ್ದು ಬಾಲಕಿ ಸಾವು* ಹಾರಿ ಹೋದ ಮನೆಯ ಛಾವಣಿ * ನೆಲಕ್ಕುರುಳಿದ ತೆಂಗಿನ ಮರಗಳು, ವಿದ್ಯುತ್ ಕಂಬಗಳು
ಬೆಂಗಳೂರು(ಮಾ.20): ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ ಚಾಮರಾಜನಗರ ಸೇರಿ ರಾಜ್ಯದ(Karnataka) ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ(Untimely Rain) ಶುರುವಾಗಿದ್ದು, ಶನಿವಾರ ಮಳೆಯಬ್ಬರಕ್ಕೆ ಮೂವರು ಬಲಿಯಾಗಿದ್ದಾರೆ.
ಮುಂಗಾರು ಪೂರ್ವ ಮಳೆಯ ಅಬ್ಬರದಲ್ಲಿ ಸಿಡಿಲಿಗೆ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದ ಸಿದ್ದಲಿಂಗನಾಯಕ (72), ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗಾಣದಾಲ ಗ್ರಾಮದ ಹೊರವಲಯದಲ್ಲಿ 13 ಕುರಿ ಸೇರಿ ಕುರಿಗಾಯಿ ಸುನೀಲ್ ಬಸರಿಹಾಳ(21) ಮೃತಪಟ್ಟಿದ್ದಾರೆ(Death). ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ಬಾರಿ ಬಿರುಗಾಳಿಯಿಂದಾಗಿ ತೆಂಗಿನ ಮರ ನೆಲಕ್ಕುರಳಿ ಪ್ರಿಯಾಂಕ(12) ಎಂಬ ಬಾಲಕಿ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡು, ಕಾರು, ಬೈಕ್ ಜಖಂಗೊಂಡಿರುವ ಘಟನೆ ನಡೆದಿದೆ. ಶ್ರೀರಂಗಪಟಣದಿಂದ ಬನ್ನೂರು ಕಡೆಗೆ ಕಾರು ಚಲಿಸುತ್ತಿದ್ದ ವೇಳೆ ತೆಂಗಿನಮರ ಕಾರಿನ ಮೇಲೆ ಉರುಳಿ ಬಾಲಕಿ ಪ್ರಿಯಾಂಕ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ನಾಗರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ, ಮಲೆನಾಡಿನ ಕೆಲವು ಭಾಗಗಳಲ್ಲಿ ವರ್ಷದ ಮಳೆ
ಮೈಸೂರಲ್ಲೂ ನಗರದ ಪ್ರಮುಖ ರಸ್ತೆಗಳು ಮತ್ತು ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಚಾಮರಾಜನಗರ ಜಿಲ್ಲೆಯ ಕಿಲಗೆರೆ, ಕೊತ್ತಲವಾಡಿ, ಮಾದಲವಾಡಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬಿರುಗಾಳಿಗೆ ಕಿಲಗೆರೆ ಗ್ರಾಮದ ಪುಟ್ಟರಂಗಮ್ಮ ಅವರ ಮನೆಯ ಛಾವಣಿ ಹಾರಿ ಹೋಗಿದೆ. ಗುಂಡ್ಲುಪೇಟೆ ತಾಲೂಕಲ್ಲಿ ಗಾಳಿ ಮಳೆಗೆ ಹತ್ತಾರು ಎಕರೆ ಬಾಳೆ ನೆಲಕಚ್ಚಿದೆ. ಹೊಸಪುರ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ತೆಂಗಿನ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
7 ಜಿಲ್ಲೆಗಳಲ್ಲಿ ದಿಢೀರ್ ಮಳೆ, ಶಿರಸಿ ಜಾತ್ರೆಯಲ್ಲಿ ಕುಸಿದ ತೊಟ್ಟಿಲು
ಶಿರಸಿ: ಬಿಸಿಲ ಧಗೆ ಏರುತ್ತಿರುವ ನಡುವೆಯೇ ಉತ್ತರ ಕನ್ನಡ (Uttara Kannada) ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಶುಕ್ರವಾರ ಕೆಲಗಂಟೆಗಳ ಕಾಲ ದಿಢೀರ್ ಉತ್ತಮ (Rain) ಮಳೆಯಾಗಿದೆ. ಮಾ. 18 ರಂದು ಮಳೆ-ಗಾಳಿ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶಿರಸಿ (Sirsi) ಮಾರಿಕಾಂಬಾ ಜಾತ್ರಾ ಗದ್ದುಗೆ ಮಂಟಪಕ್ಕೆ ಹಾನಿಯಾಗಿದ್ದಲ್ಲದೆ, ಮನೋರಂಜನೆಗೆಂದು ಹಾಕಲಾಗಿದ್ದ ಜೈಂಟ್ ವ್ಹೀಲ್‌ನ ಐದು ತೊಟ್ಟಿಲು ಕುಸಿದು ಬಿದ್ದಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲಿನ ಝಳ ಏರುತ್ತಲೇ ಇದ್ದು, ಇದರ ನಡುವೆಯೇ ಉತ್ತರ ಕನ್ನಡ, ಹಾವೇರಿ, ಗದಗ, ಕೊಡಗು (Kodagu), ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು ಅರ್ಧಗಂಟೆಯಿಂದ ಒಂದು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಮಳೆಯಾದ ಬಗ್ಗೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದರು.
ಇನ್ನಷ್ಟು ಹೆಚ್ಚಾಲಿದೆ ಬಿಸಿಲ ಧಗೆ : ಹವಾಮಾನ ಇಲಾಖೆ ಎಚ್ಚರಿಕೆ
ಮಾರಿಕಾಂಬಾ ಜಾತ್ರೆಗೆ ಅಡ್ಡಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಸಂಜೆ ವೇಳೆಗೆ ಸುಮಾರು ಒಂದರಿಂದ ಒಂದೂವರೆ ಗಂಟೆಗಳ ಕಾಲ ಭಾರೀ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಸಿದ್ದಾಪುರದಲ್ಲಿ ಮನೆ ಮೇಲೆ ತೆಂಗಿನಮರವೊಂದು ಬಿದ್ದು, ನಾಲ್ವರಿಗೆ ಗಾಯಗಳಾಗಿದೆ. ಮಳೆ-ಗಾಳಿಯಿಂದಾಗಿ ಶಿರಸಿಯಲ್ಲಿ ಮಾರಿಕಾಂಬಾದೇವಿ ದೇವಸ್ಥಾನದ ಬಿಡ್ಕಿಬೈಲಿನಲ್ಲಿ ಜಾತ್ರಾ ಗದ್ದುಗೆಗಾಗಿ ನಿರ್ಮಿಸಿದ್ದ ಮಂಟಪಕ್ಕೆ ಹಾನಿಯಾಗಿದೆ. ಸಂಜೆ ಸುಮಾರು 6 ಗಂಟೆ ವೇಳೆ ದಿಢೀರ್ ಬಿರುಗಾಳಿ ಬೀಸಿದೆ. ಇದರಿಂದಾಗಿ ಜಾತ್ರಾ ಮಂಟಪದ ಮೇಲ್ಭಾಗ ಕುಸಿದಿದೆ. ಭಾರೀ ಗಾಳಿಗೆ ಅಂಗಡಿ ಮುಂಗಟ್ಟುಗಳ ಮುಂದೆ ಕಟ್ಟಿದ್ದ ಟಾರ್ಪಲ್ ಹಾರಿ ಹೋದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ತಪ್ಪಿದ ದುರಂತ:
ಜಾತ್ರೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನೋರಂಜನೆಗಾಗಿ ಅಳವಡಿಸಲಾಗಿದ್ದ ಜೈಂಟ್ ವ್ಹೀಲ್ಗೂ ಗಾಳಿ-ಮಳೆಯಿಂದಾಗಿ ಹಾನಿಯಾಗಿದೆ. ಗಾಳಿಯಬ್ಬರಕ್ಕೆ ಸುಮಾರು 5 ತೊಟ್ಟಿಲು ಕಳಚಿ ಕೆಳ ಬಿದ್ದಿದೆ. ಗಾಳಿ ಜೋರಾಗುತ್ತಿದ್ದಂತೆ ಅಧಿಕಾರಿಗಳು ಜಾಯಿಂಟ್ ವ್ಹೀಲ್ ಅನ್ನು ತಕ್ಷಣ ಸ್ಥಗಿತಗೊಳಿಸಿ ಜನರನ್ನು ಸ್ಥಳದಿಂದ ಹೊರ ಕಳುಹಿಸಿದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
