ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ, ಮಲೆನಾಡಿನ ಕೆಲವು ಭಾಗಗಳಲ್ಲಿ ವರ್ಷದ ಮಳೆ
* ಬಿಸಿಲ ಬೇಗೆಯ ಮಧ್ಯೆ ವರುಣ ಸಿಂಚನ
* ಮಲೆನಾಡಿನ ಕೆಲವು ಭಾಗಗಳಲ್ಲಿ ವರ್ಷದ ಮಳೆ
* ಈ ವರ್ಷದ ಮೊದಲ ಸಿಂಚನವನ್ನು ಕಾಫಿ ಬೆಳೆಗಾರರಲ್ಲಿ ಹರ್ಷ
ವರದಿ: ಆಲ್ದೂರು ಕಿರಣ್, ಏಷ್ಯಾ ನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು, (ಮಾ.18): ಮಲೆನಾಡಿನ ಕೆಲವು ಭಾಗಗಳಲ್ಲಿ (Malnad Areas) ವರ್ಷದ ಮಳೆ ಧಾರಾಕಾರವಾಗಿ ಸುರಿದಿದೆ. ಇಂದು(ಶುಕ್ರವಾರ) ಸಂಜೆ ಇದ್ದಕ್ಕಿದ್ದಂತೆ ಸುರಿದ ಮೊದಲ ಮಳೆ ಅನೇಕ ಅನಾಹುತಗಳನ್ನು ಸೃಷ್ಟಿಸಿದೆ.
ಮಲೆನಾಡ ಭಾಗದಲ್ಲಿ ಭಯಂಕರ ಮಳೆಯ ಪರಿಣಾಮ ಕಬ್ಬಿಣದ ಶೀಟ್ ಗಳು ಹಾರಿ ಹೋಗಿವೆ. ಮಲೆನಾಡು ಭಾಗದಲ್ಲಿ ಒಂದು ಗಂಟೆಗಳ ಕಾಲ ಮಳೆ ಬಂದಿದೆ. ಬಿಸಿಲ ಬೇಗೆಯಿಂದ ಬೇಸತ್ತಿದ್ದ ಜನರು ಹಾಗೂ ರೈತರಿಗೆ ಈ ಮಳೆ ಸಂತೋಷವನ್ನುಂಟುಮಾಡಿದೆ. ಮಲೆನಾಡಿನ ಶೃಂಗೇರಿ, ಕೊಪ್ಪ ತಾಲೂಕು ಹಾಗೂ ಎನ್ಆರ್ ಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ.
ಇನ್ನು ಹುಯಿಗೆರೆ, ಖಾಂಡ್ಯ, ಮೇಲ್ಪಾಲ್, ಬಾಳೆಹೊನ್ನೂರು, ಕಟ್ಟಿನಮನೆ, ಹುಣಸೆಹಳ್ಳಿ, ಕುಂಬರಗೋಡು, ಗಡಿಗೇಶ್ವರ, ಬೆರಣಗೊಡು, ಸಿಗಸೆ ಹಾಗೂ ಚಿಕ್ಕಮಗಳೂರು ತಾಲೂಕಿನ ಹೊರ ಭಾಗದಲ್ಲಿ ಸುಧಾರಣಾ ಮಳೆಯಾಗಿದೆ. ಮಲೆನಾಡ ಭಾಗದಲ್ಲಿ ಭಯಂಕರ ಮಳೆ, ಭಾರೀ ಗಾಳಿಗೆ ಕಬ್ಬಿಣದ ಶೀಟ್ ಗಳು ಹಾರಿ ಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ,ಗಾಳಿಗೆ ತೆಂಗಿನ ಮರದಿಂದ ಸೋಗೆ ಗರಿಗಳು ಮುರಿದು ಬಿದ್ದಿದೆ.ಭಾರೀ ಗಾಳಿ-ಮಳೆ ಕಂಡು ಜನರು ಕಂಗಾಲಾದರು.
ಶೃಂಗೇರಿ, ಕಳಸ ತಾಲೂಕಿನಲ್ಲಿ ಧಾರಾಕಾರ ಮಳೆ ಬಂದಿದ್ದು ಮರ, ವಿದ್ಯುತ್ ಕಂಬ ನೆಲಕ್ಕೆ ಉರುಳಿವೆ. ಕಳೆದ ಮೂರು ವರ್ಷದಿಂದ ಮಲೆನಾಡಿನಲ್ಲಿ ಮಳೆಗಾಲದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಅಪಾರ ಪ್ರಮಾಣ ಆಸ್ತಿ ,ಬೆಳೆ ಹಾನಿ ಆಗುತ್ತಿದೆ.ಈ ವರ್ಷವೂ ಮಳೆಗಾಲದಲ್ಲಿ ಮಳೆ ಮಲೆನಾಡಿಗರ ಬದುಕು ತೊಯ್ದು ಹೋಗುತ್ತಾ ಎನ್ನುವ ಚಿಂತೆಯ ಗೆರೆಗಳು ಆವರಿಸಿವೆ.ಸದ್ಯ ಬೇಸಿಗೆಯಲ್ಲಿಸುರಿದಿರುವ ಮಳೆ ಮಲೆನಾಡಿನ ರೈತರು ,ಜನರು ಸಂತೋಷವನ್ನು ವ್ಯಕ್ತಪಡಿಸಿದ್ದು, ಈ ವರ್ಷದ ಮೊದಲ ಸಿಂಚನವನ್ನು ಕಾಫಿ ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ.
ತಾಪಮಾನದಲ್ಲಿ ಬಿಸಿಲ ಝಳದ ಪರಿಣಾಮ ಕಾಫಿ, ಅಡಿಕೆ ಗಿಡಿಗಳು ಸುಟ್ಟು ಹೋಗುತ್ತಿತ್ತು.ಇದಕ್ಕೆ ಬೆಳೆಗಾರರು ಕೃತಕವಾಗಿ ಸ್ಪಿಂಕ್ಲರ್ ಗಳ ಮೂಲಕ ನೀರನ್ನು ಹಾಯಿಸುವ ಪ್ರಯತ್ನ ಮಾಡುತ್ತಿದ್ದರು. ಅಲ್ಲದೆ ಕಾಫಿ ಹೂವಿಗೆ ಮಳೆ ಅಗತ್ಯವಿತ್ತು. ಇಂತಹ ಹೊತ್ತಿನಲ್ಲಿ ಮಳೆ ಬಂದಿರುವುದು ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.ಹಲವು ದಿನಗಳಿಂದ ಬಿಸಿಲ ಬೇಗೆಗೆ ಜನರು ಬೇಸತ್ತು ಹೋಗುತ್ತಿದ್ದರು. ಕುಡಿಯುವ ನೀರಿಗೂ ಸಹ ಆಹಾಕಾರ ನಿರ್ಮಾಣವಾಗುತ್ತಿತ್ತು. ಈಗ ಮಳೆ ಸುರಿದಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ...
ತೆಂಗಿನ ಮರ ಬಿದ್ದು ಮನೆಗೆ ಹಾನಿ:
ಕಳಸದಲ್ಲಿ ಭಾರೀ ಗಾಳಿಗೆ ತೆಂಗಿನ ಮರ ಬಿದ್ದು ಮನೆಯೊಂದು ಸಂಪೂರ್ಣ ಜಖಂಗೊಂಡಿದೆ ಕಳಸ ತಾಲೂಕಿನ ಮೇಲಂಗಡಿ ಗ್ರಾಮದ ರಾಜಶೇಖರ್ ಎಂಬುವರಿಗೆ ಸೇರಿದ ಮನೆಯ ಮೇಲೆ ಬಿದ್ದ ಇಡೀ ತೆಂಗಿನ ಮರ ಬಿದ್ದು ಭಾರಿ ಪ್ರಮಾಣದ ಹಾನಿಯಾಗಿದೆ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಸಂಪೂರ್ಣ ಜಖಂಗೊಂಡಿವೆ.
ಶಿರಸಿಯಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆ
ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲಿ ಇಂದು(ಮಾರ್ಚ್ 18) ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಿದೆ(Rain). ವರುಣನ ಆರ್ಭಟದಿಂದ ಮಾರಿಕಾಂಬಾ ಜಾತ್ರೆಗೆ (marikamba jatre) ಅಡ್ಡಿಯಾಗಿದ್ದು, ಭಾರೀ ಗಾಳಿಯಿಂದಾಗಿ ಜಾತ್ರಾ ಅಂಗಡಿಯ ಮೇಲ್ಚಾವಣಿಗಳು ಹಾರಿ ಹೋಗುತ್ತಿವೆ. ಗಾಳಿ, ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಜಾತ್ರೆಗೆ ಬಂದ ಭಕ್ತರು(Devotees) ಹರಸಾಹಸ ಪಡುತ್ತಿದ್ದಾರೆ. ಕಳೆದ ಒಂದು ತಾಸಿನಿಂದ ಎಡಬಿಡದೆ ಗಾಳಿ ಸಹಿತ ಮಳೆಯಾಗಿದೆ.
ಗಾಳಿಯಿಂದಾಗಿ ಹಲವು ಕಡೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಶಿರಸಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕ ಮಳೆಯಾಗಿದೆ. ಭಾರೀ ಗಾಳಿ, ಮಳೆಗೆ ಶಿರಸಿ ಮಾರಿಕಾಂಬೆಯನ್ನು ಇರಿಸಿರುವ ಜಾತ್ರಾ ಗದ್ದುಗೆಯ ಚಪ್ಪರದ ಮೇಲ್ಭಾಗಕ್ಕೆ ಹಾನಿಯಾಗಿದೆ. ಶಿರಸಿ, ಸಿದ್ಧಾಪುರ ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದೆ.