* ಶಿವಮೊಗ್ಗ, ಹಗರಿಬೊಮ್ಮನಹಳ್ಳಿಯಲ್ಲಿ ಭಾರೀ ಆಲಿಕಲ್ಲು ಮಳೆ* ಅಪಾರ ಪ್ರಮಾಣದ ಬೆಳೆ ಹಾನಿ* ಜನಜೀವನ ಅಸ್ತವ್ಯಸ್ತ
ಬೆಂಗಳೂರು(ಏ.28): ರಾಜ್ಯದ(Karntaka) ವಿವಿಧೆಡೆ ಗುರುವಾರವೂ ಭಾರೀ ವರ್ಷಧಾರೆಯಾಗಿದ್ದು, ಮಳೆಯ ಆರ್ಭಟಕ್ಕೆ(Rain) ಮೂವರು ಮೃತಪಟ್ಟಿದ್ದಾರೆ(Death).
ರಾಯಚೂರು, ವಿಜಯನಗರ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಶಿವಮೊಗ್ಗ, ದಾವಣಗೆರೆ, ಕೊಡಗು, ಬೆಳಗಾವಿ, ವಿಜಯಪುರ ಸೇರಿದಂತೆ ಹಲವೆಡೆ ಗುಡುಗು-ಸಿಡಿಲು-ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಮಳೆಯಾಗಿದ್ದರೆ, ಚಿಕ್ಕಮಗಳೂರು, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದೆ. ಅನೇಕ ಕಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ(Crop Damage).
Vijayapura ಬೇಸಿಗೆ ಬಿಸಿಗಾಳಿ-ಸಿಡಿಲು ನಿಭಾಯಿಸಲು ಜನತೆಗೆ ಸಲಹೆ ನೀಡಿದ ಹೊಸ ಜಿಲ್ಲಾಧಿಕಾರಿ!
ಗದಗ ತಾಲೂಕಿನ ಜಂತಲಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಲತಾ ಮಲ್ಲಪ್ಪ ಕಲ್ಕೇರಿ(27) ಎಂಬ ರೈತ ಮಹಿಳೆ ಸಾವನ್ನಪ್ಪಿದರೆ, ರಾಯಚೂರು ಜಿಲ್ಲೆಯ ಮುದಗಲ್ ಸಮೀಪದ ಬನ್ನಿಗೋಳ ಗ್ರಾಮದಲ್ಲಿ ಕುರಿ ಕಾಯಲು ಹೋಗಿದ್ದ ವೇಳೆ ಸಿಡಿಲು ಬಡಿದು ರಾಮಣ್ಣ ಬಸ್ಸಪ್ಪ ಪೂಜಾರಿ(30) ಎಂಬಾತ ಮೃತಪಟ್ಟಿದ್ದಾನೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಲ್ಲಾಹುಣಸಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದು ಚಂದ್ರಕಾಂತ ಬೇಲ್ದಾರ್(26) ಎಂಬ ಯುವಕ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಇದೇ ಗ್ರಾಮದ ರೇಷ್ಮೆ ಗೂಡಿನ ಕಟ್ಟಡವೊಂದರ ತಗಡು ಹಾರಿ ಹೋಗಿ ಆರು ಮಂದಿ ಗಾಯಗೊಂಡಿದ್ದಾರೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಮಾಚನಾಯ್ಕನಹಳ್ಳಿಯಲ್ಲಿ ಸಿಡಿಲು(Lightning Strike) ಬಡಿದು ಜುಂಜಪ್ಪ ಎಂಬ ಕುರಿಗಾಹಿ ಗಾಯಗೊಂಡಿದ್ದರೆ, 35 ಮೇಕೆ-ಕುರಿಗಳು ಬಲಿಯಾಗಿವೆ.
ಇನ್ನು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುಮಾರು 25 ನಿಮಿಷಗಳ ಕಾಲ ಆಲಿಕಲ್ಲು ಮಳೆ ಸುರಿದಿದ್ದು, ರಸ್ತೆಯ ಮೇಲೆ ಆಲಿಕಲ್ಲು ಹಾಸಿದಂತಾಗಿತ್ತು. ಬಳ್ಳಾರಿ ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಬುಧವಾರ ಸಂಜೆ ಭಾರೀ ಬಿರುಗಾಳಿ ಮಳೆಯಿಂದ 20ಕ್ಕೂ ಮನೆಗಳ ಚಾವಣಿ ಹಾರಿ ಹೋಗಿದೆ. ಕೊಪ್ಪಳದ ಕಾರಟಗಿ ತಾಲೂಕಿನಲ್ಲಿ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಭತ್ತದ ಬೆಳೆ ನೆಲಕಚ್ಚಿದೆ. ನವಲಗುಂದ ತಾಲೂಕಿನಲ್ಲಿ ಮನೆಯ ಚಾವಣಿ ಹಾಗೂ ಗೋಡೆಯ ಕಲ್ಲು ಕುಸಿದು ಬಸಮ್ಮ ಎಂಬ ಮಹಿಳೆ ಗಾಯಗೊಂಡಿದ್ದಾರೆ.
