ಮೀನುಗಾರಿಕೆಂದು ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಅಲೆಗಳ ರಭಸಕ್ಕೆ ನೀರುಪಾಲಾದ ದಾರುಣ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.
ಉಡುಪಿ (ಜು.15): ಮೀನುಗಾರಿಕೆಂದು ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಅಲೆಗಳ ರಭಸಕ್ಕೆ ನೀರುಪಾಲಾದ ದಾರುಣ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48), ಗಂಗೊಳ್ಳಿ ಬೇಲಿಕೆರಿ ನಿವಾಸಿ ರೋಹಿತ್ ಖಾರ್ವಿ (35), ಮಲ್ಯಾರುಬೆಟ್ಟು ನಿವಾಸಿ ಜಗದೀಶ್ ಖಾರ್ವಿ (50) ನೀರುಪಾಲಾದ ಮೀನುಗಾರರು.
ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆ ವಾಪಸ್ ಆಗುವಾಗ ದೋಣಿ ಮಗುಚಿದೆ. ದೋಣಿ ಮಗುಚಿದ ವೇಳೆ ಓರ್ವ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಇನ್ನಿಬ್ಬರು ಕೂಡ ನೀರುಪಾಲಾಗಿದ್ದಾರೆ. ಸದ್ಯ ನೀರುಪಾಲಾದ ಮೀನುಗಾರರಿಗೆ ಸಮುದ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಇಬ್ಬರು ಕುರಿಗಾಹಿಗಳು ನೀರುಪಾಲು: ಜಾನುವಾರುಗೆ ನೀರು ಕುಡಿಸಲು ಭೀಮಾ ನದಿಗೆ ಇಳಿದಿದ್ದ ದನಗಾಹಿ ಯುವಕರಿಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋದ ದುರ್ಘಟನೆ ಯಾದಗಿರಿಜಿಲ್ಲೆಯ ವಡಗೇರಾ ತಾಲೂಕಿನ ಮಾಚನೂರಿನಲ್ಲಿ ಘಟಿಸಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಭಾರಿ ಪ್ರಮಾಣದ ಮಳೆಯಿಂದಾಗಿ ಭೀಮಾ ನದಿ ಪಾತ್ರದಲ್ಲಿ ಒಳಹರಿವು ರಭಸವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಯಾದಗಿರಿ ಹೊರವಲಯದ ಭೀಮಾ ಬ್ರಿಡ್ಜ್ ಕಂ ಬ್ಯಾರೇಜಿನಿಂದ ಸುಮಾರು 30 ಸಾವಿರ ಕ್ಯುಸೆಕ್ ಪ್ರಮಾಣದಷ್ಟು ನೀರನ್ನು ನದಿಗೆ ಬಿಡಲಾಗಿದ್ದರಿಂದ, ನದಿ ತೀರದ ಗ್ರಾಮಗಳಲ್ಲೀಗ ಪ್ರವಾಹ ಭೀತಿ ಎದುರಾಗಿದೆ.
ಈ ಮಧ್ಯೆ, ಮಾಚನೂರು ಗ್ರಾಮದ ರಮೇಶ (ಪರಶುರಾಮ) (17) ಮತ್ತು ಸಿದ್ದಪ್ಪ (20) ಎಂಬ ಯುವಕರು ಗ್ರಾಮದ ಸಮೀಪ ಹರಿಯುಯುವ ಭೀಮಾ ನದಿಯಲ್ಲಿ ನೀರುಪಾಲಾಗಿದ್ದಾರೆ. ಜಾನುವಾರಿಗೆ ನೀರು ಕುಡಿಸಲು ನದಿಗಿಳಿದಾಗ ಪ್ರವಾಹದೊತ್ತಡಕ್ಕೆ ಸಿಲುಕಿ ಕೊಚ್ಚಿಹೊಗಿದ್ದಾರೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ವಡಗೇರಾ ತಹಸಿಲ್ದಾರರು, ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಈ ಇಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ. ನುರಿತ ಈಜುಗಾರರು ಹಾಗೂ ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚಾರಣೆ ನಡೆಸಿದ್ದಾರೆ.
ಮಕ್ಕಳು ನೀರುಪಾಲಾದ ಸುದ್ದಿ ಕೇಳಿ ನದಿದಡಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಮೋಡ ಕವಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆಯ ಸಿಂಚನದ ಮಧ್ಯೆ ಶೋಧಕ್ಕಾಗಿ ಹರಸಾಹಸ ನಡೆದಿತ್ತು. ಈ ಮಧ್ಯೆ, ಈ ಅವಘಡದಲ್ಲಿ ಮೊಮ್ಮಗ ರಮೇಶ (ರಾಮು) ನೀರುಪಾಲಾದ ಸುದ್ದಿ ಕೇಳಿ ಆಘಾತಕ್ಕೊಳಗಾದ ಆತನ ಅಜ್ಜ ಸಿದ್ದಣ್ಣ ಕಣ್ಣೀರಿಡುತ್ತ ನದಿಗೆ ಹಾರಲು ಮುಂದಾಗಿದ್ದರು.
