ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು
ಟಿಂಬರ್ ಲಾರಿಗೆ ಹಿಂಬದಿಯಿಂದ ಹೊಂಡಸಿಟಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಮೂವರಿಗೆ ಗಾಯವಾಗಿರುವ ಘಟನೆ ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಚನ್ನಪಟ್ಟಣ (ಜೂ.15): ಟಿಂಬರ್ ಲಾರಿಗೆ ಹಿಂಬದಿಯಿಂದ ಹೊಂಡಸಿಟಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಮೂವರಿಗೆ ಗಾಯವಾಗಿರುವ ಘಟನೆ ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕಾರಿನ ಚಾಲಕ ಕೃಷ್ಣಮೂರ್ತಿ (57), ನಿಧಿ (13), ನಿಶಾ(20) ಮೃತರು. ಬೆಂಗಳೂರಿನ ಯಲಹಂಕದ ವಿದ್ಯಾರಣ್ಯಪುರ ಮೂಲದ ಶ್ರೀನಿವಾಸ್‌ಮೂರ್ತಿ ಕುಟುಂಬದವರು ಮದುವೆಗೆಂದು ಮೈಸೂರಿನ ಎಚ್.ಡಿ.ಕೋಟೆಗೆ ಹೋಗಿದ್ದರು.
ಮದುವೆ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಹಿಂದಿರುಗುವಾಗ ಚನ್ನಪಟ್ಟಣದ ದೇವರಹೊಸಹಳ್ಳಿ ಬಳಿಯ ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಮುಂದೆ ಹೋಗುತ್ತಿದ್ದ ಟಿಂಬರ್ ತುಂಬಿದ್ದ ಲಾರಿಗೆ ಹಿಂಬದಿಯಿಂದ ಇವರು ಚಲಿಸುತ್ತಿದ್ದ ಹೊಂಡ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ 6 ಮಂದಿಯಲ್ಲಿ ಮೂವರು ಸ್ಥಳದಲ್ಲೆ ಮೃತಪಟ್ಟರೆ, ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಇಬ್ಬರಿಗೆ ಗಂಭೀರ ಗಾಯವಾಗಿದೆ. ಕಾರು ಟಿಂಬರ್ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯ ಹಿಂಬದಿಗೆ ಕಚ್ಚಿಕೊಂಡಿದ್ದು, ಕಾರಿನ ಬ್ಯಾನೆಟ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬಿಟ್ಟಿ ಯೋಜನೆಗೆ ಹಣಕಾಸನ್ನು ಹೇಗೆ ಹೊಂದಿಸ್ತೀರಿ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಅಪಘಾತದ ತೀವ್ರತೆಗೆ ಚಾಲಕ ಕೃಷ್ಣಮೂರ್ತಿಯ ದೇಹ ಲಾರಿಯ ಹಿಂಬದಿಗೆ ಸಂಪೂರ್ಣವಾಗಿ ಕಚ್ಚಿಕೊಂಡಿದ್ದು, ಪೊಲೀಸರು ಮೃತದೇಹವನ್ನು ಹರಸಾಹಸಪಟ್ಟು ಹೊರಕ್ಕೆ ತೆಗೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ವನಜಾ, ಶ್ರೀನಿವಾಸ್‌ಮೂರ್ತಿ, ಶೋಭಾ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಅಪಘಾತದ ಹಿನ್ನೆಲೆಯಲ್ಲಿ ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಶುಭಾಂಭಿಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.