ಬೆಂಗಳೂರು(ಆ.01): ಕೊರೋನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಮಾರ್ಗಸೂಚಿ ಪ್ರಕಾರ ಪ್ರಸಕ್ತ ಸ್ವಾತಂತ್ರ್ಯ ದಿನಾಚರಣೆಯನ್ನೂ ಸರಳ ಹಾಗೂ ಸುರಕ್ಷಿತವಾಗಿ ಆಚರಿಸಲು ನಿರ್ಧರಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥಸಂಚಲನಕ್ಕೆ ಅವಕಾಶ ನೀಡುವುದಿಲ್ಲ. ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಸೀಮಿತ ಆಹ್ವಾನಿತರಿಗೆ ಪ್ರತಿಯೊಬ್ಬರಿಗೂ ರಾರ‍ಯಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ ಕೊರೋನಾ ಸೋಂಕು ಪರೀಕ್ಷೆ ನಡೆಸಿಯೇ ಪ್ರವೇಶಕ್ಕೆ ಅನುಮತಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಹೇಳಿದ್ದಾರೆ.

ಆಗಸ್ಟ್‌ 15ರಂದು ಬೆಂಗಳೂರಿನ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ಸ್ವಾತಂತ್ರ್ಯ ದಿನಾಚರಣೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯಕ್ರಮ ರೂಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಆಗಸ್ಟ್‌ 15ರಂದು ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವೇಳೆ ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆ ಜೊತೆಗೆ ಎರಡು ಭಕ್ತಿಗೀತೆಗಳ ಗಾಯನ ಮಾತ್ರ ಇರಲಿದೆ. ಬಳಿಕ ಮುಖ್ಯಮಂತ್ರಿ ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಅನ್‌ಲಾಕ್ 3.O: ಬಾರ್&ರೆಸ್ಟೋರೆಂಟ್‌ ಓಪನ್‌ಗೆ ಇಲ್ಲ ಅವಕಾಶ..!

ಸಾರ್ವಜನಿಕರಿಗೆ ನಿರ್ಬಂಧ:

ಪ್ರತಿ ವರ್ಷ ಸುಮಾರು ಐದಾರು ಸಾವಿರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ಇರುತ್ತಿತ್ತು. ಸಾವಿರಾರು ಸಾರ್ವಜನಿಕರು ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಈ ಬಾರಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಪರೇಡ್‌ ಹಾಗೂ ಪಥ ಸಂಚಲನಕ್ಕೂ ಅವಕಾಶವಿಲ್ಲ. ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೂ ಪ್ರವೇಶ ನೀಡುತ್ತಿಲ್ಲ.

ಬದಲಿಗೆ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ 75 ಮಂದಿ ಕೊರೋನಾ ಯೋಧರು, ಸೋಂಕಿನಿಂದ ಹೋರಾಡಿ ಗುಣಮುಖರಾದ 25 ಮಂದಿಯನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಇದಲ್ಲದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ 200 ಮಂದಿ ಮಾತ್ರ ಭಾಗಹಿಸಲಿದ್ದಾರೆ. ಧ್ವಜಾರೋಹಣದ ವೇಳೆ ಹೆಲಿಕಾಪ್ಟರ್‌ನಿಂದ ಹೂ ಮಳೆ ಸುರಿಸುವುದಿಲ್ಲ. ವಾಡಿಕೆಯಂತೆ ಮುಖ್ಯಮಂತ್ರಿಗಳಿಗೆ ಪೊಲೀಸ್‌ ಅವರಿಂದ ಗೌರವ ವಂದನೆ ಇರುತ್ತದೆ. ಈ ವೇಳೆ ಎಷ್ಟು ಮಂದಿ ಪೊಲೀಸರು ಭಾಗವಹಿಸಲಿದ್ದಾರೆ ಎಂಬುದನ್ನು ನಗರ ಪೊಲೀಸ್‌ ಆಯುಕ್ತರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಕೊರೋನಾ ಪರೀಕ್ಷೆ

ಕೊರೋನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮಾಡಲಾಗುವುದು. ಇದಕ್ಕಾಗಿ ಮೈದಾನದ ಆವರಣದಲ್ಲಿ ಕಿಯೋಸ್ಕ್‌ಗಳನ್ನು ತೆರೆಯಲಾಗುವುದು. ವೇದಿಕೆ ಸೇರಿದಂತೆ ಕಾರ್ಯಕ್ರಮ ಪ್ರತಿ ಹಂತದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಸ್ಯಾನಿಟೈಸಿಂಗ್‌, ಥರ್ಮಲ್‌ ಸ್ಕ್ಯಾ‌ನಿಂಗ್‌, ಪಲ್ಸ್‌ ಆಕ್ಸಿಮೀಟರ್‌ ಪರೀಕ್ಷೆಗಳ ಬಳಿಕ ಮೈದಾನಕ್ಕೆ ಪ್ರವೇಶ ಕಲ್ಪಿಸಲಾಗುವುದು. ಮಾಧ್ಯಮದವರಿಗೆ ಕಾರ್ಯಕ್ರಮ ವರದಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಅವರು ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.