Karnataka Election 2023: ಈ ಸಲದ ಸ್ಪೆಷಲ್‌: ಚಿಲ್ಲಿ, ಪೇಡೆ, ಕಾಫಿ, ಏಲಕ್ಕಿ ಮತಗಟ್ಟೆ

ಗಿರಿಜನರ ಆಕರ್ಷಿಸಲು 40 ಕಡೆ ಸಾಂಪ್ರದಾಯಿಕ ಮತಗಟ್ಟೆ, ಮಾಲೂರಲ್ಲಿ ಶಿಲ್ಪಕಲಾ ಮತಗಟ್ಟೆಸ್ಥಾಪನೆ, ಮತದಾರರ ಸೆಳೆಯಲು ಕಸರತ್ತು

This Time Chili Pede Coffee Cardamom Booth during Karnataka Assembly Election 2023 grg

ಬೆಂಗಳೂರು(ಮೇ.10): ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಹಾಗೂ ಮತದಾನದ ದಿನವನ್ನು ಪ್ರಜಾಪ್ರಭುತ್ವದ ಹಬ್ಬದಂತೆ ಆಚರಿಸುವ ಉದ್ದೇಶದಿಂದ ರಾಜ್ಯದಲ್ಲಿ ಈ ಬಾರಿ ಎಲ್ಲೆಡೆ ಹಲವು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರಿಗಾಗಿ ಮತ್ತು ಅಂಗವಿಕಲರಿಗಾಗಿ ವಿಶೇಷ ಮತಗಟ್ಟೆಗಳ ಜತೆಗೆ ಈ ಬಾರಿ ಆಯಾ ಭಾಗದ ಸಾಂಸ್ಕೃತಿಕ, ಪಾರಂಪರಿಕ, ಪ್ರಾಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಮತಗಟ್ಟೆಗಳನ್ನೂ ಸ್ಥಾಪಿಸಲಾಗಿದೆ

ಕೊಡಗಿನಲ್ಲಿ ಕಾಫಿ ಮತಗಟ್ಟೆ, ಧಾರವಾಡಲ್ಲಿ ಆ ಭಾಗದ ಖ್ಯಾತ ಸಿಹಿತಿನಿಸಾದ ಪೇಡೆ ಮತಗಟ್ಟೆಸೇರಿ ಗ್ರಾಮೀಣ ಸೊಗಡಿನ ಪರಿಸರ ಸ್ನೇಹಿ, ಸಾಂಪ್ರದಾಯಿಕ, ಪಾರಂಪರಿಕ ಮತಗಟ್ಟೆಗಳ ಮೂಲಕ ರಾಜ್ಯದೆಲ್ಲೆಡೆ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ವಿಶೇಷ ಪ್ರಯತ್ನ ನಡೆಸಿದೆ. ಪ್ರತಿ ಜಿಲ್ಲೆಯಲ್ಲೂ ಸ್ಥಳೀಯ ವೈಶಿಷ್ಟ್ಯವನ್ನು ನೋಡಿಕೊಂಡು ಈ ರೀತಿಯ ಮತಗಟ್ಟೆಗಳನ್ನೂ ಸ್ಥಾಪಿಸಲಾಗಿದೆ. ಇದರ ಜತೆಗೆ ಮಹಿಳೆಯರಿಗಾಗಿ ಸಖಿ, ಯುವಜನರನ್ನು ಆಕರ್ಷಿಸಲು ಪ್ರತ್ಯೇಕ ಮತಗಟ್ಟೆಗಳನ್ನೂ ಆಯಾ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ.

ಕಡ್ಡಾಯವಾಗಿ ಮತಚಲಾಯಿಸಲು ಮನವಿ

ಸಾಂಪ್ರದಾಯಿಕ ಮತಗಟ್ಟೆ: ಗಿರಿಜನ ಮತದಾರರು ಹೆಚ್ಚಿನ ಪ್ರಮಾಣದಲ್ಲಿರುವ ರಾಜ್ಯದ 9 ಜಿಲ್ಲೆಗಳ 40 ಕಡೆ ವಿಶೇಷ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚಾಮರಾಜನಗರ, ಮೈಸೂರಲ್ಲಿ ಇಂಥ ತಲಾ 9 ಮತಗಟ್ಟೆಸ್ಥಾಪಿಸಿದರೆ, ಉತ್ತರ ಕನ್ನಡದಲ್ಲಿ ಇಂಥ 5 ಮತಗಟ್ಟೆಗಳಿವೆ. ಗಿರಿಜನರ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಮಾದರಿಯಲ್ಲಿ ಮತಗಟ್ಟೆ ನಿರ್ಮಾಣವಾಗಿದೆ.

ಚಿಲ್ಲಿ ಬೂತ್‌: 

ಬ್ಯಾಡಗಿ ಮೆಣಸಿಗೆ ಹೆಸರುವಾಸಿಯಾಗಿರುವ ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೋಟೆಬೆನ್ನೂರಿನ ಮತಗಟ್ಟೆಸಂಖ್ಯೆ 80ರಲ್ಲಿ ಚಿಲ್ಲಿ ಬೂತ್‌ ನಿರ್ಮಿಸಲಾಗಿದೆ. ಮೆಣಸಿನಕಾಯಿ ಬೆಳೆಯುವ ರೈತ ಸೇರಿ ಮಾರುಕಟ್ಟೆಯ ದೃಶ್ಯಗಳನ್ನು ಇಲ್ಲಿ ಬಿಂಬಿಸಲಾಗಿದೆ.

ಪ್ರವಾಸಿ ತಾಣಗಳ ಮತಗಟ್ಟೆ: ವಿಜಯಪುರದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಬಿಂಬಿಸುವ ಪ್ರಯತ್ನದ ಭಾಗವಾಗಿ ನಗರದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಮತಗಟ್ಟೆಸಂಖ್ಯೆ57 ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಮತಗಟ್ಟೆಯಲ್ಲಿ ಮತದಾರರು ಹೆಜ್ಜೆ ಇಡುತ್ತಿದ್ದಂತೆ ಐತಿಹಾಸಿಕ ಸ್ಮಾರಕಗಳ ಪ್ರದೇಶಕ್ಕೆ ಬಂದ ಅನುಭವ ಆಗುತ್ತದೆ. ವಿಶ್ವವಿಖ್ಯಾತ ಗೋಳಗುಮ್ಮಟ, ಬಾರಾಕಮಾನ್‌, ಇಬ್ರಾಹಿಂರೋಜಾ ಸೇರಿ ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಮಾರಕಗಳ ಭಾವಚಿತ್ರಗಳನ್ನು ಇಲ್ಲಿ ಆಕರ್ಷಕವಾಗಿ ಪ್ರದರ್ಶಿಸಲಾಗಿದೆ.

ಪರಿಸರ ಸ್ನೇಹಿ ಮತಗಟ್ಟೆ:

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕೊಡಿಯಾಲ ಗ್ರಾಪಂ ಆವರಣದಲ್ಲಿ ಪರಿಸರ ಸ್ನೇಹಿ ಮತಗಟ್ಟೆಎಲ್ಲರ ಗಮನ ಸೆಳೆಯುತ್ತಿದೆ. ಮತಗಟ್ಟೆಸಂಖ್ಯೆ 197 ಅನ್ನು ಅಕ್ಷರಶಃ ಮದುವೆ ಮನೆಯಂತೆ ಸಿಂಗರಿಸಲಾಗಿದೆ. ಮತಗಟ್ಟೆಯ ಹೊರ ಆವರಣದ ಗೋಡೆ ಮೇಲೆ ಆಕರ್ಷಕ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಮತಗಟ್ಟೆಚಾವಣಿಗೆ ಭತ್ತದ ಹುಲ್ಲಿನ ಹೊದಿಕೆ ಹಾಕಿ, ಹುಲ್ಲಿನ ತೋರಣ, ಮಣ್ಣಿನ ಮಡಿಕೆಗಳಿಗೆ ಅಲಂಕಾರ, ಮತಗಟ್ಟೆಗೆ ಬಂದವರ ಬಿಸಿಲಿನ ದಾಹ ನೀಗಿಸಲು ಮಣ್ಣಿನ ಸೋರೆಯಲ್ಲಿ ಕುಡಿಯುವ ನೀರು ಪೂರೈಕೆ, ಮತಗಟ್ಟೆಎರಡೂ ಬದಿ ರಾಗಿ ಸಸಿಯ ಹಸಿರು ಹಾಸಿಗೆ, ಭತ್ತ ಹಾಗೂ ಜೋಳದ ರಾಶಿ ಹಾಕಿ ಕಬ್ಬಿನ ದಂಟನ್ನು ನಿಲ್ಲಿಸಲಾಗಿದೆ. ಹಳೆಯ ಕಾಲದ ಗೃಹ ಉಪಯೋಗಿ ಸಾಮಗ್ರಿಗಳನ್ನು ಅಲ್ಲಲ್ಲಿ ಇಟ್ಟು ಆಕರ್ಷಣೀಯಗೊಳಿಸಲಾಗಿದೆ.

ಧಾರವಾಡ ಪೇಡೆ ಮತಗಟ್ಟೆ: 

ಪೇಡೆಗೆ ಹೆಸರುವಾಸಿಯಾದ ಧಾರವಾಡದಲ್ಲಿ ನಗರದ ಪ್ರಸೆಂಟೇಶನ್‌ ಶಾಲೆಯ ಮತಗಟ್ಟೆ15ರಲ್ಲಿ ಧಾರವಾಡ ಪೇಡೆಯನ್ನು ಬಿಂಬಿಸುವ ಮತಗಟ್ಟೆರೂಪಿಸಲಾಗಿದೆ. ಧಾರವಾಡದಲ್ಲಿ ಹಲವು ಸಂಸ್ಥೆಗಳ ಪೇಡೆ ಉದ್ಯಮಗಳಿವೆ. ಆದರೆ, ಐತಿಹಾಸಿಕ ಹಿನ್ನಲೆಯುಳ್ಳ ಬಾಬುಸಿಂಗ್‌ ಠಾಕೂರ್‌ ಪೇಡೆ ಮಾತ್ರ ಹೆಚ್ಚು ಖ್ಯಾತಿ. ಹೀಗಾಗಿ ನಗರದ ಲೈನ್‌ ಬಜಾರ್‌ ಬಾಬುಸಿಂಗ್‌ ಪೇಡೆ ಅಂಗಡಿ ಚಿತ್ರ ಹಾಗೂ ಅಲ್ಲಿ ಮಾರಾಟವಾಗುವ ಪೇಡೆಗಳ ಚಿತ್ರಗಳು, ಫ್ಲೆಕ್ಸ್‌ಗಳ ಮೂಲಕ ಈ ಮತಗಟ್ಟೆರೂಪಿಸಲಾಗಿದೆ.

ಮತದಾನ ಮುಕ್ತಾಯವಾಗುವವರೆಗೆ ಪ್ರತಿಬಂಧಕಾಜ್ಞೆಯ ಜಾರಿ

ಕಾಫಿ ಮತಗಟ್ಟೆ: 

ಕೊಡಗಿನ ತಿತಿಮತಿಯಲ್ಲಿ ಮತಗಟ್ಟೆಯೊಂದನ್ನು ಕಾಫಿ ಥೀಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ವಿಶಾಂತಿ ಕೋಣೆಯಲ್ಲಿ 10 ರುಪಾಯಿಗೆ ಕಾಫಿ ವ್ಯವಸ್ಥೆಯೂ ಇದೆ.

ಶಿಲ್ಪಕಲಾ ಮತಗಟ್ಟೆ: ಶಿಲ್ಪಕಲೆಯ ತವರೂರಾದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಗ್ರಾಪಂನ 11ನೇ ಮತಗಟ್ಟೆಯನ್ನು ‘ಶಿಲ್ಪಕಲಾ ಮತಗಟ್ಟೆ’ಯನ್ನಾಗಿ ನಿರ್ಮಿಸಲಾಗಿದೆ. ತಾಲೂಕಿನ ಶಿಲ್ಪಕಲೆಯನ್ನು ಶ್ರೀಮಂತಿಕೆಯನ್ನು ಬಿಂಬಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ.

Latest Videos
Follow Us:
Download App:
  • android
  • ios