ಕಡ್ಡಾಯವಾಗಿ ಮತಚಲಾಯಿಸಲು ಮನವಿ
ಮತದಾನ ಪ್ರಮುಖ ಹಕ್ಕಾಗಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಪ್ರಜಾಪಾರ್ಟಿ ರೈತಪರ್ವದ ರಾಜ್ಯಾಧ್ಯಕ್ಷ ಶಿವಣ್ಣ ಮನವಿ ಮಾಡಿದರು.
ಮೈಸೂರು : ಮತದಾನ ಪ್ರಮುಖ ಹಕ್ಕಾಗಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಪ್ರಜಾಪಾರ್ಟಿ ರೈತಪರ್ವದ ರಾಜ್ಯಾಧ್ಯಕ್ಷ ಶಿವಣ್ಣ ಮನವಿ ಮಾಡಿದರು.
ಈ ಮೊದಲು ಮತದಾನದ ಹಕ್ಕು ಕೆಲವರಿಗೆ ಮಾತ್ರ ನೀಡಬೇಕು ಎಂಬ ವಾದವಿತ್ತು. ಆದರೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ 18 ವರ್ಷ ಮೀರಿದ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ. ಹೀಗಾಗಿ ಅರ್ಹರು ಯಾವುದೆ ಆಮಿಷಗಳಿಗೆ ಒಳಗಾಗದೆ ಜವಾಬ್ದಾರಿಯುತ ನಾಗರೀಕರಾಗಿ ಅರ್ಹರನ್ನು ಆಯ್ಕೆ ಮಾಡಬೇಕು. ಈ ವೇಳೆ ಯಾವುದೇ ಪ್ರಲೋಭನೆಗೆ ಒಳಗಾಗುವುದು ಬೇಡ ಎಂದು ಮನವಿ ಮಾಡಿದರು. ಪದಾಧಿಕಾರಿಗಳಾದ ಮಂಜುನಾಥ್, ಮಂಜುನಾಥ್ ರಾಯ್ಕರ್, ಸ್ಟೀಫನ್ ಜೋಸೆಫ್ ಇದ್ದರು.
ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆ
ಕೆ.ಆರ್. ನಗರ : ಮೇ 10 ರಂದು ಬುಧವಾರ ನಡೆಯಲಿರುವ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ 250 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ ಸಾಲಿಗ್ರಾಮ, ಬ್ಯಾಡರಹಳ್ಳಿ, ಕಾಟ್ನಾಳು ಮತ್ತು ಹಂಪಾಪುರ ಗ್ರಾಮಗಳಲ್ಲಿ ಸಖಿ ಪಿಂಕ್ ಬೂತ್, ಅರಕೆರೆ ಗ್ರಾಮದಲ್ಲಿ ಗ್ರೀಬ್ ಬೂತ್, ಸಾಲಿಗ್ರಾಮದ 229ನೇ ಮತಗಟ್ಟೆಯಲ್ಲಿ ಸಾಂಪ್ರಾದಾಯಿಕ ಯತ್ನಿಕ್ ಬೂತ್, ಕಂಚಿನಕೆರೆಯಲ್ಲಿ ಯಂಗ್ ಬೂತ್ ಮತ್ತು ಹೆಬ್ಬಾಳು ಗ್ರಾಮದಲ್ಲಿ ವಿಕಲ ಚೇತನರ ಬೂತ್ ತೆರೆಯಲಾಗಿದೆ.
ಈಗಾಗಲೆ 150 ಬೂತ್‌ಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, 250 ಬೂತ್‌ಗಳಲ್ಲಿ 31 ಸೂಕ್ಷ್ಮ ಮತ್ತು 13 ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದ್ದು ಎಲ್ಲಾ ಬೂತ್‌ಗಳಿಗೂ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಸುಪ್ರಿಯಬಾಣಗಾರ್ ತಿಳಿಸಿದ್ದಾರೆ.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ 2,17,786 ಮತದಾರರಿದ್ದು, ಅವರಲ್ಲಿ 1,08,118 ಪುರುಷರು ಮತ್ತು 1,09,649 ಮಂದಿ ಮಹಿಳೆಯರು ಹಾಗೂ 19 ಇತರ ಮತದಾರರು ಇದ್ದಾರೆ.
ಮಂಗಳವಾರ ಕೆ.ಆರ್. ನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಾಮಗ್ರಿಗಳ ವಿತರಣಾ ಕೇಂದ್ರದಿಂದ ಇವಿಎಂ ಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ನೇಮಕವಾದ ಸಿಬ್ಬಂದಿ ಸೂಕ್ತ ಭದ್ರತೆಯೊಂದಿಗೆ ತೆರಳಿದರು.
ಮಧುಮಗಳನಂತೆ ಸಿಂಗಾರಗೊಂಡ ಮತಗಟ್ಟೆಕೇಂದ್ರ
ರಾವಂದೂರು: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಖಿ ಮತಗಟ್ಟೆಕೇಂದ್ರವು ಮಧುಮಗಳನಂತೆ ಕಂಗೊಳಿಸುತ್ತಿದೆ. ವಿಶೇಷ ಹಸಿರು ತೋರಣಗಳಿಂದ ಚಪ್ಪರ ಹಾಕಿ ಶುಭ ಕಾರ್ಯಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ವಾತಾವರಣದಂತೆ ಮತಗಟ್ಟೆಕೇಂದ್ರಗಳು ಕಂಗೊಳಿಸುತ್ತಿದ್ದು, ಗ್ರಾಮಪಂಚಾಯಿತಿ ವತಿಯಿಂದ ಎಲ್ಲ ಮತಗಟ್ಟೆಕೇಂದ್ರದಿಂದ ಮತದಾರರನ್ನು ಸ್ವಾಗತಿಸಲು ವಿಶೇಷವಾಗಿ ಅಲಂಕರಿಸಲಾಗಿದೆ. ಪಿಡಿಒ ಮಲ್ಲೇಶ್, ಕಾರ್ಯದರ್ಶಿ ಬಸವರಾಜು, ಬಿಎಲ್‌ಒ ರಾಜಮ್ಮಣಿ ಹಾಗೂ ಗ್ರಾಪಂ ನೌಕರರು ಇದ್ದರು.