Third language mandatory: ಕರ್ನಾಟಕದಲ್ಲಿ 70ರ ದಶಕದಿಂದ ಜಾರಿಯಲ್ಲಿರುವ ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳ ಮೇಲೆ ಅನಗತ್ಯ ಹೊರೆಯಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರವಿದ್ದು, ಹಿಂದಿ ಕಲಿಕೆಯಿಂದ ಉದ್ಯೋಗ ಸಿಗುತ್ತದೆ ಎಂಬುದು ಸುಳ್ಳೆಂದು ಲೇಖನವು ಪ್ರತಿಪಾದಿಸುತ್ತದೆ. 

ಲಿಂಗರಾಜು ಕೋರಾ

ಕರ್ನಾಟಕದಲ್ಲಿ 70ರ ದಶಕದ ನಂತರ ಶಾಲಾ ಶಿಕ್ಷಣದಲ್ಲಿ ಅನಗತ್ಯವಾಗಿ ತ್ರಿಭಾಷಾ ಸೂತ್ರ ಜಾರಿಗೊಳಿಸಿ ಮಕ್ಕಳಿಗೆ ತೃತೀಯ ಭಾಷೆಯ ಹೊರೆ ಹೊರಿಸುತ್ತಾ ಬರಲಾಗುತ್ತಿದೆ. ಕರ್ನಾಟಕ ಸೇರಿ ದೇಶದ ಕೆಲವೇ ರಾಜ್ಯಗಳಲ್ಲಿ ಮಾತ್ರ 3ನೇ ಭಾಷೆಯ ಅಧ್ಯಯನ ಕಡ್ಡಾಯ ಮಾಡಲಾಗಿದೆ.

ದೇಶದ ವಿವಿಧ ರಾಜ್ಯಗಳ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿದರೆ ದೆಹಲಿ, ಗುಜರಾತ್‌ ಸೇರಿ ಉತ್ತರದ ಬಹುತೇಕ ರಾಜ್ಯಗಳ ಶಿಕ್ಷಣ ವ್ಯವಸ್ಥೆಯಲ್ಲಿ ತ್ರಿಭಾಷಾ ಸೂತ್ರವಿಲ್ಲ. ಅಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಅನ್ನು ಮಾತ್ರ ಪ್ರಥಮ ಹಾಗೂ ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. ಅಷ್ಟೇ ಏಕೆ ತಮಿಳುನಾಡು, ಪಶ್ಚಿಮ ಬಂಗಾಳದಲ್ಲೂ ವಿದ್ಯಾರ್ಥಿಗಳಿಗೆ ತೃತೀಯ ಭಾಷಾ ಅಧ್ಯಯನದ ಹೊರೆಯೇ ಇಲ್ಲ. ಇನ್ನು ಗೋವಾ ಮತ್ತಿತರ ಕೆಲ ರಾಜ್ಯಗಳಲ್ಲಿ ತೃತೀಯ ಭಾಷೆ ಇದ್ದರೂ ಕಡ್ಡಾಯ ಅಲ್ಲ. ವಿದ್ಯಾರ್ಥಿಗೆ ಇಷ್ಟವಿದ್ದರೆ ಕಲಿಯಬಹುದು, ಬೇಡದಿದ್ದರೆ ಬಿಡಬಹುದು. ಇನ್ನು, ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲೂ ಸದ್ಯದವರೆಗೆ ಮೂರನೇ ಭಾಷೆಯ ಅಧ್ಯಯನ ವಿದ್ಯಾರ್ಥಿಗಳ ಇಚ್ಛೆಗೆ ಬಿಟ್ಟಿದ್ದೇ ಹೊರತು ಓದಲೇ ಬೇಕು, ಪಾಸ್‌ ಆಗಬೇಕೆಂಬ ನಿಯಮವಿಲ್ಲ ಎನ್ನುತ್ತಾರೆ ಶಿಕ್ಷಣ ತಜ್ಞರು ಹಾಗೂ ಕನ್ನಡರ ಹೋರಾಟಗಾರರು.

ಹೀಗಿರುವಾಗ ಕರ್ನಾಟಕದ ಮಕ್ಕಳಿಗೆ ಮಾತ್ರ ಕಳೆದ ನಾಲ್ಕು ದಶಕಗಳಿಂದ ಸರ್ಕಾರಗಳು ಯಾವ ತಪ್ಪಿಗಾಗಿ ಮೂರನೇ ಭಾಷೆಯ ಹೊರೆ ಹೊರಿಸುತ್ತಾ ಬರಲಾಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ ಎನ್ನುವುದು ಕನ್ನಡಿಗರನ್ನು ಕಾಡುತ್ತಿರುವ ಬಹುಕಾಲದ ಪ್ರಶ್ನೆ.

ಉದ್ಯೋಗಕ್ಕೆ ಬೇಕಾದ ಭಾಷೆ ಅಲ್ಲ:

ಹಿಂದಿ ಒಂದು ಕಡೆ ಉದ್ಯೋಗಕ್ಕೆ ಬೇಕಾದ ಭಾಷೆಯೂ ಅಲ್ಲ. ಉತ್ತರ ರಾಜ್ಯಗಳಿಗೆ ಕನ್ನಡಿಗರು ವಲಸೆ ಹೋಗುವುದು ಕಡಿಮೆಯೇ. ಇವತ್ತು ಉದ್ಯೋಗ ಸಿಗುತ್ತಿರುವುದು ತಾಂತ್ರಿಕ ಪರಿಣಿತಿ ಮತ್ತು ಇಂಗ್ಲಿಷ್‌ ಭಾಷಾ ನೈಪುಣ್ಯತೆ ಕಾರಣದಿಂದ. ಆದರೆ, ಹಿಂದಿ ಓದಿದರೆ ಬ್ಯಾಂಕ್‌, ಕೇಂದ್ರ ಸರ್ಕಾರದ ಉದ್ಯೋಗ ಸಿಗುತ್ತದೆ ಎಂದು ಅಪಪ್ರಚಾರ ಮಾಡುತ್ತಲೇ ಎಲ್ಲೆಡೆ ಹಿಂದಿ ಕಲಿಸುವ ಹುನ್ನಾರ ಆರಂಭವಾಯಿತು. ಅದು ಇಲ್ಲಿವರೆಗೂ ಮುಂದುವರೆಯುತ್ತಲೇ ಬಂದಿದೆ. ಕರ್ನಾಟಕದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಲೇ ಬರುತ್ತಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಒಂದು ಕಾಲಕ್ಕೆ 2000ಕ್ಕೂ ಹೆಚ್ಚಿದ್ದ ರಾಜ್ಯದ ಅಧಿಕಾರಿಗಳು, ಸಿಬ್ಬಂದಿ ಸಂಖ್ಯೆ ಇಂದು 100ರ ಗಡಿ ದಾಟುವುದಿಲ್ಲ. ಬದಲಿಗೆ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಬಂದ, ಬರುತ್ತಿರುವ ಲಕ್ಷಾಂತರ ಹಿಂದಿ ವಲಸಿಗರಿಗೆ ನಮ್ಮ ಉದ್ಯೋಗಗಳನ್ನೂ ನೀಡುವುದಲ್ಲದೆ ಇಲ್ಲಿ ಸುಲಭವಾಗಿ ವ್ಯವಹರಿಸಲು, ನೆಲೆ ಕಂಡುಕೊಳ್ಳಲು ಕನ್ನಡಿಗರು ಕಲಿತ ಹಿಂದಿ ಹೆಚ್ಚಾಗಿ ಉಪಯೋಗವಾಗುತ್ತಿದೆ ಅಷ್ಟೆ ಎಂಬುದು ಕನ್ನಡಿಗರ ಕಳವಳ.

ಹಿಂದೆ ರಾಜ್ಯದಲ್ಲಿ ತೃತೀಯ ಭಾಷೆ ಹೊರೆ ಇರಲಿಲ್ಲ. 70ರ ದಶಕದಲ್ಲಿ ಶುರುವಾಯಿತು. ನಂತರ ಕೇಂದ್ರ ಸರ್ಕಾರದಲ್ಲಿ, ಬ್ಯಾಂಕುಗಳಲ್ಲಿ ಉದ್ಯೋಗ ಸಿಗುತ್ತವೆ ಎಂಬ ಅಪಪ್ರಚಾರದಿಂದ 80ರ ದಶಕದ ನಂತರ ತೃತೀಯ ಭಾಷೆಯಾಗಿ ಹಿಂದಿಯನ್ನೇ ಕಲಿಸುವ ಪದ್ಧತಿ ಆರಂಭವಾಗಿ ಇಂದಿಗೂ ಮುಂದುವರೆದಿದೆ. ಇದು ಸರಿಯಿಲ್ಲ. ರಾಜ್ಯ ಸರ್ಕಾರ ಈಗ ಕೈಗೊಂಡಿರುವ ನಿರ್ಧಾರ ಜಾರಿಗೊಳಿಸಿ ಶಿಕ್ಷಣದಲ್ಲಿ ಸಮಾನತೆ ತರಬೇಕಿದೆ. ಇಲ್ಲವೇ 10,000ಕ್ಕೂ ಹೆಚ್ಚು ಜನ ಮಾತನಾಡುವ ದೇಶದ ಎಲ್ಲಾ 27ಕ್ಕೂ ಹೆಚ್ಚು ಪ್ರಮುಖ ಭಾಷೆಗಳನ್ನು ಭಾರತದ ಎಲ್ಲಾ ಶಾಲೆಗಳಲ್ಲೂ ತೃತೀಯ ಭಾಷೆಯಾಗಿ ಕಲಿಸಲು ಸ್ಪಷ್ಟ ಶಿಕ್ಷಣ ನೀತಿ ಜಾರಿಗೆ ತರಬೇಕು.

 ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಉತ್ತರದ ರಾಜ್ಯಗಳೂ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಇಲ್ಲದ ತ್ರಿಭಾಷಾ ಸೂತ್ರ, ತೃತೀಯ ಭಾಷೆ ಹೊರೆಯನ್ನು ನಮ್ಮ ಮಕ್ಕಳ ಮೇಲೆ ಯಾಕೆ ಹೊರಿಸಬೇಕು? ಅದರಲ್ಲೂ ಹಿಂದಿಯನ್ನಷ್ಟೇ ಬಹುತೇಕ ಮಕ್ಕಳು ತೃತೀಯ ಭಾಷೆಯಾಗಿ ಕಲಿಯುವ ಅನಿವಾರ್ಯತೆ ಏಕೆ? ಸರ್ಕಾರ ಈಗ ತೃತೀಯ ಭಾಷಾ ವಿಷಯದಲ್ಲಿ ಗ್ರೇಡಿಂಗ್‌ ಮಾಡಿದೆ. ಮುಂದೆ ರಾಜ್ಯ ಶಿಕ್ಷಣ ನೀತಿ ಶಿಫಾರಸಿನ ಅನುಸಾರ ಸಂಪೂರ್ಣ ದ್ವಿಭಾಷಾ ಸೂತ್ರ ಅಳವಡಿಸಬೇಕು.

ಆನಂದ್‌ ಜಿ., ಅಧ್ಯಕ್ಷ, ಬಸವಾಸಿ ಬಳಗ