ತಾಯಿ ಭುವನೇಶ್ವರಿ ಭಾವಚಿತ್ರದ ವಿಚಾರವಾಗಿ ಇರುವ ಗೊಂದಲಕ್ಕೆ ಸದ್ಯದಲ್ಲೇ ತಾರ್ಕಿಕ ಅಂತ್ಯ ತಾರ್ಕಿಕ ಅಂತ್ಯವೊಂದನ್ನು ಹಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ
ಉಡುಪಿ (ಆ.24): ತಾಯಿ ಭುವನೇಶ್ವರಿ ಭಾವಚಿತ್ರದ ವಿಚಾರವಾಗಿ ಇರುವ ಗೊಂದಲಕ್ಕೆ ಸದ್ಯದಲ್ಲೇ ತಾರ್ಕಿಕ ಅಂತ್ಯವೊಂದನ್ನು ಹಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ. ರಾಜ್ಯಾದ್ಯಂತ ಏಕರೂಪದ ಭುವನೇಶ್ವರಿ ಭಾವಚಿತ್ರ ಬಳಕೆ ಹಾಗೂ ಭುವನೇಶ್ವರಿ ಭಾವಚಿತ್ರ ಹೇಗಿರಬೇಕು ಎಂಬ ಕುರಿತು ಇಲಾಖೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ‘ತಾಯಿ ಭುವನೇಶ್ವರಿ ಭಾವಚಿತ್ರ ಒಂದೊಂದು ಊರಲ್ಲಿ ಒಂದೊಂದು ರೀತಿಯಲ್ಲಿ ಇದೆ. ಭುವನೇಶ್ವರಿಯ ಚಿತ್ರ ರಾಜ್ಯಾದ್ಯಂತ ಒಂದೇ ರೀತಿ ಇರಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಆದಷ್ಟುಬೇಗ ಇತ್ಯರ್ಥಗೊಳಿಸಲಿದ್ದೇವೆ, ಈ ಗೊಂದಲಕ್ಕೆ ಆದಷ್ಟುಬೇಗ ತಾರ್ಕಿಕ ಅಂತ್ಯವೊಂದನ್ನು ನೀಡಲಿದ್ದೇವೆ’ ಎಂದರು.
ರೇಷನ್ ಕಾರ್ಡ್ ಹೊಂದಿರುವ ಎಲ್ಲ ಮನೆಗೂ ವಿದ್ಯುತ್ ಸಂಪರ್ಕ
ನಾಡಗೀತೆ ಅವಧಿ ಕಡಿತ ಕುರಿತು ಶೀಘ್ರ ನಿರ್ಧಾರ
ಉಡುಪಿ: ಕನ್ನಡ ನಾಡಗೀತೆ ಸುದೀರ್ಘವಾಯಿತು, ಅದನ್ನು ಕಡಿತಮಾಡಬೇಕೆಂಬ ಬೇಡಿಕೆಗಳ ಕುರಿತು ಸದ್ಯದಲ್ಲೇ ಸಮಾಲೋಚನೆ ನಡೆಸುವ ಸುಳಿವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ನೀಡಿದ್ದಾರೆ. ‘ನಾಡಗೀತೆಯನ್ನು ಎಷ್ಟುನಿಮಿಷಕ್ಕೆ ಸೀಮಿತಗೊಳಿಸಬೇಕು, ನಾಡಗೀತೆಯ ಸಂಗೀತ ಯಾವ ರೀತಿ ಇರಬೇಕು’ ಎಂಬ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜಯಂತಿಗಳ ಸಂಖ್ಯೆ ಕಡಿತ?
ಉಡುಪಿ: ರಾಜ್ಯದಲ್ಲಿ ಸರ್ಕಾರದಿಂದ ಆಚರಿಸಲಾಗುವ ಜಯಂತಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಭಾವನೆ ಇದೆ. ಶುಕ್ರವಾರ ನಡೆಯಲಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭೆಯಲ್ಲಿ ಜಯಂತಿಗಳ ಸಂಖ್ಯೆ ಕಡಿಮೆಗೊಳಿಸುವ ಬಗ್ಗೆ ವಿಸ್ತೃತ ಚರ್ಚೆ ಮಾಡುತ್ತೇವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವೆ, ಶಿಕ್ಷಣ ಹಾಗೂ ಸಂಬಂಧಿತ ಇತರೆ ಇಲಾಖೆಗಳು ಒಟ್ಟಾಗಿ ಹೆಚ್ಚು ಅರ್ಥಪೂರ್ಣವಾಗಿ ಜಯಂತಿಗಳ ಆಚರಣೆ ನಡೆಸಲು ಒತ್ತು ನೀಡುತ್ತೇವೆ. ಸದ್ಯ ಸ್ವಾತಂತ್ರ್ಯದ ಅಮೃತ ಮಹೋತ್ಸವವೂ ನಡೆಯುತ್ತಿದ್ದು, ಇದನ್ನೂ ಸಂಭ್ರಮದಿಂದ ಆಚರಿಸಬೇಕಿದೆ. ಜನರಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಿಸುವ ಕಾರ್ಯಕ್ರಮ ರೂಪಿಸುತ್ತೇವೆ. ಅಧಿವೇಶನದೊಳಗೆ ಈ ಕುರಿತ ರೂಪುರೇಷೆ ಅಂತಿಮಗೊಳಿಸಲಿದ್ದೇವೆ ಎಂದರು.
