ಬೆಂಗಳೂರು(ಅ.31): ದಸರಾ ಹಬ್ಬದ ವೇಳೆ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ನೇಪಾಳ ಮೂಲದ ಐವರು ಕಳ್ಳರನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ಮಂಗಳ್‌ ಸಿಂಗ್‌, ಮನೋಜ್‌ ಬಹದ್ದೂರ್‌, ಸುದೇವ್‌ ದಾಮಿ, ವಿಶಾಲ್‌ ಮತ್ತು ವಿನೋದ್‌ ಕುಮಾರ್‌ ಬಂಧಿತ ಆರೋಪಿಗಳು. ಇವರಿಂದ 4.5 ಲಕ್ಷ ಮೌಲ್ಯದ 7.5 ಕೆ.ಜಿ ಬೆಳ್ಳಿ, ಒಂದು ಸೋನಿ ಟಿವಿ ಮತ್ತು ಒಂದು ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ. ಹನ್ನೆರಡು ವರ್ಷಗಳಿಂದ ಈ ನೇಪಾಳಿ ಗ್ಯಾಂಗ್‌ ನಗರದಲ್ಲಿ ಮನೆಗಳ್ಳತನ ಕೃತ್ಯದಲ್ಲಿ ತೊಡಗಿದ್ದು, ಅವರ ವಿರುದ್ಧ ಸಂಪಂಗಿರಾಮನಗರ, ಜೆ.ಬಿ.ನಗರ, ಮಲ್ಲೇಶ್ವರ, ಚಂದಾಪುರ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ದಿನಗಳ ಹಿಂದೆ ಸೆಕ್ಯೂರಿಟಿ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು, ಹಣದಾಸೆಗೆ ಮನೆಗಳ್ಳತನ ಮಾಡುತ್ತಿದ್ದರು. ಹಗಲಿನಲ್ಲಿ ಮನೆಯ ಮುಂದಿನ ದೀಪ ಉರಿಯುವುದು, ಗೇಟ್‌ ಹಾಕಿರುವುದು, ಮನೆ ಮುಂದೆ ಪತ್ರಿಕೆ, ಹಾಲಿನ ಪ್ಯಾಕೆಟ್‌ ಬಿದ್ದಿರುವುದು, ರಂಗೋಲಿ ಹಾಕದಿರುವುದನ್ನು ನೋಡಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ರಾತ್ರಿ ವೇಳೆ ಬಂದು ಕಳ್ಳತನ ಮಾಡುತ್ತಿದ್ದರು.

ದಸರಾ ವೇಳೆ ಕಳ್ಳತನ: ಐವರು ನೇಪಾಳಿಗರ ಸೆರೆ