ಬೆಂಗಳೂರು(ಅ.31): ಕಂಟೇನರ್‌ನಡಿ ಸಿಲುಕಿ ಟ್ರಕ್‌ ಸಹಾಯಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ವೈಟ್‌ಫೀಲ್ಡ್‌ ಸಮೀಪದ ಕಂಟೇನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ(ಕಾನ್‌ಕರ್‌) ಆವರಣದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಟಿ.ಹನುಮಂತು(45) ಮೃತರು. ಟ್ರಕ್‌ನೊಂದಿಗೆ ಕಾನ್‌ಕರ್‌ ಘಟಕಕ್ಕೆ ವಸ್ತುಗಳನ್ನು ಸಾಗಿಸಲು ಭಾನುವಾರ ಹನುಮಂತು ಬಂದಿದ್ದಾಗ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಬೃಹತ್‌ ಗಾತ್ರದ ಕಂಟೇನರ್‌ನಡಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಟನೇರ್‌ ಚಾಲಕ ವೆಂಕಟೇಶ್‌ ಜೊತೆಗೆ ಸರಕು ಲೋಡಿಂಗ್‌ಗೆ ಕಾನ್‌ಕರ್‌ಗೆ ಹನುಮಂತು ಬಂದಿದ್ದ. ಆ ವೇಳೆ ಮೇಲ್ವಿಚಾರಕರ ಬಳಿ ಮಾತನಾಡಲು ಚಾಲಕ ತೆರಳಿದ್ದಾಗ ಕಂಟೇನರ್‌ ನಂಬರ್‌ನನ್ನು ಹನುಮಂತು ಗಮನಿಸುತ್ತ ನಿಂತಿದ್ದ. ಆಗ ಘಟಕದಲ್ಲಿ ಕಂಟೇನರ್‌ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ನಲ್ಲಿ ತೊಡಗಿದ್ದ ಕ್ರೇನ್‌ ನಿರ್ವಾಹಕ, ಹನುಮಂತುನನ್ನು ಗಮನಿಸದೆ ದೊಡ್ಡ ಕಂಟೇನರ್‌ವೊಂದನ್ನು ಆತನ ಮೇಲೆ ಇರಿಸಿದ್ದಾನೆ. ಇದರಿಂದ ಕಂಟೇನರ್‌ರಡಿ ಸಿಲುಕಿ ಸಹಾಯಕನ ಮೃತದೇಹ ಅಪ್ಪಚ್ಚಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: 1.5 ಕೋಟಿ ದರೋಡೆ, 11 ಮಂದಿ ಸಿಸಿಬಿ ಬಲೆಗೆ.

ಆದರೆ, ಬೃಹತ್‌ ಗಾತ್ರದ ಕಂಟನೇರ್‌ ಕೆಳಗಿದ್ದ ಕಾರಣ ಮೃತದೇಹ ಯಾರಿಗೂ ಪತ್ತೆಯಾಗಿಲ್ಲ. ಇತ್ತ ಮೇಲ್ವಿಚಾರಕರ ಬಳಿ ಹೋಗಿದ್ದ ಚಾಲಕ ವೆಂಕಟೇಶ್‌, ವಾಪಸ್‌ ಸ್ಥಳಕ್ಕೆ ಬಂದು ಹನುಮಂತುಗೆ ಹುಡುಕಾಡಿದ್ದಾನೆ. ಆದರೆ, ಆತನ ಮೊಬೈಲ್‌ ಸ್ವಿಚ್‌್ಡ ಆಫ್‌ ಆಗಿತ್ತು. ಹೀಗಾಗಿ ಹೇಳದೆ ಆತ ಹೋಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾನೆ. ಕೆಲಸಕ್ಕೆ ತೆರಳಿದ ಪತಿ ಮನೆಗೆ ಬಾರದ ಕಾರಣ ಹನುಮಂತುವಿಗೆ ಅವರ ಪತ್ನಿ ಕರೆ ಮಾಡಿದ್ದಾರೆ. ಆಗಲೂ ಸ್ವಿಚ್‌್ಡ ಆಫ್‌ ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಕಾನ್‌ಕರ್‌ ಘಟಕದಲ್ಲಿ ಮಂಗಳವಾರ ರಾತ್ರಿ ಕಂಟೇನರ್‌ಗಳನ್ನು ಸ್ಥಳಾಂತರಿಸುತ್ತಿದ್ದಾಗ ಅಪ್ಪಚ್ಚಿಯಾದ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಪರಿಶೀಲಿಸಿದಾಗ, ಭಾನುವಾರದಿಂದ ಕಾಣೆಯಾದ ಹನುಮಂತು ಎಂಬುದು ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ನಿರ್ಲಕ್ಷ್ಯತನದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ವೈಟ್‌ಫೀಲ್ಡ್‌ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: 111 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ