Asianet Suvarna News Asianet Suvarna News

ಶಿಕ್ಷಣಕ್ಕೆ ವಿಶ್ವವೇ ಧಾರವಾಡದತ್ತ ತಿರುಗಿ ನೋಡುವಂತಾಗಬೇಕು: ಅರವಿಂದ ಬೆಲ್ಲದ

ಭವಿಷ್ಯದಲ್ಲಿ ಕರ್ನಾಟಕ ಮಾತ್ರವಲ್ಲದೇ ವಿಶ್ವವೇ ಶಿಕ್ಷಣಕ್ಕೆ ಧಾರವಾಡದತ್ತ ತಿರುಗಿ ನೋಡುವ ಯೋಜನೆ ಹೊಂದಿದ್ದೇನೆ. ಈ ಬಗ್ಗೆ ನೀತಿ ಆಯೋಗದ ಅಧ್ಯಕ್ಷರ ಜೊತೆಗೂ ಚರ್ಚಿಸಿದ್ದೇನೆ. 

The World should look to Dharwad for Education Says Aravind Bellad gvd
Author
First Published Jan 5, 2024, 3:28 PM IST

ಧಾರವಾಡ (ಜ.05): ಭವಿಷ್ಯದಲ್ಲಿ ಕರ್ನಾಟಕ ಮಾತ್ರವಲ್ಲದೇ ವಿಶ್ವವೇ ಶಿಕ್ಷಣಕ್ಕೆ ಧಾರವಾಡದತ್ತ ತಿರುಗಿ ನೋಡುವ ಯೋಜನೆ ಹೊಂದಿದ್ದೇನೆ. ಈ ಬಗ್ಗೆ ನೀತಿ ಆಯೋಗದ ಅಧ್ಯಕ್ಷರ ಜೊತೆಗೂ ಚರ್ಚಿಸಿದ್ದೇನೆ. ಹಾರ್ವರ್ಡ್ ವಿವಿ ಸೇರಿದಂತೆ ಜಗತ್ತಿನ ಅತ್ಯಂತ ಗುಣಮಟ್ಟದ ಶಿಕ್ಷಣ ಒದಗಿಸುವ ವಿಶ್ವವಿದ್ಯಾಲಯಗಳನ್ನು ಧಾರವಾಡದಲ್ಲಿ ಸ್ಥಾಪಿಸುವ ಚಿಂತನೆ ಇದೆ ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಧಾರವಾಡ ಜರ್ನಲಿಸ್ಟ್ ಗಿಲ್ಡ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಶೈಕ್ಷಣಿಕವಾಗಿ ಧಾರವಾಡ ಮುಂಚೂಣಿಯಲ್ಲಿದೆ. 

ಧಾರವಾಡದಲ್ಲಿ ಈಗಾಗಲೇ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿವೆ. ಜತೆಗೆ ಐಐಟಿ, ಐಐಐಟಿ, ಉನ್ನತ ಶಿಕ್ಷಣ ಅಕಾಡೆಮಿ, ಕೇಂದ್ರ ಲಲಿತ ಕಲಾ ಅಕಾಡೆಮಿ, ಫಾರೆನ್ಸಿಕ್‌ ವಿವಿ, ಪ್ರಾದೇಶಿಕ ವಿಜ್ಞಾನ ಕೇಂದ್ರ ಅಂತಹ ಶಿಕ್ಷಣ ಸಂಸ್ಥೆಗಳಿವೆ. ಭವಿಷ್ಯದಲ್ಲಿ ನಾಟಕ ಅಕಾಡೆಮಿ ತರುವ ಚಿಂತನೆ ಇದೆ. ಮುಖ್ಯವಾಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಪೂರಕವಾಗಿ ವಿಶ್ವ ದರ್ಜೆಯ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆಸಿದ್ದಾಗಿಯೂ ಹೇಳಿದರು.

ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿ: ಸಚಿವ ತಿಮ್ಮಾಪೂರ ಪುತ್ರ!

ಕೈಗಾರಿಕೆ, ಪ್ರವಾಸೋದ್ಯಮ, ಗಣಿಗಾರಿಕೆಗೆ ಧಾರವಾಡದಲ್ಲಿ ಹೆಚ್ಚು ವ್ಯಾಪ್ತಿ ಇಲ್ಲ. ಹೀಗಾಗಿ ಧಾರವಾಡ ಜಿಲ್ಲೆ ಶಿಕ್ಷಣದ ಶಕ್ತಿಯಾಗಿ ಬೆಳೆಸುವ ಉದ್ದೇಶವಿದೆ. ಇದಕ್ಕೆ ಪೂರಕವಾಗಿ ವಿಶೇಷ ಶೈಕ್ಷಣಿಕ ವಲಯ (ಎಸ್‌ಇಝಡ್) ರೂಪಿಸಬೇಕಾಗಿದೆ ಎಂದರು. ಉತ್ತರ ಕರ್ನಾಟಕದ ಸಮಸ್ಯೆಗಳು ದಕ್ಷಿಣದ ಭಾಗದವರ ಕಣ್ಣಿಗೆ ಗೋಚರಿಸುತ್ತಿಲ್ಲ. ಭವಿಷ್ಯದಲ್ಲಿ ಇದಕ್ಕೆ ಅವಕಾಶ ನೀಡಲ್ಲ. ಉತ್ತರದ ಸಮಸ್ಯೆ ಬಗ್ಗೆ ಧ್ವನಿ ಎತ್ತುವೆ. ಮೂಲಭೂತ ಸೌಕರ್ಯ, ಸಾಮಾಜಿಕ ಸಮಸ್ಯೆ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ, ಉದ್ಯೋಗ ಸೃಷ್ಠಿಗಾಗಿ ಸಮಯ ಮೀಸಲಿಡಬೇಕಾಗಿದೆ ಎಂದರು.

ವೃತ್ತಿಯಾದ ರಾಜಕಾರಣ!: ರಾಜಕೀಯದಲ್ಲಿ ಸುಸ್ಥಿರತೆ ಇಲ್ಲ. ಮಾಲ್ಯಾಧಾರಿತ ರಾಜಕಾರಣ ಮಾಯವಾಗಿದೆ. ಮೊದಲು ಆಸ್ತಿ ಮಾರಿ ರಾಜಕೀಯ ಮಾಡಿದರೆ, ಇಂದು ರಾಜಕೀಯಕ್ಕೆ ಬಂದು ಆಸ್ತಿ ಮಾಡುವವರು ಹೆಚ್ಚು. ಇಂದು ರಾಜಕಾರಣ ವೃತ್ತಿಯಾಗಿದೆ. ಸಾಮಾಜಿಕ ಕಾಳಜಿ, ಬದ್ಧತೆ ಬೇಕಾಗಿದೆ. ಅದಕ್ಕಾಗಿ ಕಾರ್ಯಾಂಗ ಹಾಗೂ ನ್ಯಾಯಾಂಗದ ರೀತಿಯಲ್ಲಿ ಶಾಸಕಾಂಗಕ್ಕೂ ಅನೇಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಚಿಂತನೆ, ಚರ್ಚೆ ನಡೆಯಬೇಕಿದೆ. ಕಾರ್ಯಾಂಗ ಮಾಡಬೇಕಾದ ಕೆಲಸ, ಜವಾಬ್ದಾರಿ ಶಾಸಕಾಂಗ ಅಥವಾ ಜನಪ್ರತಿನಿಧಿಗಳು ಏತಕ್ಕೆ ಹೊರಬೇಕು. ಅವರ ಕೆಲಸ ಸರಿಯಾಗಿ ಮಾಡಿದರೆ, ಜನಪ್ರತಿನಿಧಿಗಳ ಬಳಿ ಬರುವ ಪ್ರಸಂಗವೇ ಬರೋದಿಲ್ಲ ಎಂದರು.

ನ್ಯಾಯಾಂಗ ವ್ಯವಸ್ಥೆ ಸುಧಾರಿಸಲಿ!: ದೇಶದ ಸುರಕ್ಷತೆಗೆ ಸೈನ್ಯದಷ್ಟೇ,ಆಡಳಿತ ಯಂತ್ರವೂ ಮುಖ್ಯ. ಆದರೆ, ಬ್ರಿಟಿಷ್ ಆಡಳಿತ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ನ್ಯಾಯಾಂಗ-ಕಾರ್ಯಾಂಗದ ಕೆಲಸ ಶಾಸಕಾಂಗ ಮಾಡುವುದು ಸರಿಯಲ್ಲ. ಇದು ಅಭಿವೃದ್ಧಿಗೂ ತೊಡಕಾಗಲಿದೆ. ಮೊದಲು ನ್ಯಾಯಾಂಗ ಸುಧಾರಣೆ ಆಗಬೇಕು. ಭ್ರಷ್ಟರಿಗೆ ಶೀಘ್ರ ಶಿಕ್ಷೆ-ದಂಡವನ್ನು ಸಮಯದ ಮಿತಿಯಲ್ಲಿ ವಿಧಿಸಿದಾಗ ಕಾರ್ಯಾಂಗ ಸುಧಾರಿಸಲಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯಬೇಕಿದೆ ಎಂದರು ಬೆಲ್ಲದ.

ಸ್ಥಳೀಯ ಸಮಸ್ಯೆಗಳ ಪ್ರಶ್ನೆಗೆ ಉತ್ತರಿಸಿದ ಅವರು ಕೆಲವೇ ದಿನಗಳಲ್ಲಿ ಧಾರವಾಡದ ಸಿಬಿಟಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಧಾರವಾಡದಲ್ಲಿ ರಿಂಗ್‌ ರಸ್ತೆ ನಿರ್ಮಾಣ, ಶೀಘ್ರ ಈಜುಗೊಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸುತ್ತೇನೆ ಎಂದರು. ಗಿಲ್ಡ್‌ ಅಧ್ಯಕ್ಷ ಬಸವರಾಜ ಹೊಂಗಲ, ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ಹಾಗೂ ಸದಸ್ಯರು ಇದ್ದರು.

ಕಾಂಗ್ರೆಸ್‌ನವರ ಡಿಎನ್‌ಎಯಲ್ಲಿಯೇ ಹಿಂದು ವಿರೋಧಿ ಮನೋಭಾವವಿದೆ: ಸಿ.ಟಿ.ರವಿ

ಸಂಬಳ ಏರಿಸಲು ಆಯೋಗ ರಚಿಸಿ: ಶಾಸಕರು ತಮ್ಮ ಸಂಬಳವನ್ನು ತಾವೇ ಏರಿಕೆ ಮಾಡಿಕೊಳ್ಳುವುದು ತಪ್ಪು. ಇದಕ್ಕೆ ತಮ್ಮ ವಿರೋಧವಿದೆ. ಹಣಕಾಸು ಆಯೋಗ ರಚಿಸಿ ಕಾಲಕ್ಕೆ ತಕ್ಕಂತೆ ಆಯೋಗವು ಶಾಸಕರ, ಜನಪ್ರತಿನಿಧಿಗಳ ಸಂಬಳ ಹೆಚ್ಚಿಸಬೇಕು ಎಂದು ಅರವಿಂದ ಬೆಲ್ಲದ ತಿಳಿಸಿದರು.

Follow Us:
Download App:
  • android
  • ios