ತನ್ನನ್ನು ತಪಾಸಣೆ ನಡೆಸಲು ಬಂದ ಇಬ್ಬರು ಕಾನ್‌ಸ್ಟೇಬಲ್‌ಗಳ ಮೇಲೆ ಮಚ್ಚು ಬೀಸಿ ಗೂಂಡಾಗಿರಿ ಪ್ರದರ್ಶಿಸಿದ ಕಿಡಿಗೇಡಿಯೊಬ್ಬನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.4) :  ತನ್ನನ್ನು ತಪಾಸಣೆ ನಡೆಸಲು ಬಂದ ಇಬ್ಬರು ಕಾನ್‌ಸ್ಟೇಬಲ್‌ಗಳ ಮೇಲೆ ಮಚ್ಚು ಬೀಸಿ ಗೂಂಡಾಗಿರಿ ಪ್ರದರ್ಶಿಸಿದ ಕಿಡಿಗೇಡಿಯೊಬ್ಬನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಜೆ.ನಗರದ ಫಾರೂಕಿ ನಗರದ ನಿವಾಸಿ ಅಫ್ರಿದ್‌ ಖಾನ್‌ ಬಂಧಿತನಾಗಿದ್ದು, ಚಾಮರಾಜಪೇಟೆಯ ಅನಂತರಾಮಯ್ಯ ಕಾಂಪೌಂಡ್‌ ಸಮೀಪ ಬುಧವಾರ ಮಧ್ಯಾಹ್ನ ಈ ಕೃತ್ಯ ನಡೆದಿದೆ. ಘಟನೆಯಲ್ಲಿ ಚಾಮರಾಜಪೇಟೆ ಠಾಣೆಯ ಕಾನ್‌ಸ್ಟೇಬಲ್‌ಗಳಾದ ವಿಜಯಕುಮಾರ್‌ ಹಾಗೂ ಶಿವಪ್ರಸಾದ್‌ ದಾನರೆಡ್ಡಿ ಹಲ್ಲೆಗೆ ಒಳಗಾಗಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ತಿಳಿಸಿದ್ದಾರೆ.

ಅಪ​ಘಾ​ತ​ದಲ್ಲಿ ಭಾವನನ್ನು ಕೊಲ್ಲುವ ಯತ್ನ: ಭಾಮೈದುನ ಬಂಧ​ನ

ತಡೆದಿದ್ದಕ್ಕೆ ಮಚ್ಚು ಬೀಸಿದ:

ಫಾರೂಕಿನಗರದ ಅಫ್ರಿದ್‌ ಖಾನ್‌ ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿ. ಆತನ ಮೇಲೆ ಐದು ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್‌ ಚಟುವಟಿಕೆ ಕಾರಣಕ್ಕೆ ಜೆ.ಜೆ.ನಗರ ಠಾಣೆಯಲ್ಲಿ ಆತನ ಮೇಲೆ ಎಂಓಬಿ ಕಾರ್ಡ್‌ ತೆರೆಯಲಾಗಿದೆ. ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲು ಸೇರಿದ್ದ ಖಾನ್‌, ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಠಾಣಾ ಸರಹದಲ್ಲಿ ಚೀತಾ (ಗಸ್ತು) ಬೈಕ್‌ನಲ್ಲಿ ಬುಧವಾರ ಮಧ್ಯಾಹ್ನ ಚಾಮರಾಜಪೇಟೆ ಠಾಣೆಯ ಕಾನ್‌ಸ್ಟೇಬಲ್‌ಗಳಾದ ವಿಜಯಕುಮಾರ್‌ ಹಾಗೂ ಶಿವಪ್ರಸಾದ್‌ ದಾನರೆಡ್ಡಿ ಗಸ್ತಿನಲ್ಲಿದ್ದರು. ಆಗ 3 ಗಂಟೆ ಸುಮಾರಿಗೆ ಚಾಮರಾಜಪೇಟೆಯ ಅನಂತರಾಮಯ್ಯ ಕಾಂಪೌಂಡ್‌ 2ನೇ ಕ್ರಾಸ್‌ನಲ್ಲಿ ಖಾನ್‌ ಶಂಕಾಸ್ಪದವಾಗಿ ಬರುತ್ತಿದ್ದನ್ನು ಗಮನಿಸಿದ ಕಾನ್‌ಸ್ಟೇಬಲ್‌ಗಳು, ಕೂಡಲೇ ಆತನನ್ನು ಎಸಿಸಿಟಿಎನ್‌ಎಸ್‌ ಆಪ್‌ (ಹಳೇ ಕ್ರಿಮಿನಲ್‌ಗಳ ಪತ್ತೆ ಹಚ್ಚುವ ಬೆರಳಚ್ಚು ಪರೀಕ್ಷೆ)ನಲ್ಲಿ ತಪಾಸಣೆ ಮಾಡುವ ಸಲುವಾಗಿ ನಿಂತುಕೊಳ್ಳುವಂತೆ ಸೂಚಿಸಿದ್ದಾರೆ.

ಚನ್ನಪಟ್ಟಣ: ಮದ್ಯ ಸಾಲ ನೀಡದಿದ್ದಕ್ಕೆ ಬಾರ್‌ ಸಿಬ್ಬಂದಿ ಮೇಲೆ ಹಲ್ಲೆ

ಈ ಸೂಚನೆಗೆ ಕೆರಳಿದ ಖಾನ್‌, ಪೊಲೀಸರ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ‘ನೀವು ಪೊಲೀಸರು ನನಗೆ ಸುಮ್ಮನೆ ತೊಂದರೆ ಕೊಡುತ್ತೀರಾ. ನಿನ್ನೆ ಅಷ್ಟೇ ಜೈಲಿನಿಂದ ಬಂದಿದ್ದೇನೆ. ಆಗಲೇ ನನ್ನನ್ನು ಚೆಕ್‌ ಮಾಡಲು ಬಂದಿದ್ದೀರಾ. ನನ್ನ ತಂಟೆಗೆ ಬಾರದ ಹಾಗೆ ಮಾಡುತ್ತೇನೆ’ ಎಂದು ಬೈದು ಏಕಾಏಕಿ ತನ್ನ ಬೆನ್ನ ಹಿಂದೆ ಅಡಗಿಸಿಟ್ಟಿದ್ದ ಮಚ್ಚನ್ನು ತೆಗೆದು ಪೊಲೀಸರ ಮೇಲೆ ಖಾನ್‌ ಬೀಸಿದ್ದಾನೆ. ಈ ಹಂತದಲ್ಲಿ ತಮ್ಮ ಎಡಗೈಯನ್ನು ಅಡ್ಡ ಹಿಡಿದಾಗ ದಾನರೆಡ್ಡಿ ಅವರಿಗೆ ಹೆಬ್ಬರಳಿಗೆ ಪೆಟ್ಟಾಗಿದೆ. ತಕ್ಷಣವೇ ಆರೋಪಿಯನ್ನು ಹಿಂದಿನಿಂದ ವಿಜಯಕುಮಾರ್‌ ಹಿಡಿದುಕೊಂಡಿದ್ದಾರೆ. ಕೂಡಲೇ ಹೊಯ್ಸಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು, ಬಳಿಕ ಆತನನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಖಾನ್‌ ಹಿನ್ನೆಲೆ ಗೊತ್ತಾಗಿದೆ. ಬಳಿಕ ಗಾಯಾಳು ಕಾನ್‌ಸ್ಟೇಬಲ್‌ ದಾನರೆಡ್ಡಿ ದೂರಿನ ಮೇರೆಗೆ ಹಲ್ಲೆ ಹಾಗೂ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸಿ ಖಾನ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.