ಬೆಂಗಳೂರು(ಏ.19): ಕೊರೋನಾ ಸೋಂಕು ತಡೆಯುವ ಸಂಬಂಧ ಕಳೆದ 28 ದಿನಗಳಿಂದ ಇಡೀ ರಾಜ್ಯ ಲಾಕ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ಆರ್ಥಿಕತೆ ಮೇಲೆ ಪೆಟ್ಟು ಬಿದ್ದಿದ್ದು, ಆರ್ಥಿಕತೆ ಸುಧಾರಣೆಗಾಗಿ ಸೋಮವಾರದಿಂದ ಲಾಕ್‌ಡೌನ್‌ ಸಡಿಲಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ತುರ್ತು ಸೇವೆಗಳನ್ನು ಹೊರತು ಪಡಿಸಿ ಕೈಗಾರಿಕೆಗಳು, ಖಾಸಗಿ ಸಂಸ್ಥೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಪರಿಣಾಮ ಆರ್ಥಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಯಾವುದೇ ಆದಾಯವು ಸರ್ಕಾರದ ಬೊಕ್ಕಸಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಿ ಬೊಕ್ಕಸಕ್ಕೆ ಆದಾಯ ತರುವ ನಿಟ್ಟಿನಲ್ಲಿ ಸೋಮವಾರದಿಂದ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.

ಸಿಎಂ ಹೇಳಿಕೆ ವಾಪಸ್: ಲಾಕ್ ಡೌನ್ ಸಡಿಲಿಕೆ ಹಿಂಪಡೆದ ರಾಜ್ಯ ಸರ್ಕಾರ...!

ಅಬಕಾರಿ, ಸಾರಿಗೆ ನೋಂದಣಿ ಸೇರಿದಂತೆ ಸರ್ಕಾರದ ಬೊಕ್ಕಸಕ್ಕೆ ಆದಾಯ ತಂದುಕೊಡಬಲ್ಲ ಪ್ರಮುಖ ಇಲಾಖೆಗಳು ಸ್ಥಗಿತಗೊಂಡ ಕಾರಣ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಕೋವಿಡ್‌-19ಕ್ಕಾಗಿ ಸರ್ಕಾರವು ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಕೇಂದ್ರದಿಂದಲೂ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬಂದಿಲ್ಲ. ಇದು ಸರ್ಕಾರಕ್ಕೆ ಮತ್ತಷ್ಟುಕಗ್ಗಂಟಾಗಿ ಪರಿಣಿಮಿಸಿದೆ. ಆದಾಯ ಬಾರದಿದ್ದರೆ ಭವಿಷ್ಯದಲ್ಲಿ ರಾಜ್ಯದ ಅಭಿವೃದ್ಧಿಗೆ ಪೆಟ್ಟು ಬೀಳಲಿದೆ. ಇದನ್ನು ಮನಗಂಡ ಸರ್ಕಾರವು ತನ್ನ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಿ ಆದಾಯ ಗಳಿಸುವ ಯೋಚನೆ ಮಾಡಿದೆ ಎಂದು ಹೇಳಲಾಗಿದೆ.

ಕೈಗಾರಿಕೆಗಳು, ಕಾರ್ಖಾನೆಗಳನ್ನು ಆರಂಭಿಸುವುದರಿಂದ ಸಹಜವಾಗಿ ಉತ್ಪನ್ನಗಳ ಉತ್ಪಾದನೆ ಪ್ರಾರಂಭವಾಗಲಿದೆ. ಆರ್ಥಿಕತೆ ನಿಧನವಾಗಿಯಾದರೂ ಸಹಜ ಸ್ಥಿತಿಗೆ ಮರಳಲಿದೆ. ತೆರಿಗೆ, ರಾಜಸ್ವ ಸಂಗ್ರಹವಾಗಲಿದೆ. ಇದರಿಂದ ಮುಂದಿನ ದಿನದಲ್ಲಿ ರೂಪಿಸಬೇಕಾದ ಕಾರ್ಯಕ್ರಮಗಳಿಗೆ ಸಹಕಾರಿಯಾಗಲಿದೆ ಎಂದು ಸರ್ಕಾರದ ಲೆಕ್ಕಚಾರವಾಗಿದೆ ಎನ್ನಲಾಗಿದೆ.

ಬಿಎಸ್‌ವೈ ಸುದ್ದಿಗೋಷ್ಠಿ: ರಾಜ್ಯದಲ್ಲಿ ಲಾಕ್‌ಡೌನ್ ಭಾಗಶಃ ಸಡಿಲ...!

ರಾಜ್ಯದಲ್ಲಿ ಕೊರೋನಾ ವೈರಾಣು ಹೆಚ್ಚಾಗುತ್ತಿದ್ದಂತೆ ಲಾಕ್‌ಡೌನ್‌ ಮಾಡಲಾಯಿತು. ಕಳೆದ 28 ದಿನಗಳಿಂದ ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿದರೆ ಬೇರಾವುದೇ ವ್ಯವಹಾರ ನಡೆಯುತ್ತಿಲ್ಲ. ತೆರಿಗೆ ಸಂಗ್ರಹವೂ ಸಹ ನಡೆದಿಲ್ಲ. ಆದಾಯ ತಂದುಕೊಡಬಲ್ಲ ಇಲಾಖೆಗಳ ಕಾರ್ಯಾರಂಭಕ್ಕೆ ಸರ್ಕಾರ ಅನುಮತಿ ನೀಡದ ಕಾರಣ ಸರ್ಕಾರದ ಬೊಕ್ಕಸದಲ್ಲಿ ಹಣ ಕೊರತೆ ಉಂಟಾಗಿದೆ. ಆರ್ಥಿಕತೆ ಕೊರತೆಯನ್ನು ನೀಗಿಸಲು ಲಾಕ್‌ಡೌನ್‌ ಸಡಿಲ ಅನಿವಾರ್ಯ ಎಂದು ಹೇಳಲಾಗಿದೆ.

"