Karnataka budget 2023: ಹೊಸ ಘೋಷಣೆ ಭರವಸೆಯಲ್ಲಿದ್ದ ಯಾದಗಿರಿ ಜಿಲ್ಲೆಗೆ ನಿರಾಸೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ 2023-24ರಲ್ಲಿ ಯಾದಗಿರಿ ಜಿಲ್ಲೆಗೆ ಪ್ರತ್ಯೇಕವಾಗಿ ಒಂದಿಷ್ಟುಹೊಚ್ಚ ಹೊಸ ಯೋಜನೆಗಳನ್ನು, ಘೋಷಣೆ ನೀಡಬಹುದು ಎಂದು ಕಾದಿದ್ದ ಜನರಿಗೆ ನಿರಾಸೆ ಮೂಡಿಸಿದೆ
ಯಾದಗಿರಿ (ಜು.8)k : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ 2023-24ರಲ್ಲಿ ಯಾದಗಿರಿ ಜಿಲ್ಲೆಗೆ ಪ್ರತ್ಯೇಕವಾಗಿ ಒಂದಿಷ್ಟುಹೊಚ್ಚ ಹೊಸ ಯೋಜನೆಗಳನ್ನು, ಘೋಷಣೆ ನೀಡಬಹುದು ಎಂದು ಕಾದಿದ್ದ ಜನರಿಗೆ ನಿರಾಸೆ ಮೂಡಿಸಿದೆ. ಆದರೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಸಣ್ಣ ಕೈಗಾರಿಕಾ ವಸಾಹತುಗಳ ಸ್ಥಾಪನೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಕೋಟಿ ರು.ಗಳ ಮೀಸಲು ಹಾಗೂ ಹೊಸದಾಗಿ ನಿರ್ಮಾಣವಾದ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಅನುದಾನ ಘೋಷಿಸಿರುವುದು ವಿಶೇಷ.
ಕುಡಿಯುವ ನೀರಿನ ಯೋಜನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯಾದ್ಯಂತ 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 19 ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು 770 ಕೋಟಿ ರು.ಗಳ ವೆಚ್ಚದಲ್ಲಿ ಪೂರ್ಣಗೊಳಿಸಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯಪುರ, ಕೊಪ್ಪಳ, ಕಲಬುರಗಿ, ಹಾಗೂ ಯಾದಗಿರಿ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಬಜೆಟ್ಟಿನಲ್ಲಿ ತಿಳಿಸಲಾಗಿದೆ.
Karnataka budget 2023: ಹುಬ್ಬಳ್ಳಿಗೆ ಭರ್ಜರಿ ಯೋಜನೆ, ಕೊಂಚ ನಿರಾಸೆ!
ಇದು, ರಾಜ್ಯದಲ್ಲಿ ಅತಿ ಹೆಚ್ಚು, ಅಂದರೆ 350ಕ್ಕೂ ಹೆಚ್ಚು ಕೆರೆಗಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಅನುಕೂಲವಾಗಲಿದೆ. ಅಂದ ಹಾಗೆ, ಹಳೆಯ ಸರ್ಕಾರವೂ ಸಹ ಕೆರೆಗಳಿಗೆ ನೀರು ತುಂಬಿಸುವ ಘೋಷಣೆ ಮಾಡಿತ್ತು.
ರಾಜ್ಯದಲ್ಲಿ ಈಗಾಗಲೇ ಆರಂಭಿಸಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ 450 ಕೋಟಿ ರು.ಗಳು ಮೀಸಲಿಡಲಾಗಿದೆ. ಕಳೆದ ಸಾಲಿನಲ್ಲಿ ಯಾದಗಿರಿಯಲ್ಲಿ ಆರಂಭಗೊಂಡ ವೈದ್ಯಕೀಯ ಕಾಲೇಜಿಗೆ ಇದು ಅನುಕೂಲವಾಗಲಿದೆ ಆದರೂ, ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಗಳ ಹಾಗೂ ಇನ್ನಿತರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಬೇಕಿತ್ತು. ಇಲ್ಲವಾದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಮಾರಕವಾಗಬಹುದು ಅನ್ನೋ ಆತಂಕ ಮೂಡಿದೆ.
ಇನ್ನು, ಕಲ್ಯಾಣ ಕರ್ನಾಟಕ ಪ್ರದೇಶ ಸಮಗ್ರ ಅಭಿವೃದ್ಧಿಗಾಗಿ 5000 ಸಾವಿರ ಕೋಟಿ ರು.ಗಳ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ಚುನಾವಣೆ ಪ್ರಣಾಳಿಕೆಯಂತೆ ಇದು ಘೋಷಣೆಯಾಗಿದೆ. ಹೀಗಾಗಿ, ಯಾದಗಿರಿಗೂ ಇದು ಹೆಚ್ಚಿನ ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸಣ್ಣ ಕೈಗಾರಿಕೆಗ ಪ್ರೋತ್ಸಾಹಿಸಲು ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಹುಬ್ಬಳ್ಳಿ, ಕಲಬುರಗಿಯ ಚಿತ್ತಾಪುರ, ಉತ್ತರ ಕೋಡ್ಕಣಿ, ಬೆಳಗಾವಿಯ ಕಣಿಗಲಾ, ಚಾಮರಾಜನಗರ ಬದನಗುಪ್ಪೆ, ವಿಜಯಪುರದ ಇಂಡಿ ಹಾಗೂ ಯಾದಗಿರಿಯ ಶಹಾಪುರ ಸೇರಿದಂತೆ ಒಟ್ಟು 7 ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳ ಸ್ಥಾಪಿಸಲು ಬಜೆಟ್ಟಿನಲ್ಲಿ ಘೋಷಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕಾ ಸಚಿವರಾಗಿರುವದರಿಂದ ಈ ಘೋಷಣೆಗೆ ಸಹಕಾರಿಯಾಗಿದೆ.
ಆದರೆ, 12 ವರ್ಷಗಳ ಹಿಂದೆಯೇ ಕೈಗಾರಿಕೆಳ ಸ್ಥಾಪನೆಗಾಗಿ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡ 3300 ಎಕರೆ ಪ್ರದೇಶದಲ್ಲಿ ಮುಂದಿನ ಬೆಳವಣಿಗೆಗಳ ಘೋಷಣೆಗಳ ಬಗ್ಗೆಯಾಗಲೀ, ಉದ್ಯೋಗದ ಭರವಸೆಯಾಗಲೀ, ರಾಜ್ಯದಲ್ಲಿ ಹೆಚ್ಚು ಗುಳೇ ಹೋಗುವ ಈ ಭಾಗದ ಜನರ ತಡೆಗಟ್ಟಲು ವಿಶೇಷ ಯೋಜನೆಗಳಾಗಲೀ, ಕುಸಿದ ಶೈಕ್ಷಣಿಕ ಮಟ್ಟದ ಪ್ರಗತಿಗಾಗಿ ಹೊಸ ಯೋಜನೆ, ಪ್ರತ್ಯೇಕ ವಿವಿ ಅಥವಾ ಪಿಜಿ ಸೆಂಟರ್ ಆಗಲೀ, ಪ್ರವಾಸೋದ್ಯಮದ ಬೆಳವಣಿಗೆಗೆ ಹೊಸ ಚಿಂತನೆ , ಗ್ರಾಮಮಟ್ಟದಲ್ಲಿ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಗಮನ ಹರಿಸಿಲ್ಲ ಅನ್ನೋದು ಜನರಲ್ಲಿ ಬೇಸರವಿದೆ.
'ರೈತರು ಸಾಲ ಕೇಳಿದ್ರೆ ಸಿಬಿಲ್ ಸ್ಕೋರ್ ನೋಡದಿರಿ': ಸಂಸದ ಡಾ.ಜಿಎಂ ಸಿದ್ದೇಶ್ವರ್ ಸೂಚನೆ
ರಾಜ್ಯದ ಮುಖ್ಯಮಂತ್ರಿ ಮಂಡಿಸಿರುವ ಇಂದಿನ ಬಜೆಟ್ ಮಹಿಳಾ ವಿರೋಧಿ ಮತ್ತು ದ್ವೇಷದ ರಾಜಕಾರಣ ಹಠ ಸಾಧಿಸಿರುವ ಬಜೆಟ್ ಆಗುವಂತಿದೆ. ಬಸ್ ಫ್ರೀ ಮತ್ತು 2000 ರು.ಗಳು ಗೃಹಲಕ್ಷ್ಮಿ ಯೋಜನೆಯಿಂದ ತಮ್ಮ ಗ್ಯಾರಂಟಿ ಜಾರಿಗೊಳಿಸಲು ಉದ್ದೇಶದಿಂದ ಮಹಿಳೆಯರಿಗೆ ಇದ್ದ ಅನುದಾನ ಕಡಿತಗೊಳಿಸಿದೆ. ಹಿಂದಿನ ಸರಕಾರ ಜಾರಿಗೊಳಿಸಿದ ಎಪಿಎಂಸಿ ಕಾಯ್ದೆ, ಪಠ್ಯ ಪರಿಷ್ಕರಣೆ ಮುಂತಾದ ಯೋಜನೆಗಳನ್ನು ತಿದ್ದುಪಡಿ ಮಾಡಿದ್ದು, ನೋಡಿದರೆ ಇದು ದ್ವೇಷದ ರಾಜಕಾರಣದ ಬಜೆಟ್ ಆಗಿದೆ.
- ಲಲಿತಾ ಅನಪುರ, ಬಿಜೆಪಿ ಮುಖಂಡ
ಯಾದಗಿರಿ ಜಿಲ್ಲೆಗೆ ನಿರೀಕ್ಷೆ ಮಾಡಿದಷ್ಟುಯಾವ ಯೋಜನೆ ಘೋಷಣೆ ಆಗದಿರುವುದು ಬೇಸರವಾಗಿದೆ. ಸಿದ್ದರಾಮಯ್ಯ ಈ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷ ತೋರಿಸಿದ್ದಾರೆ.
- ಜ್ಞಾನೇಶ್ವರ ರೆಡ್ಡಿ ತಾಲೂಕು ಜೆಡಿಎಸ್ ಯುವ ಘಟಕ ಅಧ್ಯಕ್ಷ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಪರ ಹಾಗೂ ಸರ್ವಾಂಗೀಣ ಜನರ ಅಭಿವೃದ್ಧಿಯ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಆರೋಗ್ಯ, ಕೃಷಿ ಮತ್ತು ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ರಾಜ್ಯ ದ ಕಲ್ಯಾಣ ದೃಷ್ಟಿಯಲ್ಲಿ ಉತ್ತಮ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು.
- ಬಸ್ಸಿರೆಡ್ಡಿ ಅನಪುರ್, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್