ಇಂಥದ್ದೇ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !
ಪರಿಸ್ಥಿತಿ ಆಧರಿಸಿ ವರ್ಗಾವಣೆ ನಡೆಯುತ್ತವೆ. ಒಂದೇ ಸ್ಥಳದಲ್ಲಿ ನೌಕರ ಬೀಡು ಬಿಟ್ಟರೆ ಆತನಿಂದ ಅಪಾಯ ಹೆಚ್ಚು.. ಇಂಥದ್ದೇ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗಿಲ್ಲ ಎಂದು ಹೈಕೋfಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣ ವಿವರ ಇಲ್ಲಿದೆ.
ವಿಶೇಷ ವರದಿ
ಬೆಂಗಳೂರು (ಡಿ.27): ಸರ್ಕಾರದ ಯಾವುದೇ ಉದ್ಯೋಗಿ ನಿರ್ದಿಷ್ಟ ಹುದ್ದೆ ಅಥವಾ ನಿರ್ದಿಷ್ಟ ಸ್ಥಳಕ್ಕೆ ನಿಯೋಜನೆ ಮಾಡುವಂತೆ ಹಕ್ಕು ಸಾಧನೆ ಮಾಡಲು ಬರುವುದಿಲ್ಲ. ನೌಕರರನ್ನು ಸೇವಾ ಪರಿಸ್ಥಿತಿ ಆಧಾರದ ಮೇಲೆ ವರ್ಗಾವಣೆ ಮಾಡಲಾಗುತ್ತದೆ. ಮೇಲಾಗಿ, ಒಂದೇ ಹುದ್ದೆ ಅಥವಾ ಸ್ಥಳದಲ್ಲಿ ಸರ್ಕಾರಿ ನೌಕರ ನಿಗದಿತ ಅವಧಿಗಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ್ದಲ್ಲಿ ಅಲ್ಲಿ ಆತ ಪಟ್ಟಭದ್ರ ಹಿತಾಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಹಾಯಕ ನಿರ್ದೇಶಕ ಹುದ್ದೆಯಿಂದ ತಮ್ಮನ್ನು ವರ್ಗಾಯಿಸಿದ ಹಾಗೂ ಆ ಹುದ್ದೆಗೆ ಮಂಗಳೂರು ನಗರ ಪಾಲಿಕೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಎ.ಬಿ. ಗುರುಪ್ರಸಾದ್ ಎಂಬುವವರನ್ನು ನಿಯೋಜಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಕೆ.ಎಂ. ಪ್ರಶಾಂತ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.
ಸರ್ಕಾರಿ ನೌಕರ ತಾನಿರುವ ಪ್ರದೇಶದಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿ ಬೆಳೆಸಿಕೊಳ್ಳಬಾರದು ಎಂಬ ಉದ್ದೇಶದಿಂದ ವರ್ಗಾವಣೆ ಮಾಡಲಾಗುತ್ತದೆ. ವರ್ಗಾವಣೆ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಅವಧಿಗಿಂತ ಹೆಚ್ಚುಕಾಲ ಒಂದು ಹುದ್ದೆ/ಪ್ರದೇಶದಲ್ಲಿ ಉದ್ಯೋಗಿ ಕರ್ತವ್ಯ ನಿರ್ವಹಿಸಿದರೆ, ಆತನನ್ನು ಮತ್ತೊಂದೆಡೆಗೆ ವರ್ಗಾಯಿಸಬೇಕು ಎಂದು ಆದೇಶದಲ್ಲಿ ಕೋರ್ಟ್ ತಿಳಿಸಿದೆ.
ಮುಖ್ಯಮಂತ್ರಿಗಳು ಶಾಸಕಾಂಗದ ಅತ್ಯುನ್ನತ ಅಧಿಕಾರಿ ಆಗಿರುವುದರಿಂದ ಆಡಳಿತದ ಅಗತ್ಯತೆ ಹಾಗೂ ಹಿತದೃಷ್ಟಿಯಿಂದ ಸೇವಾ ದಾಖಲೆಗಳ ಪರಿಶೀಲನೆ ನಂತರ ಯಾವುದೇ ವ್ಯಕ್ತಿಯನ್ನು ವರ್ಗಾವಣೆಗೆ ಪರಿಗಣಿಸಲು ನಿರ್ದೇಶಿಸಬಹುದು. ಅದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಈ ಪ್ರಕರಣದಲ್ಲಿ ದಾಖಲೆಗಳ ಪ್ರಕಾರ ಗುರುಪ್ರಸಾದ್ ಅವರನ್ನು ಅರ್ಜಿದಾರನ ಹುದ್ದೆಗೆ ವರ್ಗಾವಣೆ ಮಾಡಲು ‘ಕೋರಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಸಂವಹನ ಪತ್ರದಲ್ಲಿ ಉಲ್ಲೇಖವಾಗಿದೆ. ‘ಕೋರಿದೆ’ ಪದ ಬಳಕೆಯಾಗಿದೆ ಎಂದರೆ ವರ್ಗಾವಣೆಗೆ ಮುಖ್ಯಮಂತ್ರಿಗಳಿಂದ ಶಿಫಾರಸು (ಪ್ರಸ್ತಾವನೆ) ಮಾಡಲಾಗಿದೆ ಎಂದರ್ಥ. ಅದು ಬಿಟ್ಟು ವರ್ಗಾವಣೆಗೆ ಮುಖ್ಯಮಂತ್ರಿಗಳು ಪೂರ್ವಾನುಮತಿ ನೀಡಿದ್ದಾರೆ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ನಾಯಕ, ವಾಲ್ಮೀಕಿ ಸಮುದಾಯ ಕೈಬಿಡಲು ಹೈಕೋರ್ಟ್ ಕೋರ್ಟ್ ನಕಾರ
ಅಂತಿಮವಾಗಿ ಮುಡಾ ಇಲಾಖೆ ಸಹಾಯಕ ನಿರ್ದೇಶಕ ಹುದ್ದೆಯಿಂದ ಕೆ.ಎಂ. ಪ್ರಶಾಂತ್ ಕುಮಾರ್ ಅವರನ್ನು ಅವಧಿ ಪೂರ್ವವಾಗಿ ಮತ್ತು ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದೆ ವರ್ಗಾವಣೆ ಮಾಡಲಾಗಿದೆ. ಅದ್ದರಿಂದ ಅರ್ಜಿದಾರರ ವರ್ಗಾವಣೆ ಆದೇಶ ರದ್ದುಪಡಿಸಲಾಗುತ್ತಿದೆ. ಅವರು ಮುಡಾ ಸಹಾಯಕ ನಿರ್ದೇಶಕ ಹುದ್ದೆಗೆ ವರದಿ ಮಾಡಿಕೊಳ್ಳಬೇಕು. ಅದು ವರ್ಗಾವಣೆ ಮಾರ್ಗಸೂಚಿಗಳು-2013 ಗಮನದಲ್ಲಿಟ್ಟುಕೊಂಡು ಮುಡಾ ಸಹಾಯಕ ನಿರ್ದೇಶಕರ ಹುದ್ದೆಗೆ ಅರ್ಹ ವ್ಯಕ್ತಿಯನ್ನು ನಿಯೋಜಿಸುವ ಸಂಬಂಧ ರಾಜ್ಯ ಸರ್ಕಾರ ಹೊಸದಾಗಿ ಕೈಗೊಳ್ಳುವ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ.
ಪ್ರಕರಣದ ವಿವರ:
ಅರ್ಜಿದಾರ ಕೆ.ಎಂ. ಪ್ರಶಾಂತ್ ಕುಮಾರ್ ಬೇರೆ ಬೇರೆ ಹುದ್ದೆಯಲ್ಲಿ ಕೆಲಸ ಮಾಡಿದ ನಂತರ ಮಳವಳ್ಳಿ ಪಟ್ಟಣ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿದ್ದರು. ಆ ಹುದ್ದೆಯಲ್ಲಿ ಕೇವಲ ಎರಡು ತಿಂಗಳಷ್ಟೇ ಕರ್ತವ್ಯ ನಿರ್ವಹಿಸಿದ್ದ ಅವರನ್ನು ಮತ್ತೆ ಮುಡಾ ಸಹಾಯಕ ನಿರ್ದೇಶಕ ಹುದ್ದೆಗೆ 2022ರ ಜೂ.2ರಂದು ಸರ್ಕಾರ ವರ್ಗಾವಣೆ ಮಾಡಿತ್ತು. ಆ ಹುದ್ದೆಗೆ ಜೂ.6ರಂದು ವರದಿ ಮಾಡಿಕೊಂಡಿದ್ದರು. ನಂತರ 2022ರ ಜು.13ರಂದು ಅವರ ಹುದ್ದೆಗೆ ಮಂಗಳೂರು ಮಹಾನಗರ ಪಾಲಿಕೆ ಸಹಾಯಕ ನಿರ್ದೇಶಕರಾಗಿದ್ದ ಎ.ಬಿ. ಗುರುಪ್ರಸಾದ್ ಅವರನ್ನು ಸರ್ಕಾರ ವರ್ಗಾಯಿಸಿತ್ತು.
ತ್ರಿಕಾಲ ಜ್ಞಾನಿ ಸ್ವಾಮಿಗಳೇ ಹೀಗೆ ಮಾಡಿದರೆ ಹೇಗೆ? ನ್ಯಾಯಾಂಗ ನಿಂದನೆ ಮಾಡಿದ ಶ್ರೀಗಳ ವಿರುದ್ಧ ಹೈಕೋರ್ಟ್ ಅಸಮಾಧಾನ
ಈ ಆದೇಶ ರದ್ದು ಕೋರಿ ಪ್ರಶಾಂತ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) 2023ರ ಸೆ.22ರಂದು ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಪ್ರಶಾಂತ್, ತಮ್ಮನ್ನು ಅವಧಿ ಪೂರ್ವವಾಗಿ ಮತ್ತು ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆಯದೇ ವರ್ಗಾಯಿಸಲಾಗಿದೆ ಎಂದು ಆಕ್ಷೇಪಿಸಿದ್ದರು.