ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ ನಾಯಕ, ವಾಲ್ಮೀಕಿ ಸಮುದಾಯ ಕೈಬಿಡಲು ಹೈಕೋರ್ಟ್ ಕೋರ್ಟ್ ನಕಾರ
ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಯಿಂದ ನಾಯಕ, ನಾಯ್ಕ್, ಬೇಡ, ಬೇಡರ, ವಾಲ್ಮೀಕಿ, ತಳವಾರ ಸಮುದಾಯಗಳನ್ನು ಕೈ ಬಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು (ಡಿ.27): ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಯಿಂದ ನಾಯಕ, ನಾಯ್ಕ್, ಬೇಡ, ಬೇಡರ, ವಾಲ್ಮೀಕಿ, ತಳವಾರ ಸಮುದಾಯಗಳನ್ನು ಕೈ ಬಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ.
ಡಾ.ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ತ್ರಿಕಾಲ ಜ್ಞಾನಿ ಸ್ವಾಮಿಗಳೇ ಹೀಗೆ ಮಾಡಿದರೆ ಹೇಗೆ? ನ್ಯಾಯಾಂಗ ನಿಂದನೆ ಮಾಡಿದ ಶ್ರೀಗಳ ವಿರುದ್ಧ ಹೈಕೋರ್ಟ್ ಅಸಮಾಧಾನ
ಅಸಹಾಯಕ ಸಮುದಾಯಗಳನ್ನು ಮೇಲೆತ್ತಲು ಸಾಂವಿಧಾನಿಕ ನಿಬಂಧನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನದ ನಿಬಂಧನೆಗಳ ಪ್ರಕಾರ ಯಾವೆಲ್ಲಾ ಸಮುದಾಯಗಳನ್ನು ಸೇರ್ಪಡೆ ಮಾಡಬೇಕು ಮತ್ತು ಕೈಬಿಡಬೇಕು ಎಂಬ ಬಗ್ಗೆ ಶಾಸನ ರೂಪಿಸುವುದು ಸಂಸತ್‌ನ ವಿಶೇಷ ಅಧಿಕಾರವಾಗಿದೆ. ಹಾಗಾಗಿ, ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಲು ಬಯಸುವುದಿಲ್ಲ ಎಂದು ತಿಳಿಸಿದ ಹೈಕೋರ್ಟ್ ಅರ್ಜಿ ತಿರಸ್ಕರಿಸಿ ಆದೇಶಿಸಿದೆ.
ಪರಿಶಿಷ್ಟ ಪಂಗಡಗಳ ಪಟ್ಟಿಯಿಂದ (ಎಸ್‌ಟಿ) ನಾಯಕ, ನಾಯ್ಕ್, ಬೇಡ, ಬೇಡರ, ವಾಲ್ಮೀಕಿ, ತಳವಾರ ಸಮುದಾಯಗಳನ್ನು ಕೈ ಬಿಡಬೇಕು. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ಅಡಿ ಪರಿಶಿಷ್ಟ ಜಾತಿಗಳ ಸದಸ್ಯರು ನೀಡಿದ ದೂರಿನ ಮೇರೆಗೆ ನಾಯಕ, ನಾಯ್ಕ್, ಬೇಡ, ಬೇಡರ, ವಾಲ್ಮೀಕಿ ಮತ್ತು ತಳವಾರ ಸಮುದಾಯಗಳ ವಿರುದ್ಧ ಪ್ರಕರಣ ದಾಖಲಿಸದಂತೆ ನಿರ್ದೇಶಿಸಬೇಕು. ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡದಂತೆ ಹಾಗೂ ಅವರಿಗೆ ಶಿಕ್ಷಣ, ಉದ್ಯೋಗ, ಚುನಾವಣೆ ಅಥವಾ ಇತ್ಯಾದಿಗಳಲ್ಲಿ ಮೀಸಲಾತಿ ಸೌಕರ್ಯ ಕಲ್ಪಿಸಬಾರದು ಎಂದು ಕೇಂದ್ರ ಹಾಗೂ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಹೈಕೋರ್ಟ್ ಇದೇ ವೇಳೆ ತಿರಸ್ಕರಿಸಿದೆ.
ಜತೆಗೆ, ಭಾರತೀಯ ಮತ್ತು ರಾಜ್ಯ ಚುನಾವಣಾ ಆಯೋಗಗಳು ಈ ಸಮುದಾಯಗಳಿಗೆ ನೀಡಿದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಸ್ವೀಕರಿಸದಂತೆ ನಿರ್ದೇಶಿಸಬೇಕು, ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯ್ದೆಯಡಿ ಅಡಿ ಇವರು ಪ್ರಕರಣ ದಾಖಲಿಸಲು ಮುಂದಾದರೆ ಅದನ್ನು ತಡೆಯಬೇಕು ಹಾಗೂ ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಸಮುದಾಯಗಳಿಂದ ಹೊರಗಿಡಬೇಕು ಎಂಬ ಅರ್ಜಿದಾರರ ಮತ್ತೊಂದು ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ (ಎರಡನೇ ತಿದ್ದುಪಡಿ) ಕಾಯ್ದೆ-1991 ಮತ್ತು ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಕಾಯ್ದೆ-2020 ಶಾಸನಗಳನ್ನು ಅಸಿಂಧುಗೊಳಿಸಿದರೆ, ನಾಯಕ, ನಾಯ್ಕ್, ಬೇಡ, ಬೇಡರ, ವಾಲ್ಮೀಕಿ ಮತ್ತು ತಳವಾರ ಸಮುದಾಯಗಳಿಗೆ ನೀಡಲಾದ ಪರಿಶಿಷ್ಟ ಪಂಗಡಗಳ ಪ್ರಮಾಣಪತ್ರಗಳು ಅನೂರ್ಜಿತವಾಗುತ್ತವೆ. ಎಲ್ಲಿಯವರೆಗೆ ಈ ಸಮುದಾಯಗಳು ಶಾಸನದಲ್ಲಿ ಮುಂದುವರಿಯಲಿವೆಯೋ ಅಲ್ಲಿಯವರೆಗೆ ಆ ಸಮುದಾಯಗಳ ಸದಸ್ಯರು ಸಕ್ಷಮ ಪ್ರಾಧಿಕಾರದಿಂದ ಸಾಮಾಜಿಕ ಸ್ಥಿತಿಗತಿ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಹರು. ಇದು ಶಿಕ್ಷಣ, ಉದ್ಯೋಗ, ಚುನಾವಣೆ ಮತ್ತು ಇತ್ಯಾದಿ ಮೀಸಲಾತಿಗೂ ಅನ್ವಯಿಸುತ್ತದೆ. ಇದೇ ಕಾರಣಕ್ಕಾಗಿಯೇ ಅವರು 1989ರ ಕಾಯ್ದೆಯಡಿ ಅಡಿ ದೌರ್ಜನ್ಯದಿಂದ ರಕ್ಷಣೆ ಪಡೆಯಲು ಅರ್ಹರಾಗಿದ್ದಾರೆ. ಹಾಗಾಗಿ, ಅರ್ಜಿದಾರರ ಮನವಿ ಪುರಸ್ಕರಿಸಲಾಗದು ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.