ಚಿಪ್‌ನಿಂದ ಹಿಡಿದು ಬೃಹತ್ ಕಟ್ಟಡ ನಿರ್ಮಾಣವರೆಗೆ ಕೌಶಲ್ಯ ಸಾಧಿಸಿರುವ ರಾಜ್ಯ, ರಾಷ್ಟ್ರದ ಎಂಜಿನಿಯರ್‌ಗಳ ಕೈಯಲ್ಲಿ ಭಾರತದ ಭವಿಷ್ಯ ಸುಭದ್ರವಾಗಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.
ಬೆಂಗಳೂರು (ಅ.19): ಚಿಪ್‌ನಿಂದ ಹಿಡಿದು ಬೃಹತ್ ಕಟ್ಟಡ ನಿರ್ಮಾಣವರೆಗೆ ಕೌಶಲ್ಯ ಸಾಧಿಸಿರುವ ರಾಜ್ಯ, ರಾಷ್ಟ್ರದ ಎಂಜಿನಿಯರ್‌ಗಳ ಕೈಯಲ್ಲಿ ಭಾರತದ ಭವಿಷ್ಯ ಸುಭದ್ರವಾಗಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು. ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ನ್ಯೂಸ್ ಕೊಡಮಾಡುವ ‘ಎಮಿನೆಂಟ್ ಎಂಜಿನಿಯರ್-2025’ ಪ್ರಶಸ್ತಿ ಪ್ರದಾನದ ಅದ್ಧೂರಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕೆಎಸ್‌ಡಿಎಲ್ (ಕರ್ನಾಟಕ ಸೋಪ್ ಆ್ಯಂಡ್ ಡಿಟರ್ಜೆಂಟ್) ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಸರ್ ಎಂ.ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಅವರು ಹುಟ್ಟುಹಾಕಿದ ಈ ಸಂಸ್ಥೆ ಜಾಗತಿಕವಾಗಿ ಮುನ್ನಡೆಯುತ್ತಿದೆ. ಸರ್‌ಎಂವಿ ಅವರ ಹೆಸರಲ್ಲಿ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎಂಜಿನಿಯರ್‌ಗಳಿಗೆ ಸ್ಫೂರ್ತಿ ಎಂದರು. ಪ್ರಶಸ್ತಿ ಪಡೆದ ಎಂಜಿನಿಯರ್‌ಗಳ ಹಿನ್ನೆಲೆ ನೋಡಿದಾಗ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತು ಸತ್ಯ ಎಂಬುದು ಸಾಬೀತಾಗಿದೆ. ದೇಶಕ್ಕೆ ಅತ್ಯದ್ಭುತವಾದ ಇತಿಹಾಸವಿದೆ. ಸಾವಿರ ವರ್ಷ ಸಮೀಪಿಸಿರುವ ಕಟ್ಟಡಗಳು ನಮ್ಮಲ್ಲಿ ಇಂದಿಗೂ ಇದೆ ಎಂದರೆ ಭಾರತದಲ್ಲಿ ಎಂಜಿನಿಯರಿಂಗ್ ಜ್ಞಾನ ಬಹು ಹಿಂದಿನಿಂದ ಇತ್ತು ಎಂಬುದು ತಿಳಿಯುತ್ತದೆ. ನಮ್ಮ ವಾಸ್ತುಶಿಲ್ಪಿಗಳು ಎಂಜಿನಿಯರ್‌ಗಳು ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಕಟ್ಟಡದಿಂದ ಹಿಡಿದು ಕೃಷಿವರೆಗೆ, ವೈದ್ಯಕೀಯ ಕ್ಷೇತ್ರದಿಂದ ತಂತ್ರಜ್ಞಾನದವರೆಗೆ ಎಲ್ಲ ಕ್ಷೇತ್ರದಲ್ಲಿ ಎಂಜಿನಿಯರ್‌ಗಳ ಕೊಡುಗೆ ದೊಡ್ಡದು. ಅದರಲ್ಲೂ ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಎಂಜಿನಿಯರಿಂಗ್ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ನಮ್ಮ ಯುವಕರು ಹೆಚ್ಚಾಗಿ ಈ ಕ್ಷೇತ್ರದತ್ತ ಬರುತ್ತಿರುವುದು ಉತ್ತಮ ಬೆಳವಣಿಗೆ. ಸಾವಿರಾರು ವರ್ಷಗಳಿಂದ ಅಲುಗಾಡದೆ ನಿಂತಿರುವ ವಾಸ್ತುಶಿಲ್ಪ, ತಾಜ್‌ಮಹಲ್, ಗೋಳಗುಮ್ಮಟದಂಥ ಅದ್ಭುತ ಇತಿಹಾಸವಿರುವ ನಮ್ಮ ದೇಶದ ಭವಿಷ್ಯ ಎಂಜಿನಿಯರ್‌ಗಳ ಕೈಯಲ್ಲಿ ಸುಭದ್ರವಾಗಿದೆ ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂಧನ, ಜಲಸಂಪನ್ಮೂಲ ಸೇರಿ ಹಲವು ಇಲಾಖೆಗಳಲ್ಲಿ ಅನುಭವ ಇರುವ ಸಚಿವರಾಗಿದ್ದಾರೆ. ಇಲಾಖೆಯ ಸಾವಿರಾರು ಎಂಜಿನಿಯರ್‌ಗಳಿಗೆ ಮಾರ್ಗದರ್ಶನ ಮಾಡಿರುವ, ಅವರಿಂದ ಕೆಲಸ ಮಾಡಿಸಿರುವ ಡಿ.ಕೆ.ಶಿವಕುಮಾರ್ ಅಂಥವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಎಂಜಿನಿಯರ್‌ಗಳಿಗೆ ಸ್ಫೂರ್ತಿಯ ವಿಚಾರ ಎಂದರು.
ದುಬೈನಲ್ಲಿ ಮನೆ ಅತ್ಯುತ್ತಮ ಹೂಡಿಕೆ: ಶಶಿಧರ ನಾಗರಾಜಪ್ಪ
ದುಬೈನಲ್ಲಿ ಮನೆ ಮಾಡಿಕೊಳ್ಳುವುದು ಅತ್ಯುತ್ತಮ ಹೂಡಿಕೆ. ಬೆಂಗಳೂರಿಗಿಂತ ಇಲ್ಲಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಪರ್ವ ಗ್ರೂಪ್‌ನ ಸಹ ಸಂಸ್ಥಾಪಕ ಶಶಿಧರ ನಾಗರಾಜಪ್ಪ ತಿಳಿಸಿದರು. ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ನ್ಯೂಸ್ ಏರ್ಪಡಿಸಿದ್ದ ‘ಎಮಿನೆಂಟ್ ಎಂಜಿನಿಯರ್-2025’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರಲ್ಲಿ ಒಂದು ಉತ್ತಮ ಫ್ಲಾಟ್ ತೆಗೆದುಕೊಳ್ಳಲು ₹3- ₹4ಕೋಟಿ ಬೇಕು. ಅದೇ ಮೊತ್ತವನ್ನು ದುಬೈನಲ್ಲಿ ರಿಯಲ್ ಎಸ್ಟೆಟ್, ಮನೆ ಖರೀದಿಗೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವಿದೆ. 194 ದೇಶಗಳ ಜನರಿರುವ ನಿಜವಾದ ಕಾಸ್ಮೋಪಾಲಿಟನ್ ಸಿಟಿಯಾಗಿ ದುಬೈ ಬೆಳೆದಿದೆ.
ನಿರಂತರ ಹಾಗೂ ಸ್ಥಿರ ಬೆಳವಣಿಗೆಯ ದೇಶ ಅದಾಗಿದ್ದು, ಡಾಲರ್‌ಗಿಂತ ಹೆಚ್ಚಿನ ಮೌಲ್ಯವನ್ನು ದುಬೈ ಕರೆನ್ಸಿ ಹೊಂದಿದೆ. ಅಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶವೂ ಸಿಗುತ್ತದೆ. ಹೀಗಾಗಿ ಈ ಬಗ್ಗೆ ಕನ್ನಡಿಗರು ಯೋಚಿಸಬೇಕು ಎಂದರು. ಅ.14ರಂದು ನಮ್ಮ ವಾಣಿಜ್ಯ ಕಟ್ಟಡ ಉದ್ಘಾಟನೆ ಆಗುತ್ತಿದ್ದು, ಆಸಕ್ತರು ಆಗಮಿಸಿ ಅಲ್ಲಿನ ಹೂಡಿಕೆ, ಮನೆ ಖರೀದಿ ವಿಚಾರಗಳನ್ನು ಕಣ್ಣಾರೆ ತಿಳಿದುಕೊಳ್ಳಬಹುದು ಎಂದು ಹೇಳಿದರು. ಇದಕ್ಕೂ ಮುನ್ನ ಗೋಲ್ ಕಾರ್ಪೊರೇಷನ್ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿಗಳು ಹೂಡಿಕೆಯ ಕುರಿತು ಆರ್ಥಿಕ ಸಲಹೆ ನೀಡಿದರು.
