ಹಲವು ಕ್ಷೇತ್ರಗಳ ಅತ್ಯುತ್ತಮ ಮಾದರಿಯನ್ನು ಮುನ್ನೆಲೆಗೆ ತಂದು ಸಮಾಜವನ್ನು ಪ್ರೇರೇಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರದಾನ ಸಂಪಾದಕರಾದ ರವಿ ಹೆಗಡೆ ಹೇಳಿದರು.
ಬೆಂಗಳೂರು (ಅ.19): ಕರ್ನಾಟಕದ ಸುದ್ದಿಸಂಸ್ಥೆ ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ನ್ಯೂಸ್ ವಿಶ್ವವನ್ನೇ ಆಡುಂಬೊಲವಾಗಿಸಿಕೊಂಡು, ಹಲವು ಕ್ಷೇತ್ರಗಳ ಅತ್ಯುತ್ತಮ ಮಾದರಿಯನ್ನು ಮುನ್ನೆಲೆಗೆ ತಂದು ಸಮಾಜವನ್ನು ಪ್ರೇರೇಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರದಾನ ಸಂಪಾದಕರಾದ ರವಿ ಹೆಗಡೆ ಹೇಳಿದರು. ಸುದ್ದಿಸಂಸ್ಥೆ ‘ಕನ್ನಡಪ್ರಭ’-‘ಏಷಿಯಾನೆಟ್ ಸುವರ್ಣ ನ್ಯೂಸ್’ ಆಯೋಜಿಸಿದ್ದ ‘ಎಮಿನೆಂಟ್ ಎಂಜಿನಿಯರ್-2025’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮದು ಕನ್ನಡ ಮಾಧ್ಯಮ ಸಂಸ್ಥೆಯಾದರೂ ನಮ್ಮ ಕಾರ್ಯವ್ಯಾಪ್ತಿ ಕನ್ನಡನಾಡಿಗೆ ಸೀಮಿತ ಆಗಿಲ್ಲ. ಜಾಗತೀಕರಣದ ಈ ಕಾಲಘಟ್ಟದಲ್ಲಿ ವಿಶ್ವವೇ ನಮ್ಮ ಆಡುಂಬೊಲ ಆಗಿದೆ. ವಿಶ್ವಮಟ್ಟದಲ್ಲಿ ನಮ್ಮ ಯೋಜನೆಗಳು ಜಾರಿಗೊಳ್ಳುತ್ತಿದ್ದು, ಅತ್ಯುತ್ತಮ ಮಾದರಿ ಹುಡುಕಿ ಸಮಾಜದ ಎದುರಿಡುವಲ್ಲಿ ನಾವು ಟ್ರೆಂಡ್ ಸೆಟ್ಟರ್ ಆಗಿದ್ದೇವೆ ಎಂದು ಹೇಳಿದರು. ಒಂದು ದೇಶ ಎಷ್ಟು ಬೆಳೆದಿದೆ, ಎಷ್ಟು ಪ್ರಗತಿಯಾಗಿದೆ ಎಂದು ನೋಡಬೇಕಾದರೆ ಆ ದೇಶದ ಮೂಲಸೌಕರ್ಯ ಗಮನಿಸಬೇಕು. ರಸ್ತೆ, ರೈಲ್ವೆ, ನೀರಿನ ವ್ಯವಸ್ಥೆ, ಅಣೆಕಟ್ಟು ಸೇರಿ ಇತರೆ ಸೌಲಭ್ಯ ಯಾವ ಮಟ್ಟದಲ್ಲಿದೆ ಎಂದು ನೋಡಿದರೆ ಆ ದೇಶ ಎಷ್ಟು ಮುಂದುವರಿದಿದೆ ಎಂದು ತಿಳಿಯುತ್ತದೆ. ಈ ರೀತಿಯ ಪ್ರಗತಿ ಹಿಂದೆ ಇರುವವರು ಎಂಜಿನಿಯರ್‌ಗಳು ಎಂಬುದನ್ನು ಮರೆಯಬಾರದು ಎಂದರು.
ಒಂದು ದೇಶ, ಒಂದು ನಾಡನ್ನು ಅಕ್ಷರಶಃ ಕಟ್ಟುವವರು ಎಂಜಿನಿಯರ್‌ಗಳು. ಇಂತಹ ಎಂಜಿನಿಯರ್‌ಗಳನ್ನು ಸೃಷ್ಟಿಸಿದ ಈ ದೇಶ ಕೇವಲ ಭಾರತಕ್ಕೆ ಮಾತ್ರವಲ್ಲದೆ ವಿಶ್ವಾದ್ಯಂತ ಕೊಡುಗೆ ನೀಡುತ್ತದೆ. ಭಾರತ ಮಾತ್ರವಲ್ಲದೆ ಅನೇಕ ವಿದೇಶಗಳ ಕಟ್ಟುವಿಕೆಯಲ್ಲಿ ನಮ್ಮ ಎಂಜಿನಿಯರ್‌ಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಏನೂ ಇಲ್ಲದ ಹಾವಾಡಿಗರ ದೇಶ ಎಂದು ಕರೆಸಿಕೊಂಡಿದ್ದ ಭಾರತ ಇಂದು ವಿಶ್ವದಲ್ಲಿ ಅತ್ಯಂತ ಉತ್ಕೃಷ್ಟ ಮೂಲಸೌಕರ್ಯ ಹೊಂದಿದೆ. ದೇಶದಲ್ಲಿ ಕರ್ನಾಟಕ ಅತ್ಯಂತ ಪ್ರಗತಿ ಹೊಂದಿದ ರಾಜ್ಯ ಎಂದು ಕರೆಸಿಕೊಳ್ಳುವ ಹೆಗ್ಗಳಿಕೆ ಹಿಂದಿರುವುದು ನಮ್ಮ ಎಂಜಿನಿಯರ್‌ಗಳು. ಹಲವು ಎಂಜಿನಿಯರ್‌ಗಳು ಇಲ್ಲಿಂದ ವಲಸೆ ಹೋದರೆ, ಇನ್ನು ಹಲವರು ಇಲ್ಲಿಯೇ ಉಳಿದುಕೊಂಡು ದೇಶ ಕಟ್ಟಲು ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ನೀಡುತ್ತಿರುವುದು ಒಂದು ನೆಪ ಮಾತ್ರ. ಸಮಾಜದ ಅತ್ಯುತ್ತಮ ಮಾದರಿಗಳನ್ನು ಮುಂದಿಡುವುದು ನಮ್ಮ ಮೂಲ ಉದ್ದೇಶ. ಮಾಧ್ಯಮಗಳು ಸದಾ ನಕಾರಾತ್ಮಕ ಧೋರಣೆಯ ವರದಿ ತೋರಿಸುತ್ತವೆ. ಇನ್ನೊಬ್ಬರ ಜಗಳ, ಬೇಡದ ವಿಚಾರಗಳನ್ನು ಬಿತ್ತರಿಸುತ್ತವೆ. ಒಳ್ಳೆ ವಿಚಾರಗಳನ್ನು ತೋರಿಸುವುದಿಲ್ಲ ಎಂಬ ಆರೋಪಗಳಿವೆ. ಆದರೆ, ಇಂತಹ ಆರೋಪಗಳ ನಡುವೆ ಸಂಸ್ಥೆ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದ್ದು, ಈ ವಿಚಾರದಲ್ಲಿ ಟ್ರೆಂಡ್ ಸೆಟ್ಟರ್ ಆಗಿದೆ. ಈ ವಿಚಾರದಲ್ಲಿ ಸಂಸ್ಥೆಯ ಜತೆಗೆ ಸ್ವಾಮೀಜಿಗಳು, ಥಿಂಕ್ ಟ್ಯಾಂಕ್‌ಗಳು, ಸಂಪನ್ಮೂಲ ವ್ಯಕ್ತಿಗಳು, ರಾಜಕಾರಣಿಗಳು ಸೇರಿ ಸಮಾಜದ ಗಣ್ಯರು ಸಾಥ್ ಕೊಟ್ಟಿದ್ದಾರೆ ಎಂದರು.
ಜಾಗತಿಕ ಮಟ್ಟದ ಶೃಂಗ
ಸಾಗರದಾಚೆಗೆ ಅಂದರೆ ದುಬೈ ಇಂಡಿಯಾ ಇಂಟರ್‌ನ್ಯಾಷನಲ್ ಅವಾರ್ಡ್, ಮಲೇಷ್ಯಾ ಇಂಡಿಯಾ ಐಕಾನಿಕ್ ಅವಾರ್ಡ್, ಲಂಡನ್ ಲೀಡರ್‌ಶಿಪ್ ಸಮ್ಮಿಟ್, ವಿಯೆಟ್ನಾಂ ಇಂಡಿಯಾ ಇಂಟರ್‌ನ್ಯಾಷನಲ್ ಅವಾರ್ಡ್, ಹಾಂಗ್‌ಕಾಂಗ್ ಇಂಡಿಯಾ ಬ್ಯುಸಿನೆಸ್ ಕಾನ್‌ಕ್ಲೇವ್ ಸೇರಿ ಹಲವು ಜಾಗತಿಕ ಮಟ್ಟದ ಶೃಂಗಗಳನ್ನು ನಡೆಸಲಾಗುತ್ತಿದೆ. ಸಮಾಜದ ಅತ್ಯುತ್ತಮ ಮಾದರಿಗಳು ಒಂದರಿಂದ ಹತ್ತಾಗಿ ಅಲ್ಲಿಂದ ಸಾವಿರಾರು ಮಾದರಿಗಳು ಹುಟ್ಟಿಕೊಳ್ಳಲಿ ಎಂಬುದು ನಮ್ಮ ಉದ್ದೇಶ. ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗ, ಇದು ಶಾಶ್ವತ ವಿರೋಧ ಪಕ್ಷ ಎಂಬುದು ನಿಜ. ಹಾಗೆಂದು ಟೀಕಿಸುವುದೇ ಮಾಧ್ಯಮಗಳ ಕೆಲಸ ಆಗಬಾರದು. ಸರ್ಕಾರದ ಜತೆಗೆ ನಿಂತು ಸಾಮಾಜಿಕ ಜವಾಬ್ದಾರಿ ನಿಭಾಯಿಬೇಕು. ಎಷ್ಟೊ ಬಾರಿ ಸರ್ಕಾರ ತಲುಪದ ಜಾಗಕ್ಕೆ ಹೋಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಕೊಡಗು ಪ್ರವಾಹ, ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿದ ಸಂದರ್ಭದಲ್ಲಿ ಸ್ಪಂದಿಸಿದೆ. ವನ್ಯಜೀವಿ ಸಂರಕ್ಷಣಾ ಅಭಿಯಾನ, ಅಸಾಮಾನ್ಯ ಕನ್ನಡಿಗ, ಕರ್ನಾಟಕ ಬ್ಯುಸಿನೆಸ್ ಅವಾರ್ಡ್, ರೈತರತ್ನ, ಕರ್ನಾಟಕ ಏಳು ಅದ್ಭುತಗಳು, ವೈದ್ಯರ ಎಕ್ಸ್‌ಲೆನ್ಸ್ ಅವಾರ್ಡ್ ನೀಡಲಾಗುತ್ತಿದೆ. ಸಂಸ್ಥೆಯಿಂದ ಗುರುತಿಸಲ್ಪಟ್ಟು ಪ್ರಶಸ್ತಿ ಪಡೆದವರು ಮುಂದೆ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ತಿಳಿದರು.
