ಚಾಮರಾಜನಗರ[ಡಿ.20]: ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದ ಆದಾಯ ಹೆಚ್ಚಳವೇ ವಿಷವಾಗಿದ್ದು, ಅದು ಗೋಪುರ ನಿರ್ಮಾಣದ ಹೆಸರಿನಲ್ಲಿ ಭಕ್ತರ ಪಾಲಿಗೆ ಕಲ್ಲಾಯಿತು. ದೇವಾಲಯದ ಆಡಳಿತ ನಿರ್ವಹಿಸುತ್ತಿದ್ದ ಸೇವಾ ಟ್ರಸ್ಟ್‌ನ ಸದಸ್ಯರ ನಡುವೆ ಆಂತರಿಕ ಕಲಹ, ವೈಷಮ್ಯವೇ ಪ್ರಸಾದದಲ್ಲಿ ವಿಷ ಬೆರೆಸುವಂತೆ ಮಾಡಿದೆ. ಈ ಆಂತರಿಕ ಕಚ್ಚಾಟವೇ ಗೋಪುರ ನಿರ್ಮಾಣದ ಹೆಸರಿನಲ್ಲಿ 15 ಮಂದಿಯನ್ನು ಬಲಿ ಪಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಮಾರಮ್ಮನ ದೇವಸ್ಥಾನ ಪ್ರಸಿದ್ಧಿಯಾಗುತ್ತಿದಂತೆ ದೇವಾಲಯಕ್ಕೆ ಮೈಸೂರು, ಬೆಂಗಳೂರು ಪಕ್ಕದ ತಮಿಳುನಾಡುಗಳಿಂದಲೂ ಭಕ್ತರು ಬರಲು ಆರಂಭಿಸಿದ್ದರು. ಪ್ರತಿ ಸೋಮವಾರ, ಮಂಗಳವಾರ, ಶುಕ್ರವಾರ ಹೆಚ್ಚಿನ ಭಕ್ತರು ಸೇರುತ್ತಿದ್ದರು. ಮಾರಮ್ಮನಿಗೆ ಕೋಳಿ, ಕುರಿ-ಆಡುಗಳನ್ನು ಬಲಿ ಕೊಟ್ಟು, ನಂತರ ದೇವಾಲಯದ ಹೊರ ಆವರಣದಲ್ಲಿ ಮಾಂಸಾಹಾರ ಸಿದ್ಧಪಡಿಸಿ ಪ್ರಸಾದ ಸ್ವೀಕರಿಸುವುದು ನಡೆದುಕೊಂಡು ಬಂದಿದೆ. ಹೀಗೆ ಕೆಲವು ವರ್ಷಗಳಿಂದ ದೇವಾಲಯಕ್ಕೆ ಉತ್ತಮ ಆದಾಯ ಹರಿವು ಹೆಚ್ಚಳವಾಗುತ್ತಿದಂತೆ ಟ್ರಸ್ಟ್‌ನ ಪದಾಧಿಕಾರಿಗಳ ನಡುವೆ ಭಿನ್ನಾಭಿಪ್ರಾಯವೂ ಹೆಚ್ಚಳವಾಯಿತು.

"

ಇವಳೇ ವಿಷ ಕನ್ಯೆ: ಅಂಬಿಕಾ ವಿಷ ಹಾಕಿದ್ದು?, ಯಾರು ಹೇಳಿದ್ದು?

ಪೂಜೆ ವಿಚಾರದಲ್ಲಿ ಕಲಹ

ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಈ ದೇವಾಲಯ ಅಭಿವೃದ್ಧಿ ಹೊಂದಿದ್ದು 30 ವರ್ಷಗಳ ಹಿಂದೆ. ಅದುವರೆಗೂ ಅಲ್ಲಿ ಉದ್ಭವಮೂರ್ತಿಯೊಂದು ಇತ್ತು ಎಂದು ಹೇಳಲಾಗುತ್ತಿದೆ. ಬರಗೂರು ಗ್ರಾಮದವರು ಆ ಸಂದರ್ಭದಲ್ಲಿ ಪೂಜೆ ಮಾಡುತ್ತಿದ್ದರು. ನಂತರ ಸ್ಥಳೀಯರಾದ ದುಮ್ಮಾಪ್ಪ ಅವರು ಪೂಜೆಯ ಮಾಡುತ್ತಿದ್ದರು. ದುಮ್ಮಾಪ್ಪ ಅವರ ಮೈಮೇಲೆ ದೇವರು ಬರುತ್ತಿತ್ತು. ದೇವಸ್ಥಾನಕ್ಕೆ ಹೆಚ್ಚು ಪ್ರಚಾರಕ್ಕೆ ಬರುತ್ತಿದಂತೆ ಬರಗೂರಿನವರು ಬಂದು ಪೂಜೆಯ ಹಕ್ಕನ್ನು ತಮಗೆ ನೀಡಬೇಕು ಎಂದು ಗಲಾಟೆ ಮಾಡಿದ್ದರು. ಪ್ರಕರಣ ಕೋರ್ಟ್‌ ಮೆಟ್ಟಿಲೇರಿ, ಎರಡೂ ಕಡೆಯವರು ಮಾತನಾಡಿಕೊಂಡು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ನ್ಯಾಯಾಲಯ ಹೇಳಿತ್ತು. ನಂತರ ಸುಳ್ವಾಡಿಯವರೇ ಪೂಜೆ ಮಾಡುತ್ತಿದ್ದರು. 8 ವರ್ಷಗಳ ಹಿಂದೆ ದುಮ್ಮಾಪ್ಪ ಮೃತಪಟ್ಟನಂತರ, ಪೂಜೆ ಮಾಡುವ ವಿಚಾರದಲ್ಲಿ ಮತ್ತೆ ಎರಡೂ ಗ್ರಾಮದವರಿಗೆ ಜಗಳ ಉಂಟಾಯಿತು. ಮಹದೇಶ್ವರ ಬೆಟ್ಟದ ಸಾಲೂರು ಮಠದ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಬಿಕ್ಕಟ್ಟು ಪರಿಹರಿಸುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ದೇವಾಲಯದ ಆಡಳಿತ ನಿರ್ವಹಿಸಲು ಟ್ರಸ್ಟ್‌ ರಚಿಸಲು ತೀರ್ಮಾನಿಸಲಾಯಿತು.

ಪ್ರಸಾದದಲ್ಲಿದ್ದ ವಿಷದ ಹೆಸರು ಮೊನೋಕ್ರೊಟೊಪಾಸ್, ಪರಿಣಾಮಗಳು ಏನೇನು?

ಹಣದ ವಿಚಾರಕ್ಕೆ ಮನಸ್ತಾಪ

ಮಾರಮ್ಮ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಬಂದ ಚಿನ್ನಾಭರಣ ಹಾಗೂ ಹಣವನ್ನು ಟ್ರಸ್ಟ್‌ ಅಧ್ಯಕ್ಷರಾದ ಇಮ್ಮಡಿ ಮಹದೇವಸ್ವಾಮಿ ಕೊಂಡೊಯ್ಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಎರಡು ಬಣದ ನಡುವೆ ಮನಸ್ಥಾಪ ಗಲಾಟೆಗಳು ನಡೆಯುತ್ತಿದ್ದವು. ಈ ನಡುವೆ ದೇವಸ್ಥಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇಮ್ಮಡಿ ಸ್ವಾಮೀಜಿ ಪ್ರಯತ್ನ ನಡೆಸುತ್ತಿದ್ದರು. ಇತ್ತೀಚೆಗೆ ಟ್ರಸ್ಟಿಚಿನ್ನಪ್ಪಿ ಮತ್ತಿತರರು ಸ್ವಾಮೀಜಿಯ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು ಎಲ್ಲ ವ್ಯವಹಾರಕ್ಕೂ ಲೆಕ್ಕಪತ್ರ ಇಡುವಂತೆ ನೋಡಿಕೊಂಡಿದ್ದರು. ಇದು ಇಮ್ಮಡಿ ಸ್ವಾಮೀಜಿಗೆ ನುಂಗಲಾರದ ತುತ್ತಾಗಿತ್ತು. ಈ ನಡುವೆ ಅವರು ಸುಮಾರು ಒಂದೂವರೆ ಕೋಟಿ ರೂ ಅಂದಾಜು ವೆಚ್ಚದಲ್ಲಿ ಗೋಪುರ ನಿರ್ಮಾಣಕ್ಕೆ ಯೋಜಿಸಿದ್ದರು.

ಆದರೆ, ಟ್ರಸ್ಟ್‌ನ ಖಾತೆಯಲ್ಲಿ 17 ಲಕ್ಷ ರು. ಮಾತ್ರ ಇದ್ದು, ಉಳಿಕೆ ಹಣವನ್ನು ಭಕ್ತರಿಂದ ಸಂಗ್ರಹಿಸಲು ನಿರ್ಧರಿಸಿದ್ದರು. ಆದರೆ ಟ್ರಸ್ಟ್‌ನಲ್ಲಿ ಒಂದೂವರೆ ಕೋಟಿ ಹಣವಿಲ್ಲದ ಕಾರಣ ಗೋಪುರ ನಿರ್ಮಾಣ ಮುಂದೂಡುವಂತೆ ಇನ್ನೊಂದು ಬಣ ಒತ್ತಾಯಿಸಿತ್ತು. ಆದರೆ ಇದಕ್ಕೆ ಸ್ವಾಮೀಜಿ ಸೊಪ್ಪು ಹಾಕದೆ ತಾವೇ ಗೋಪುರ ನಿರ್ಮಾಣಕ್ಕೆ ಪ್ಲಾನ್‌ ಹಾಕಿಸಿದ್ದರು.

ಸುಳ್ವಾಡಿ ವಿಷ ಪ್ರಕರಣ: ಪ್ರಸಾದದಲ್ಲಿತ್ತು ಮಾರಾಣಾಂತಿಕ ಕೀಟನಾಶಕ

ಈ ಸಂದರ್ಭದಲ್ಲಿ ಟ್ರಸ್ಟಿಚಿನ್ನಪ್ಪಿ ಗೋಪುರ ನಿರ್ಮಾಣ ಕಾರ್ಯವನ್ನು ತಾವೇ ಕೈಗೆತ್ತಿಕೊಳ್ಳಲು ತೀರ್ಮಾನಿಸಿ ಡಿ.14ರಂದು ಶಂಕುಸ್ಥಾಪನೆ ನೆರವೇರಿಸಲು ಸಮಾರಂಭ ನಿಗದಿ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಮಹದೇವಸ್ವಾಮೀಜಿ ಬಣವು ಎದುರಾಳಿ ಬಣಕ್ಕೆ ಕೆಟ್ಟಹೆಸರು ತರುವ ಸಲುವಾಗಿ ಪ್ರಸಾದದಲ್ಲಿ ವಿಷಪ್ರಾಶನ ಮಾಡುವ ಸಂಚು ರೂಪಿಸಿತು. ಈ ವಿಷಯ ಅರಿಯದ ಚಿನ್ನಪ್ಪಿ ಹಾಗೂ ಇತರರು ಸಮಾರಂಭಕ್ಕೆ ಬಂದ ಭಕ್ತರಿಗೆ ವಿಷಮಿಶ್ರಿತ ಪ್ರಸಾದ ವಿತರಿಸಿದ್ದಾರೆ.