ಕಳೆದ ಎರಡು ವರ್ಷದಿಂದ ಅಬಕಾರಿ ಇಲಾಖೆಯು ಬಜೆಟ್‌ನಲ್ಲಿ ನಿಗದಿಪಡಿಸಿದ ರಾಜಸ್ವ ಸಂಗ್ರಹದ 'ಟಾರ್ಗೆಟ್' ತಲುಪುವಲ್ಲಿ ವಿಫಲವಾಗಿದೆ. 2024-25 ನೇ ಸಾಲಿನಲ್ಲಂತೂ ಬರೋಬ್ಬರಿ 2995 ಕೋಟಿ ರು. 'ಖೋತಾ' ಕಂಡುಬಂದಿದೆ. 

• ಸಿದ್ದು ಚಿಕ್ಕಬಳ್ಳೇಕೆರೆ 

ಬೆಂಗಳೂರು (ಏ.10): ಕಳೆದ ಎರಡು ವರ್ಷದಿಂದ ಅಬಕಾರಿ ಇಲಾಖೆಯು ಬಜೆಟ್‌ನಲ್ಲಿ ನಿಗದಿಪಡಿಸಿದ ರಾಜಸ್ವ ಸಂಗ್ರಹದ 'ಟಾರ್ಗೆಟ್' ತಲುಪುವಲ್ಲಿ ವಿಫಲವಾಗಿದೆ. 2024-25 ನೇ ಸಾಲಿನಲ್ಲಂತೂ ಬರೋಬ್ಬರಿ 2995 ಕೋಟಿ ರು. 'ಖೋತಾ' ಕಂಡುಬಂದಿದೆ. 2024-25 ನೇ ಸಾಲಿಗೆ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 38,525 ಕೋಟಿ ರು. ರಾಜಸ್ವ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ ವರ್ಷಾಂತ್ಯಕ್ಕೆ 35,530 ಕೋಟಿ ರು. ಮಾತ್ರ ಸಂಗ್ರಹವಾಗಿದ್ದು 2,995 ಕೋಟಿ ರು. 'ಕೊರತೆ'ಯಾಗಿದೆ. 2023-24 ನೇ ಸಾಲಿನಲ್ಲೂ ನಿರೀಕ್ಷಿತ ಗುರಿ 'ಸಾಧನೆ' ಆಗಿರಲಿಲ್ಲ. 

ಬಜೆಟ್‌ನಲ್ಲಿ 36,000 ಕೋಟಿ ರು. ರಾಜಸ್ವ ನಿರೀಕ್ಷೆ ಮಾಡಲಾಗಿತ್ತಾದರೂ 34,628 ಕೋಟಿ ರು. ಅಷ್ಟೇ ಸಂಗ್ರಹವಾಗಿತ್ತು. 2018ರಿಂದ ಈಚಿಗಿನ ಅಂಕಿ-ಅಂಶಗಳನ್ನು ಗಮನಿಸಿ ದರೆ 2023-24ನೇ ಸಾಲಿನಲ್ಲಿ ಪ್ರಥಮ ಬಾರಿಗೆ ರಾಜಸ್ವ ಸಂಗ್ರಹ ಗುರಿ ವಿಫಲವಾಗಿತ್ತು. 2024-25ನೇ ಸಾಲಿನಲ್ಲೂ ಇದು ಪುನರಾವರ್ತನೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಬಕಾರಿ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಪ್ರಮಾಣದ ರಾಜಸ್ವ ಸಂಗ್ರಹದ ಟಾರ್ಗೆಟ್ ನಿಗದಿ ಮಾಡುತ್ತಿರುವುದೂ ಈ ರೀತಿಯ ಕೊರತೆ ಉಂಟಾಗಲು ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. 

ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ನಿಂದ 'ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ' ಅಭಿಯಾನ

ಮದ್ಯ ಮಾರಾಟ ಹೆಚ್ಚಳ: ಮತ್ತೊಂದೆಡೆ, 2023-24 ನೇ ಸಾಲಿಗೆ ಹೋಲಿಸಿದರೆ 2024-25 ರಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಳವಾಗಿದೆ. 2023-24ರಲ್ಲಿ 705.53 ಲಕ್ಷ ಬಾಕ್ಸ್ ಐಎಂಎಲ್ (ದೇಶೀಯ ಮದ್ಯ) ಮತ್ತು 444.05 ಮಾರಾಟವಾಗಿದ್ದರೆ, 2024-25ರಲ್ಲಿ 708.85 ಲಕ್ಷ ಬಾಕ್ಸ್ ಐಎಂಎಲ್ ಮತ್ತು 450.36 ಲಕ್ಷ ಬಾಕ್ಸ್‌ ಬಿಯರ್ ಮಾರಾಟವಾಗಿದ್ದು, ಒಟ್ಟಾರೆ ಕ್ರಮವಾಗಿ ಶೇ.0.47 ಮತ್ತು 1.42 ರಷ್ಟು ಬೆಳವಣಿಗೆ ಕಂಡುಬಂದಿದೆ. 

ಅಕ್ಟೋಬರ್‌ನಿಂದ ಬಿಯರ್ ಮಾರಾಟ ಕುಸಿತ: ಆದರೆ, ಕಳೆದ 2023-24 ನೇ ಸಾಲಿನ ವಹಿವಾಟಿಗೆ ಹೋಲಿಸಿದರೆ 2024 ಅಕ್ಟೋಬರ್‌ನಿಂದ 2025 ಮಾಚ್ ೯ವರೆಗೂ ಬಿಯರ್ ಮಾರಾಟದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಬಿಯರ್ ಬೆಲೆ ಹೆಚ್ಚಿಸಿದ್ದೂ ಮಾರಾಟಕ್ಕೆ ಹೊಡೆತ ಬೀಳಲು ಪ್ರಮುಖ ಕಾರಣವಾಯಿತು ಎಂದು ಮೂಲಗಳು ಸ್ಪಷ್ಟಪಡಿಸಿವೆ. 

ಹೊಸ ಮೆಟ್ರೋ ಪಿಲ್ಲರ್‌ಗಳ ನಡುವೆ ಮಣ್ಣು ರಹಿತ ಗಾರ್ಡನ್‌ ನಿರ್ಮಾಣ

ಸರ್ಕಾರದ ವರಮಾನ ಮತ್ತು ಸನ್ನದುದಾರರ ಹಿತಾಸಕ್ತಿ ಕಾಪಾಡುವ ಅಧಿಕಾರಿಗಳು ಇಂದು ಅಬಕಾರಿ ಇಲಾಖೆಯಲ್ಲಿ ವಿರಳವಾಗಿದ್ದಾರೆ. ರಾಜಸ್ವ ಸಂಗ್ರಹ ಕುಂಠಿತವಾಗಲು ಇದೇ ಪ್ರಮುಖ ಕಾರಣ.
-ಗೋವಿಂದರಾಜ್ ಹೆಗ್ಡೆ, ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ