ಕರ್ತವ್ಯದ ಒತ್ತಡದಿಂದ ಹೊರಬರಲು ಕೊಡಗು ಜಿಲ್ಲಾ ಪೊಲೀಸರಿಗಾಗಿ ಮಡಿಕೇರಿಯಲ್ಲಿ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ವಾಲಿಬಾಲ್, ಕಬ್ಬಡಿ, ಹಗ್ಗಜಗ್ಗಾಟದಂತಹ ವಿವಿಧ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ನ.30): ಅವರೆಲ್ಲಾ ರಾಜ್ಯದ ಆಂತರಿಕ ಭದ್ರತೆಯನ್ನು ಕಾಪಾಡುವವರು. ದಿನದ 24 ಗಂಟೆಯು ಕಾನೂನು ಕಟ್ಟಲೆ ಅಂತ ಫುಲ್ ಬ್ಯುಸಿಯಾಗಿರುತ್ತಿದ್ದವರು. ಆದರೆ ಕಳೆದ ಮೂರು ದಿನಗಳಿಂದ ಆ ಎಲ್ಲಾ ಜಂಜಾಟಗಳಿಂದ ಹೊರ ಬಂದು ಫುಲ್ ಎಂಜಾಯ್ ಮಾಡಿದ್ರು. ಹೌದು ಪೊಲೀಸರೆಲ್ಲರೂ ಕ್ರೀಡಾಪಟುಗಳಾಗಿದ್ದ ಆ ಪರಿ ಹೇಗಿತ್ತು ನೋಡಿ. ಪೊಲೀಸರು ಎಂದ್ಮೇಲೆ ಗೊತ್ತಲ್ವಾ ಯಾವಾಗಲೂ ಆ ಕೇಸು, ಈ ಕಳ್ಳನನ್ನು ಹುಡುಕು, ಇಲ್ಲ ಆ ಕಾರ್ಯಕ್ರಮದ ಭದ್ರತೆಯನ್ನು ನೋಡಿಕೊಳ್ಳುವುದು, ಇಲ್ಲವೆ ಕೋರ್ಟಿನ ಸಮನ್ಸ್ ಜಾರಿ ಮಾಡುವುದು ಹೀಗೆ.

ಅಬ್ಬಬ್ಬಾ ಒಂದಾ ಎರಡ ಅವರ ಕರ್ತವ್ಯ, ಹೇಳುತ್ತಾ ಓದರೆ ದೊಡ್ಡ ಲಿಸ್ಟೇ ಬೆಳೆಯುತ್ತಾ ಹೋಗುತ್ತೆ. ಹೀಗೆ ವರ್ಷವಿಡೀ ದಿನ 24 ಗಂಟೆ ಕರ್ತವ್ಯದಲ್ಲೇ ಮುಳುಗುವ ಪೊಲೀಸರು ನಮ್ಮ ಹಾಗೆ ಮನುಷ್ಯರೇ ಅಲ್ವಾ.? ಅದರಲ್ಲೂ ಅವರಿಗೆ ಒತ್ತಡ ಎಲ್ಲರಿಗಿಂತಲೂ ಮಿಗಿಲಾಗಿಯೇ ಇರುತ್ತೆ. ಅತೀ ಹೆಚ್ಚು ಒತ್ತಡದಲ್ಲಿ ಕರ್ತವ್ಯ ನಿಭಾಯಿಸುವ ಪೊಲೀಸರಿಗೂ ಒಂದಿಷ್ಟು ರಿಲ್ಯಾಕ್ಸ್ ಎನ್ನುವುದು ಬೇಕಲ್ವಾ.? ಅದಕ್ಕಾಗಿಯೇ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಮಡಿಕೇರಿಯಲ್ಲಿ ಮೂರು ದಿನಗಳಿಂದ ಆಯೋಜಿಸಿತ್ತು. ಕರ್ತವ್ಯದ ಒತ್ತಡದಿಂದ ಹೊರ ಬಂದಿದ್ದ ನೂರಾರು ಪೊಲೀಸರು ಮಡಿಕೇರಿಯ ಜಿಲ್ಲಾ ಕವಾಯಿತು ಮೈದಾನದಲ್ಲಿ ನಡೆದ ಆಟೋಟಗಳಲ್ಲಿ ಮಿಂದೆದ್ದರು.

ವಾಲಿಬಾಲ್, ಕಬ್ಬಡಿ, ಓಟದ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಮಿಂದೆದ್ದರು. ಮಹಿಳಾ ಪೊಲೀಸರಿಗಾಗಿ ಥ್ರೋಬಾಲ್, ಭಾರದ ಗುಂಡು ಎಸೆತ, ಡಿಸ್ಸ್, ರನ್ನಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಅಧಿಕಾರಿ, ಸಿಬ್ಬಂದಿ ಎನ್ನುವ ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ಹೊಂದಾಗಿ ಕ್ರೀಡೆಗಳಲ್ಲಿ ಮಿಂದೆದ್ದು ಎಂಜಾಯ್ ಮಾಡಿದರು.

ಇನ್ನು ಪುರಷ ಸಿಬ್ಬಂದಿಗಾಗಿ ನಡೆದ ಹಗ್ಗಜಗ್ಗಾಟವಂತು ಎಲ್ಲಾ ಕ್ರೀಡಾಪಟುಗಳು ಹಾಗೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ವೃತ್ತ ನಿರೀಕ್ಷಕರು, ಡಿವೈಎಸ್ಪಿಗಳು, ಅಷ್ಟೇ ಅಲ್ಲ ಎಎಸ್ಪಿ, ಎಸ್ಪಿ ಸೇರಿದಂತೆ ಎಲ್ಲರೂ ತಮ್ಮ ಕುಟುಂಬ ಸಮೇತರಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು. ಸ್ಪರ್ಧೆಗಳು ಮುಗಿಯುತ್ತಿದ್ದಂತೆ ವಿಜೇತರಾದ ತಂಡಗಳು, ಸ್ಪರ್ಧಿಗಳು ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದರು. ಆ ಮೂಲಕ ಎಲ್ಲಾ ಒತ್ತಡ ಹಾಗೂ ಜಂಜಾಟಗಳಿಂದ ಮೂರು ದಿನಗಳಿಂದ ಹೊರಬಂದಿದ್ದೇವೆ ಎಂದು ಸಿಬ್ಬಂದಿ ಭವ್ಯ ಹೇಳಿದರು.

ದೈಹಿಕ ಶ್ರಮ ಹಾಕುವ ಕ್ರೀಡೆಗಳು ಅಷ್ಟೇ ಅಲ್ಲ, ಸಾಕಷ್ಟು ಪೊಲೀಸರು ಚಿತ್ರಗೀತೆ, ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇನ್ನು ಕೆಲವರಂತು ಕರೋಖೆಗಳಿಗೆ ಹಾಡಿ ಎಲ್ಲರ ಮನಸ್ಸುಗಳನ್ನು ಮುದಗೊಳಿಸಿದರು. ಜಿಲ್ಲಾ ಕೇಂದ್ರದಲ್ಲಿ ನಡೆದ ವಾರ್ಷಿಕ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಎಲ್ಲಾ ಠಾಣೆಗಳ ಅಧಿಕಾರಿ ಸಿಬ್ಬಂದಿ ಭಾಗವಹಿಸಿ ಕ್ರೀಡೆಗಳಲ್ಲಿ ಮಿಂದೆದ್ದು ಎಂಜಾಯ್ ಮಾಡಿದ್ರು. ಕ್ರೀಡೆಯಲ್ಲಿ ಭಾಗವಹಿಸಿದವರು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವುದರಲ್ಲಿ ಖುಷಿಪಟ್ಟರು.

ಇನ್ನು ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ, ಶೀಲ್ಡ್ ಮತ್ತು ಕಪ್ ಗಳನ್ನು ಕೊಟ್ಟು ಮತ್ತಷ್ಟು ಉತ್ತೇಜಿಸಲಾಯಿತು. ಪೊಲೀಸ್ ಇಲಾಖೆಯಲ್ಲಿ ಮಾನಸಿಕ ಸದೃಢತೆ ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚಿನದಾಗಿ ದೈಹಿಕ ಸದೃಢತೆ ಇರಬೇಕು. ದೈಹಿಕ ಮತ್ತು ಮಾನಸಿ ಸದೃಢತೆಗಾಗಿಯೇ ಪ್ರತೀ ವರ್ಷ ಕ್ರೀಡಾಕೂಟ ಆಯೋಜಿಸುತ್ತಿದ್ದೇವೆ.

ಇದು ಕೇವಲ ಜಿಲ್ಲಾ ಮಟ್ಟದಲ್ಲಿ ಅಲ್ಲ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲೂ ಪೊಲೀಸ್ ಕ್ರೀಡಾ ಕೂಟಗಳನ್ನು ಆಯೋಜಿಸಲಾಗುತ್ತದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು. ಒಟ್ಟಿನಲ್ಲಿ ದಿನದ 24 ಗಂಟೆ ಸ್ವಾಸ್ಥ್ಯ ಸಮಾಜಕ್ಕಾಗಿ ದುಡಿಯುವ ಪೊಲೀಸರು ಕ್ರೀಡಾ ಕೂಟದಲ್ಲಿ ಮಿಂದೆದ್ದು, ಒತ್ತಡದಿಂದ ಹೊರಬಂದು ಸಖತ್ ಎಂಜಾಯ್ ಮಾಡಿದರು.