Asianet Suvarna News Asianet Suvarna News

ಜೈಲಲ್ಲಿದ್ದ ನಸೀರ್‌ಗೆ ಬಂದಿತ್ತು 10 ಲಕ್ಷ ರೂ. ವಿದೇಶ ಹಣ: ಸಿಸಿಬಿ ತನಿಖೆ ವೇಳೆ ಪತ್ತೆ!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕತ್ತಲೆ ಕೋಣೆಯಲ್ಲಿದ್ದುಕೊಂಡೇ ತನ್ನ ಸಮುದಾಯದ ಕೈದಿಗಳಿಗೆ ಜಿಹಾದ್‌ ಬೋಧಿಸುವ ಕೇರಳ ಮೂಲದ ಲಷ್ಕರ್‌-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಶಂಕಿತ ಉಗ್ರ ಟಿ.ನಸೀರ್‌ಗೆ ಎರಡು ವರ್ಷಗಳಲ್ಲಿ ವಿದೇಶದಿಂದ 10 ಲಕ್ಷ ರು. ಹಣ ಬಂದಿದೆ ಎಂಬ ಮಹತ್ವದ ವಿಚಾರ ಸಿಸಿಬಿ ತನಿಖೆಯಲ್ಲಿ ಪತ್ತೆಯಾಗಿದೆ.

Terrorist naseer  who was in jail received Rs 10 lakh foreign money: found during CCB investigation rav
Author
First Published Aug 19, 2023, 6:03 AM IST

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಆ.19) :  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕತ್ತಲೆ ಕೋಣೆಯಲ್ಲಿದ್ದುಕೊಂಡೇ ತನ್ನ ಸಮುದಾಯದ ಕೈದಿಗಳಿಗೆ ಜಿಹಾದ್‌ ಬೋಧಿಸುವ ಕೇರಳ ಮೂಲದ ಲಷ್ಕರ್‌-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಶಂಕಿತ ಉಗ್ರ ಟಿ.ನಸೀರ್‌ಗೆ ಎರಡು ವರ್ಷಗಳಲ್ಲಿ ವಿದೇಶದಿಂದ 10 ಲಕ್ಷ ರು. ಹಣ ಬಂದಿದೆ ಎಂಬ ಮಹತ್ವದ ವಿಚಾರ ಸಿಸಿಬಿ ತನಿಖೆಯಲ್ಲಿ ಪತ್ತೆಯಾಗಿದೆ.

ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲ್‌ನಲ್ಲಿರುವ ನಸೀರ್‌ಗೆ ತನ್ನ ನಂಬಿಕಸ್ಥ ಭಂಟರ ಮೂಲಕ ವಿದೇಶದಿಂದ ಮತ್ತೊಬ್ಬ ಶಂಕಿತ ಉಗ್ರ ಆರ್‌.ಟಿ.ನಗರದ ಅಹಮ್ಮದ್‌ ಜುನೈದ್‌ ಹಣ ಕಳುಹಿಸಿದ್ದು, ಈ ಹಣವನ್ನು ನಸೀರ್‌ ಜೈಲಿನಲ್ಲಿ ತನ್ನ ರಹಸ್ಯ ಚಟುವಟಿಕೆಗಳಿಗೆ ವಿನಿಯೋಗಿಸಿದ್ದಾನೆ. ಅಲ್ಲದೆ ನಸೀರ್‌ಗೆ ಹಣ ತಲುಪಿಸುತ್ತಿದ್ದ ಕಿರಾಣಿ ಅಂಗಡಿ ಮಾಲೀಕನನ್ನು ಪ್ರಕರಣದ ಪ್ರಮುಖ ಸಾಕ್ಷಿದಾರನನ್ನಾಗಿ ಪರಿಗಣಿಸಲಾಗಿದೆ. ಆತನನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಬೆಂಗಳೂರು: ಲಷ್ಕರ್‌ ಶಂಕಿತ ಉಗ್ರನಿಂದ ಜೈಲಲ್ಲೇ ಮತಾಂತರ..!

ಪಾಕಿಸ್ತಾನ ಮೂಲದ ಎಲ್‌ಇಟಿ ಜತೆ ನಿಕಟ ಸಂಪರ್ಕ ಹೊಂದಿರುವ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ನಸೀರ್‌, 2008ರ ಬೆಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕಕ್ಕೆ ಸಜ್ಜಾಗಿದ್ದ ಎಲ್‌ಇಟಿ ಶಂಕಿತ ಉಗ್ರರಿಗೆ ನಸೀರ್‌ ನೆರವು ನೀಡಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬಯಲಾಗಿತ್ತು. ಈ ಸಂಬಂಧ ಜೈಲಿನಲ್ಲಿದ್ದ ನಸೀರ್‌ನನ್ನು ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸಿದಾಗ ಹಣಕಾಸು ವ್ಯವಹಾರ ಪತ್ತೆಯಾಗಿದೆ.

2017ರಲ್ಲಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಗ ಆರ್‌.ಟಿ.ನಗರ ಸಮೀಪ ಮಠದಹಳ್ಳಿಯ ಅಹಮ್ಮದ್‌ ಜುನೈದ್‌ಗೆ ನಸೀರ್‌ ಪರಿಚಯವಾಗಿತ್ತು. ಕಳೆದ 12 ವರ್ಷಗಳಿಂದ ಸೆರೆಮನೆಯಲ್ಲಿ ಬಂಧಿತನಾಗಿರುವ ನಸೀರ್‌, ಜೈಲಿಗೆ ಕೊಲೆ, ದರೋಡೆ ಹಾಗೂ ಸುಲಿಗೆ ಹೀಗೆ ಅಪರಾಧ ಕೃತ್ಯಗಳನ್ನು ಹೊತ್ತು ಬರುವ ತನ್ನ ಸಮುದಾಯದ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಜಿಹಾದ್‌ ಬೋಧಿಸುತ್ತಿದ್ದ. ಅಂತೆಯೇ ಜುನೈದ್‌ ಹಾಗೂ ಆತನ ಸಹಚರರ ತಲೆಗೆ ನಸೀರ್‌ ಮೂಲಭೂತವಾದ ತುಂಬಿದ್ದ. ಇದಾದ ಬಳಿಕ ನಸೀರ್‌ ಹಾಗೂ ಜುನೈದ್‌ ಮಧ್ಯೆ ಆತ್ಮೀಯ ಒಡನಾಟ ಬೆಳೆದಿತ್ತು. 2021ರಲ್ಲಿ ಮತ್ತೆ ಶ್ರೀಗಂಧ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿದ ಜುನೈದ್‌ನನ್ನು ಎಲ್‌ಇಟಿ ಸಂಘಟನೆಗೆ ನೇಮಿಸಿದ್ದ. ಆನಂತರ ಜಾಮೀನು ಪಡೆದು ಹೊರಬಂದ ನಂತರ ದುಬೈಗೆ ಜುನೈದ್‌ ಪರಾರಿಯಾಗಿದ್ದಾನೆ. ಈಗ ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಸರಣಿ ಸ್ಫೋಟಕಕ್ಕೆ ಸಂಚು ರೂಪಿಸಿದ್ದ ಜುನೈದ್‌, ಇದಕ್ಕಾಗಿ ಅಗತ್ಯವಾದ ಶಸ್ತ್ರಾಸ್ತ ಹಾಗೂ ಆರ್ಥಿಕ ನೆರವನ್ನು ತನ್ನ ಸಹಚರರಿಗೆ ಪೂರೈಸಿದ್ದ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಅದೇ ರೀತಿ ಎರಡು ವರ್ಷಗಳಿಂದ ನಸೀರ್‌ಗೆ ಕೂಡಾ ಜುನೈದ್‌ನಿಂದ 10 ಲಕ್ಷ ರು ಹಣ ಸಂದಾಯವಾಗಿದೆ. ತನ್ನ ಸಹಚರರ ಮೂಲಕ ನಸೀರ್‌ಗೆ ಪರಿಚಿತ ಕಿರಾಣಿ ಅಂಗಡಿ ಮಾಲೀಕನಿಗೆ ಜುನೈದ್‌ ಹಣ ಪೂರೈಸಿದ್ದ. ಆತನಿಂದ ನಸೀರ್‌ಗೆ ಹಣ ತಲುಪುತ್ತಿತ್ತು. ಈ ಹಣವನ್ನು ವಕೀಲರಿಗೆ ಮಾತ್ರವಲ್ಲದೆ ಜೈಲಿನಲ್ಲಿ ತನ್ನ ರಹಸ್ಯ ಕೆಲಸಗಳಿಗೆ ನಸೀರ್‌ ಬಳಸಿಕೊಂಡಿದ್ದಾನೆ. ಜುನೈದ್‌ ಮೊದಲು ನಸೀರ್‌ಗೆ ಕೇರಳ ಮೂಲದ ರಾಜಕಾರಣಿ ಹಾಗೂ 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಮತ್ತೊಬ್ಬ ಆರೋಪಿ ನಾಸಿರ್‌ ಮದನಿ ಆರ್ಥಿಕ ನೆರವು ಕೊಡುತ್ತಿದ್ದ. ಜಾಮೀನು ಪಡೆದು ಜೈಲಿನಿಂದ ಮದನಿ ಹೊರಹೋದ ಬಳಿಕ ನಸೀರ್‌ಗೆ ಜುನೈದ್‌ ಹಣಕಾಸು ವ್ಯವಸ್ಥೆ ಕಲ್ಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುನೈದ್‌ ಬೆಳವಣಿಗೆ ಕಂಡು ನಸೀರ್‌ ಅಚ್ಚರಿ

ಜೈಲಿನಲ್ಲಿ ಜಿಹಾದ್‌ ಬೋಧಿಸಿ ಎಲ್‌ಇಟಿಗೆ ನೇಮಿಸಿದ ಬಳಿಕ ಜುನೈದ್‌ ಶರವೇಗದ ಬೆಳವಣಿಗೆ ಕಂಡು ಶಂಕಿತ ಉಗ್ರ ನಸೀರ್‌ ಅಚ್ಚರಿಪಟ್ಟಿದ್ದ ಎಂದು ಸಿಸಿಬಿ ಮೂಲಗಳು ಹೇಳಿವೆ. ವಿಚಾರಣೆ ವೇಳೆ ಜುನೈದ್‌ಗೆ ಎಲ್‌ಇಟಿ ಸಂಪರ್ಕ ಕಲ್ಪಿಸಿದ್ದನ್ನು ನಸೀರ್‌ ಒಪ್ಪಿಕೊಂಡಿದ್ದಾನೆ. ತಾನು ಜೈಲಿನಿಂದ ಹೊರಹೋದ ಬಳಿಕ ಎಲ್‌ಇಟಿ ಸಂಘಟನೆಯಲ್ಲಿ ಜುನೈದ್‌ ಪ್ರವರ್ಧನಮಾನಕ್ಕೆ ಬಂದ ಪರಿ ಕಂಡು ಬೆರಗಾಗಿರುವುದಾಗಿ ನಸೀರ್‌ ಹೇಳಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Suspected Terrorists: 5 ಶಂಕಿತ ಉಗ್ರರು-ನಸೀರ್‌ ಮುಖಾಮುಖಿ ವಿಚಾರಣೆ

ಸ್ಫೋಟಕ ಸಂಚಿನ ಹಣ ಸ್ವಂತ ಖರ್ಚಿಗೆ ಬಳಸಿದ್ದ

ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಲುವಾಗಿ ತನ್ನ ಸಹಚರ ಜಾಹೀದ್‌ ತಬ್ರೇಜ್‌ ಖಾತೆಗೆ ಸುಮಾರು 26 ಲಕ್ಷ ರು. ಹಣವನ್ನು ಶಂಕಿತ ಉಗ್ರ ಜುನೈದ್‌ ಕಳುಹಿಸಿದ್ದ. ಇದರಲ್ಲಿ ಸ್ಪಲ್ಪ ಹಣವನ್ನು ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ ಜಾಹೀದ್‌, ಇನ್ನುಳಿದ ಹಣವನ್ನು ಉಳಿದ ನಾಲ್ವರಿಗೆ ಹಂಚಿಕೆ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios