ವಿವಿಧ ಅಪರಾಧ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೇರಿದ್ದ ಓರ್ವ ಕ್ರೈಸ್ತ ಹಾಗೂ ಇಬ್ಬರು ಹಿಂದೂಗಳು ಸೇರಿದಂತೆ ಮೂವರು ವಿಚಾರಣಾಧೀನ ಕೈದಿಗಳು ನಸೀರ್ ಪ್ರಚೋದನೆಯಿಂದ ಜೈಲಿನಲ್ಲಿ ಇಸ್ಲಾಂ ಅನುಯಾಯಿಗಳಾಗಿದ್ದು, ಈ ಪೈಕಿ ಒಬ್ಬಾತನನ್ನು ಪತ್ತೆ ಹಚ್ಚಿ ಸಿಸಿಬಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಆ.13): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುಸ್ಲಿಂ ಕೈದಿಗಳಿಗೆ ಬ್ರೇನ್‌ವಾಶ್ ಮಾಡಿ ಪಾಕಿಸ್ತಾನ ಮೂಲದ ಅತ್ಯುಗ್ರ ಭಯೋತ್ಪಾದಕ ಸಂಘಟನೆಗೆ ನೇಮಕಗೊಳಿಸುತ್ತಿದ್ದ ಕೇರಳ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಶಂಕಿತ ಉಗ್ರ ನಸೀರ್, ಅನ್ಯಧರ್ಮೀಯ ಕೈದಿಗಳನ್ನು ಮತಾಂತರಕ್ಕೂ ಯತ್ನಿಸಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೇರಿದ್ದ ಓರ್ವ ಕ್ರೈಸ್ತ ಹಾಗೂ ಇಬ್ಬರು ಹಿಂದೂಗಳು ಸೇರಿದಂತೆ ಮೂವರು ವಿಚಾರಣಾಧೀನ ಕೈದಿಗಳು ನಸೀರ್ ಪ್ರಚೋದನೆಯಿಂದ ಜೈಲಿನಲ್ಲಿ ಇಸ್ಲಾಂ ಅನುಯಾಯಿಗಳಾಗಿದ್ದು, ಈ ಪೈಕಿ ಒಬ್ಬಾತನನ್ನು ಪತ್ತೆ ಹಚ್ಚಿ ಸಿಸಿಬಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದೆ.
ಶಂಕಿತ ಉಗ್ರರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು: ಜಾಹೀದ್‌ಗೆ 4 ಗ್ರೆನೇಡ್ ತಲುಪಿಸಿದ್ದ ಕೊಲೆ ಆರೋಪಿ !
ಇತ್ತೀಚೆಗೆ ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದಾಗ ಐವರು ಎಲ್‌ಇಟಿ ಶಂಕಿತ ಉಗ್ರರನ್ನು ಸಿಸಿಬಿ ಬಂಧಿಸಿತ್ತು. ಬಳಿಕ ವಿಚಾರಣೆ ವೇಳೆ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲು ಸೇರಿದ್ದಾಗ ಅಲ್ಲಿ ಈ ಐವರು, ಎಲ್‌ಇಟಿ ಶಂಕಿತ ಉಗ್ರ ಹಾಗೂ 2008ರ ಬೆಂಗಳೂರಿನ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ನಸೀರ್ ಸಂಪರ್ಕಕ್ಕೆ ಬಂದಿದ್ದ ವಿಚಾರ ಬಯಲಾಗಿತ್ತು.
ಈ ನಡುವೆ, ವಿಧ್ವಂಸಕ ಕೃತ್ಯ ಸಂಚು ಪ್ರಕರಣದಲ್ಲಿ ನಸೀರ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆ ವೇಳೆ ಜೈಲಿನಲ್ಲಿ ಮುಸ್ಲಿಂ ಸಮುದಾಯದ ಕೈದಿಗಳ ತಲೆಗೆ ಮೂಲಭೂತವಾದ ತುಂಬಿ ಭಯೋತ್ಪಾದಕ ಸಂಘಟನೆಗಳಿಗೆ ನೇಮಿಸುತ್ತಿದ್ದ ನಸೀರ್, ಅನ್ಯ ಧರ್ಮೀಯ ಕೈದಿಗಳಿಗೆ ಹಣದಾಸೆ ತೋರಿಸಿ ಇಸ್ಲಾಂಗೆ ಮತಾಂತರಕ್ಕೆ ಸಹ ಯತ್ನಿಸುತ್ತಿದ್ದ ಸಂಗತಿ ಗೊತ್ತಾಯಿತು. ಈತನ ಆಮಿಷಗಳಿಗೆ ಬಲಿಯಾಗಿ ಮೂವರು ಅನ್ಯಧರ್ಮೀಯರು ಜೈಲಿನಲ್ಲಿ ಇಸ್ಲಾಂ ಅನುಯಾಯಿಗಳಾಗಿದ್ದರು ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಜೈಲಿನಲ್ಲಿ ಮೋಹನ್ ಹೋಗಿ ಅಬ್ದುಲ್ಲಾ ಆಗಿದ್ದ:
ಕೆಲ ವರ್ಷಗಳ ಹಿಂದೆ ಮಾದಕ ವಸ್ತು ಮಾರಾಟ ಪ್ರಕರಣ ಸಂಬಂಧ ಕ್ರೈಸ್ತ ಧರ್ಮೀಯನಾದ ಮೋಹನ್‌ನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆ ವೇಳೆ ಆತನಿಗೆ ನಸೀರ್‌ನ ಪರಿಚಯವಾಗಿತ್ತು. ಆಗ ಮೋಹನ್‌ಗೆ ಹಣದಾಸೆ ತೋರಿಸಿ ತನ್ನ ಬಲೆಗೆ ನಸೀರ್ ಸೆಳೆದಿದ್ದ. ನಂತರ ತನ್ನ ಬ್ಯಾರಕ್‌ನ ಸೆಲ್‌ಗೆ ಕರೆಸಿಕೊಂಡು ಮೋಹನ್‌ಗೆ ‘ಅಲ್ಲಾನ ನಂಬು ನಿನಗೆ ಒಳ್ಳೆಯದಾಗಲಿದೆ. ಜಗತ್ತಿನಲ್ಲಿ ಅಲ್ಲಾ ಒಬ್ಬನೇ ದೇವರು’ ಎಂದು ಇಸ್ಲಾಂ ಧರ್ಮವನ್ನು ನಸೀರ್ ಬೋಧಿಸಿದ್ದ. ಈತನ ಪ್ರಭಾವಕ್ಕೊಳಗಾದ ಮೋಹನ್‌ಗೆ ನಸೀರ್, ‘ಮೊಹಮ್ಮದ್ ಅಬ್ದುಲ್ಲಾ’ ಎಂದು ಮುಸಲ್ಮಾನರ ಹೆಸರಿಟ್ಟಿದ್ದ. ಅಲ್ಲದೆ ನಸೀರ್ ಸೂಚನೆಯಂತೆ ಜೈಲಿನಲ್ಲಿದ್ದಷ್ಟುದಿನಗಳು ಪ್ರತಿ ದಿನ ಐದು ಬಾರಿ ನಮಾಜ್ ಸೇರಿದಂತೆ ಇಸ್ಲಾಂ ನೀತಿ ರಿವಾಜುಗಳನ್ನು ಮೋಹನ್ ಪಾಲಿಸುತ್ತಿದ್ದ. ಇದಕ್ಕಾಗಿ ಆತನಿಗೆ ಆಗಾಗ್ಗೆ 5-10 ಸಾವಿರ ರು.ಗಳನ್ನು ಭಕ್ಷೀಸು ರೂಪದಲ್ಲಿ ನಸೀರ್ ನೀಡುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ವಿವರಿಸಿದ್ದಾರೆ.
ಬೆಂಗಳೂರು ಸ್ಫೋಟ ಸಂಚು: ಶಂಕಿತ ಉಗ್ರರ ಬಳಿ ಸಿಕ್ಕಿದ್ದು ಫಾರಿನ್ ಗ್ರೆನೇಡ್!
ಮೋಹನ್ ಮಾತ್ರವಲ್ಲದೆ ನಸೀರ್ ಸಂಪರ್ಕದಲ್ಲಿದ್ದ ಮತ್ತಿಬ್ಬರು ಇಸ್ಲಾಂ ಅನುಯಾಯಿಗಳಾಗಿದ್ದರು. ಆದರೆ ಆ ಸಹಕೈದಿಗಳು ಅಧಿಕೃತವಾಗಿ ಇಸ್ಲಾಂಗೆ ಮತಾಂತರವಾಗಿರಲಿಲ್ಲ. ಹಾಗೆ ತಮ್ಮ ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ ಆ ಮೂವರಿಗೆ ನಸೀರ್ ಸಂಪರ್ಕ ಕಡಿತವಾಗಿತ್ತು. ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ನಸೀರ್ ವಿಚಾರಣೆ ನಡೆಸಿದ ಬಳಿಕ ಆತನ ಸಂಪರ್ಕದಲ್ಲಿದ್ದ ಅನ್ಯಧರ್ಮೀಯರಿಗೆ ಹುಡುಕಾಟ ನಡೆಸಲಾಯಿತು. ಆಗ ಕೋರಮಂಗಲದ ಮೋಹನ್ ಮಾತ್ರ ಪತ್ತೆಯಾದ. ಆದರೆ ಇನ್ನುಳಿದ ಇಬ್ಬರು ಹಿಂದೂ ಧರ್ಮೀಯರು ಸಿಕ್ಕಿಲ್ಲ. ಅವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಳಿಕ ಮೋಹನ್‌ನನ್ನು ಕರೆದು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಯಿತು. ಆಗ, ‘ನಾನು ಜೈಲಿನಲ್ಲಿದ್ದ ನಸೀರ್ ತೋರಿಸಿದ ಹಣದಾಸೆಗೆ ಇಸ್ಲಾಂ ಅನುಯಾಯಿಯಾಗಿದ್ದೆ. ಆದರೆ ಜೈಲಿನಿಂದ ಹೊರಬಂದ ನಂತರ ಆತನೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ. ಇನ್ನು ನನ್ನ ಕ್ರೈಸ್ತ ಧರ್ಮವನ್ನು ನಾನು ಅನುಸರಿಸುತ್ತಿದ್ದೇನೆ’ ಎಂದು ಮೋಹನ್ ಹೇಳಿಕೆ ನೀಡಿರುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
