ತಿರುಪತಿ ಯಾತ್ರೆಯಿಂದ ವಾಪಸ್ಸಾಗುತ್ತಿದ್ದ ಟಿಟಿ ವಾಹನಕ್ಕೆ ಅಪಘಾತವಾಗಿ ಮೂವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಳ್ಳಿ ತಾಲ್ಲೂಕಿನ ಮೂವರು ಯುವಕರು ಮೃತಪಟ್ಟಿದ್ದು, ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ತಿರುಪತಿ ಯಾತ್ರೆ ಹೋಗಿ ಮರಳುತ್ತಿದ್ದ ಟಿಟಿ ವಾಹನ ಭೀಕರ ಅಪಘಾತಕ್ಕೆ ತುತ್ತಾಗಿ ಮೂವರು ಕನ್ನಡಿಗರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲೂಕಿನ ಕುರುಬಲಕೋಟ ಮಂಡಲದ ಚೆನ್ನಾಮರ್ರಿಮಿಟ್ಟ ಬಳಿ ಭೀಕರ ಅಪಘಾತ ಸಂಭವಿಸಿದೆ. ತಿರುಪತಿಗೆ ತೆರಳುತ್ತಿದ್ದ ಟಿಟಿ ವಾಹನಕ್ಕೆ ಅಪರಿಚಿತ ಭಾರೀ ವಾಹನ ಡಿಕ್ಕಿ ಹೊಡೆದ ಪರಿಣಾಮ, ಕಾರು ತಲೆಕೆಳಗಾಗಿ ದುರಂತ ನಡೆದಿದೆ.

ಈ ಅಪಘಾತದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಳ್ಳಿ ತಾಲ್ಲೂಕಿನ ಮೇಘೇಶ್ (17), ಚರಣ್ (17) ಮತ್ತು ಶ್ರಾವಣಿ (28) ದುರ್ಮರಣ ಹೊಂದಿದ್ದಾರೆ. ಇನ್ನೂ ಒಂಬತ್ತು ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಾಗೇಪಳ್ಳಿ–ತಿರುಪತಿ ಮಧ್ಯದ ರಸ್ತೆಯಲ್ಲಿ ಸಂಭವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.