Asianet Suvarna News Asianet Suvarna News

Covid 19 3rd Wave: ರಾಜ್ಯದಲ್ಲಿ ದೇಗುಲ ಬಂದ್‌ ಆಗಿದ್ದರೂ ಜನ ‘ಜಾತ್ರೆ!’

*ಬಾದಾಮಿ ಬನಶಂಕರಿಯಲ್ಲಿ ರಥೋತ್ಸವ, 
*ಜನಸಾಗರ, ಪೊಲೀಸರಿಂದ ಲಾಠಿಚಾರ್ಜ್, 
*ಹುಲಿಗಿ, ಹಂಪಿ, ಮೈಲಾರಕ್ಕೂ ಭಕ್ತರ ದಂಡು
 

Temples in Karnataka Full of activities  Crowded Even though Closed amid Covid 19 Spike mnj
Author
Bengaluru, First Published Jan 18, 2022, 10:32 AM IST

ಬೆಂಗಳೂರು (ಜ. 18): ಕೊರೋನಾ ಮೂರನೇ ಅಲೆ (Covid 19 3rd Wave) ತೀವ್ರವಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನ (Temple) ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿ ಸರಳ ಜಾತ್ರೆ ನಡೆಸಲು ನಿರ್ದೇಶನ ನೀಡಿದ್ದರೂ ಸೋಮವಾರ ಅನೇಕ ಕಡೆ ಹಲವೆಡೆ ಜನ ಸಾಗರೋಪಾದಿಯಾಗಿ ಹರಿದು ಬಂದಿರುವ ಘಟನೆಗಳು ವರದಿಯಾಗಿವೆ. ಬನದ ಹುಣ್ಣಿಮೆ ನಿಮಿತ್ತ ಬಾದಾಮಿಯ ಬನಶಂಕರಿ, ಕೊಪ್ಪಳದ ಹುಲಿಗಿ, ಹೂವಿನ ಹಡಗಲಿಯ ಮೈಲಾರ ಕ್ಷೇತ್ರ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ನಂಜನಗೂಡು ದೇವಸ್ಥಾನಗಳಲ್ಲಂತೂ ವ್ಯಾಪಕ ಭದ್ರತೆ ಏರ್ಪಡಿಸಿದ್ದರೂ ಜನಜಂಗುಳಿಯಾಗಿದ್ದು ಪೊಲೀಸರೂ ನಿಸ್ಸಾಹಯಕರಾಗಿ ನೋಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಬಾದಾಮಿ ಬನಶಂಕರಿ ಜಾತ್ರೆಯೆಲ್ಲಂತೂ ಒಂದು ಹಂತದಲ್ಲಿ ಪೊಲೀಸರು ಲಾಠಿಚಾಜ್‌ರ್‍ ಮಾಡಿದ ಪ್ರಸಂಗವೂ ನಡೆಯಿತು.

ಬನಶಂಕರಿಯಲ್ಲಿ ಈ ಬಾರಿ ಜಾತ್ರೆ ಸರಳವಾಗಿ ಆಚರಿಸಲು ನಿರ್ಧರಿಸಿದ್ದರೂ ಅಂದಾಜು 40 ಸಾವಿರಕ್ಕೂ ಅಧಿಕ ಭಕ್ತರು ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದರು. ಇಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜ.9ರಂದು ದೇವಸ್ಥಾನ ಸಂಪೂರ್ಣ ಬಂದ್‌ ಮಾಡಿ ಭಕ್ತರಿಗೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಸೋಮವಾರ ರಥೋತ್ಸವದಂದು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಸುಮಾರು ಒಂದು ಕಿಮೀ ಅಂತರದಲ್ಲಿ ದೇವಸ್ಥಾನದ ನಾಲ್ಕು ದಿಕ್ಕಿನಲ್ಲಿ ಬ್ಯಾರಿಕೇಡ್‌ ಹಾಕಿ ಭಕ್ತರು ಬಾರದ ಹಾಗೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಇದಕ್ಕೆ ಕ್ಯಾರೇ ಎನ್ನದ ಜನ ಬ್ಯಾರಿಕೇಡ್‌ ದಾಟಿ ನುಗ್ಗಲು ಯತ್ನಿಸಿದಾಗ ಪೊಲೀಸರು ಅನಿವಾರ್ಯವಾಗಿ ಲಾಠಿ ಬೀಸಬೇಕಾಯಿತು.

ಇದನ್ನೂ ಓದಿ: India Fights Corona: ಸಕ್ರಿಯ ಕೇಸು 16.5 ಲಕ್ಷಕ್ಕೆ: 7.5 ತಿಂಗಳ ಗರಿಷ್ಠ!

ಹುಲಿಗೆಗೆ 2 ಲಕ್ಷ ಮಂದಿ!: ಇನ್ನು ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನಕ್ಕೆ ನಿರ್ಬಂಧದ ನಡುವೆಯೂ ಲಕ್ಷೋಪಲಕ್ಷ ಭಕ್ತರು ಆಗಮಿಸಿದ್ದರು. ದೇವಾಲಯಕ್ಕೆ ಬೀಗ ಹಾಕಿದ್ದರೂ ಸುತ್ತಮುತ್ತಲ ಪ್ರದೇಶದಲ್ಲಿ ದೇವಿಗೆ ಉಡಿ ತುಂಬಿದರು. ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ದೇವಾಲಯದ ಸುತ್ತಲೂ ಹಾಗೂ ಸುತ್ತಲಿನ ಖಾಲಿ ಪ್ರದೇಶದಲ್ಲಿ ಜನಸಾಗರವೇ ಸೇರಿತ್ತು. ನಾಲ್ಕಾರು ಕಿ.ಮೀ. ಉದ್ದಕ್ಕೂ ಜನರ ಸಾಲು ಕಂಡು ಬಂತು. ಮುಂಜಾನೆ ಆರಂಭವಾದ ಜನಜಾತ್ರೆ ಸಂಜೆಯ ವರೆಗೂ ಮುಂದುವರಿದಿತ್ತು. ಇಲ್ಲಿಗೆ ಬಂದ ಭಕ್ತರಲ್ಲಿ ಮಹಾರಾಷ್ಟ್ರದವರೇ ಅಧಿಕವಾಗಿದ್ದರು. ಸುಮಾರು 2 ಲಕ್ಷ ಭಕ್ತರು ಇಂದು ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರೆಂದು ಅಂದಾಜಿಸಲಾಗಿದೆ.

ಅದೇರೀತಿ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದಲ್ಲಿ ದೇವಾಲಯ ಬಂದ್‌ ಮಾಡಿ ಬ್ಯಾರಿಕ್ಕೇಡ್‌ ಹಾಕಲಾಗಿದ್ದರೂ ಸಾವಿರಾರು ಜನರು ಆಗಮಿಸಿ ಭಕ್ತಿ ಸಮರ್ಪಿಸಿದರು. ಕೆಲವರು ದೇವಾಲಯಕ್ಕೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಇತರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Covid Vaccine: ಬಲವಂತವಾಗಿ ಲಸಿಕೆ ನೀಡುವಂತಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಹಂಪಿಗೂ ಸೋಮವಾರ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಎರಡು ದಿನ ಬಂದ್‌ ಇದ್ದು, ಇಂದು ಭಕ್ತರು ತುಂಗಭದ್ರೆಯಲ್ಲಿ ಸ್ನಾನ ಮಾಡಿ, ವಿರೂಪಾಕ್ಷೇಶ್ವರನ ದರ್ಶನ ಪಡೆದರಲ್ಲದೇ, ಸ್ಮಾರಕಗಳನ್ನು ಸಹ ವೀಕ್ಷಿಸಿದರು. ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೂ ಸಾವಿರಾರು ಮಂದಿ ಆಗಮಿಸಿ ದೇವರ ದರ್ಶನ ಪಡೆದರು. ಕಪಿಲಾ ನದಿಯ ಸ್ನಾನಘಟ್ಟದಲ್ಲೂ ಅಪಾರ ಜನಸ್ತೋಮವಿತ್ತು. ಹುಬ್ಬಳ್ಳಿಯ ಸಿದ್ದಾರೂಢ ಮಠ, ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅಂಬಾಮಠದ ಅಂಬಾದೇವಿಯ ರಥೋತ್ಸವಕ್ಕೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ರಾಜ್ಯದಲ್ಲಿ ಕೋವಿಡ್‌ ಸೋಂಕು: ರಾಜ್ಯದಲ್ಲಿ ದಿನದಿನಕ್ಕೆ ಏರುತ್ತಿದ್ದ ಕೋವಿಡ್‌ ಪ್ರಕರಣಗಳ (Covid Cases) ಸಂಖ್ಯೆಗೆ ಸೋಮವಾರ ಲಗಾಮು ಬಿದ್ದಿದೆ. ರಾಜ್ಯದಲ್ಲಿ ಸೋಮವಾರ 27,156 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕಳೆದೆರಡು ದಿನಗಳಿಂದ 30 ಸಾವಿರ ಮೀರಿ ವರದಿಯಾಗಿದ್ದ ಹೊಸ ಪ್ರಕರಣಗಳು ಮತ್ತೆ 30 ಸಾವಿರದೊಳಕ್ಕೆ ಬಂದಿದೆ. ಭಾನುವಾರ ಶೇ. 19.29 ಇದ್ದ ಪಾಸಿಟಿವಿಟಿ ದರ ಶೇ. 12.45ಕ್ಕೆ ಇಳಿದಿದೆ. 

ಈ ಮಧ್ಯೆ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಬೆಂಗಳೂರು (Bengaluru) ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಇಳಿಕೆ ದಾಖಲಾಗಿದೆ. ಭಾನುವಾರ 21,071 ಪ್ರಕರಣ ದಾಖಲಾಗಿದ್ದರೆ ಸೋಮವಾರ ಹೊಸ ಪ್ರಕರಣಗಳ ಸಂಖ್ಯೆ 15,947ಕ್ಕೆ ಕುಸಿದಿದೆ. ಆದರೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

Follow Us:
Download App:
  • android
  • ios