Asianet Suvarna News Asianet Suvarna News

ಬಹಮನಿ ಕೋಟೆಯೊಳಗೂ ಮಂದಿರದ ಕುರುಹು: ಪೂಜಾದಿ ಅವಕಾಶಕ್ಕೆ ಹಿಂದೂ ಸಂಘಟನೆಗಳ ಒತ್ತಾಯ

ಉತ್ತರ ಪ್ರದೇಶದ ಗ್ಯಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯದಲ್ಲೂ ಮಸೀದಿ-ದೇವಾಲಯ ವಿವಾದಗಳು ಒಂದೊಂದಾಗಿ ಭುಗಿಲೇಳುತ್ತಿವೆ. 

Temple Controversy Extends In Karnatakas Kalaburagi Bahmani Fort gvd
Author
Bangalore, First Published May 24, 2022, 3:15 AM IST | Last Updated May 24, 2022, 3:15 AM IST

ಶೇಷಮೂರ್ತಿ ಅವಧಾನಿ

ಕಲಬುರಗಿ (ಮೇ.24): ಉತ್ತರ ಪ್ರದೇಶದ ಗ್ಯಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯದಲ್ಲೂ ಮಸೀದಿ-ದೇವಾಲಯ ವಿವಾದಗಳು ಒಂದೊಂದಾಗಿ ಭುಗಿಲೇಳುತ್ತಿವೆ. ಮಂಡ್ಯದ ಶ್ರೀರಂಗಟ್ಟಣ, ಮಂಗಳೂರಿನ ಮಳಲಿಗಳಲ್ಲಿ ಮಸೀದಿ-ದೇವಸ್ಥಾನ ವಿವಾದಗಳ ಬಳಿಕ ಇದೀಗ ನೂರಾರು ವರ್ಷಗಳ ಇತಿಹಾಸವಿರುವ ಕಲಬುರಗಿಯ ಬಹಮನಿ ಕೋಟೆಯೊಳಗಿರುವ ಸ್ವಯಂಭೂ ಸೋಮೇಶ್ವರ ದೇವಾಲಯದಲ್ಲಿ ಪೂಜಾದಿಗಳಿಗೆ ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಹಿಂದೂ ಜಾಗೃತ ಸೇನೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳವರು ಕೋಟೆ ದೇಗುಲದಲ್ಲಿನ ಪೂಜಾದಿಗಳಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತದ ಗಮನ ಸೆಳೆಯಲು ಪ್ರತಿಭಟನೆಗಿಳಿದಿದ್ದಾರೆ.

ಕಲಬುರಗಿಯ ಬಹಮನಿ ಅರಸರ ಕಾಲದ ಕೋಟೆಯೊಳಗೆ ಆಗಿನ ಜಾಮಾ ಮಸೀದಿ ಹಿಂಭಾಗದ ಪೊದೆಗಳು ಬೆಳೆದಿರುವ ಪ್ರದೇಶದಲ್ಲಿ ಹಿಂದೂ ದೇಗುಲ ಇರುವುದು ಗೋಚರಿಸಿದೆ. ಸ್ಥಳೀಯ ಇತಿಹಾಸ ತಜ್ಞರು ಸಹ ಇದನ್ನು ದೃಢಪಡಿಸಿದ್ದಾರೆ. ಕಲಬುರಗಿ ಸಮೀಪದ ನಾಗನಹಳ್ಳಿಯಲ್ಲಿರುವ 14ನೇ ಶತಮಾನದ ತ್ರುಟಿತ ಶಿಲಾ ಶಾಸನದಲ್ಲಿ ಕೋಟೆಯೊಳಗಿರುವ ಸ್ವಯಂಭೂ ಸೋಮೇಶ್ವರ ದೇಗುಲ ಉಲ್ಲೇಖವಿದೆ. ಪ್ರಾಯಶಃ ಇದೇ ಸದ್ಯ ಆಗ್ನೇಯ ದಿಕ್ಕಿನಲ್ಲಿ ಕೋಟೆಗೆ ಹೊಂದಿಕೊಂಡಂತಿರುವ ದೇವಾಲಯ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. ನಾಗನಹಳ್ಳಿ ಶಾಸನ ಕಲಬುರಗಿಗೆ ಸಂಬಂಧಿಸಿದಂತೆ ಮುಸ್ಲಿಂ ಆಳ್ವಿಕೆಯ ಪೂರ್ವ ಕಾಲದ ಶಾಸನವಾಗಿ ಮಹತ್ವ ಪಡೆದುಕೊಂಡಿದೆ.

ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಪೂಜಾ ಸ್ಥಳಗಳ ಕಾಯ್ದೆ ಅನ್ವಯವಾಗೋದಿಲ್ಲ ಎಂದ ಮಥುರಾ ಕೋರ್ಟ್!

ಇತಿಹಾಸ ತಜ್ಞರ ಈ ಮಾತುಗಳಿಗೆ ಪುಷ್ಟಿಎಂಬಂತೆ ಈಗಲೂ ನಗರಕ್ಕೆ ಹೊಂದಿಕೊಂಡಿರುವ ಬಹಮನಿ ಕೋಟೆಯೊಳಗೆ ಮಣ್ಣಿನ ರಾಶಿಯಲ್ಲಿ ಹೂತು ಹೋಗಿರುವ ಪುರಾತನ ದೇಗುಲದ ಕುರುಹುಗಳು, ವಿಶಾಲ ಮಂಟಪ, ಕಲಾತ್ಮಕ ಕಂಬಗಳು, ಗಣಪತಿ, ಗಜಲಕ್ಷ್ಮೇ, ಗೋಪುರ, ಸೇರಿದಂತೆ ಹತ್ತು ಹಲವು ಹಿಂದು ದೇವರ ವಿಗ್ರಹಗಳ ಕೆತ್ತನೆ ಇರುವ ಶಿಲ್ಪ, ಮೇಲ್ಚಾವಣಿಗಳಿರುವ ಸಭಾ ಮಂಟಪಗಳಿವೆ. ಈಗ ಈ ದೇಗುಲ ಮಂಟಪದವರೆಗೂ ಹೋಗುವುದೇ ದುಸ್ತರವಾಗಿದೆ.

ರಾಜಾ ಗುಲಚಂದ್‌ ನಿರ್ಮಾತೃ: ಕಲಬುರಗಿ ಕೋಟೆಯನ್ನು ವಾರಂಗಲ್‌ ಅರಸ ರಾಜಾ ಗುಲ್‌ಚಂದ್‌ ನಿರ್ಮಿಸಿದ್ದು, ಅದನ್ನು ಆ ನಂತರದಲ್ಲಿ ಬಹಮನಿ ಅರಸು ಮನೆತನದ ಸಂಸ್ಥಾಪಕ ಅಲ್ಲಾವುದ್ದೀನ್‌ ಹಸನ್‌ಗಂಗು ಬಹಮನ್‌ ಷಾ ಬಲಿಷ್ಠಗೊಳಿಸಿದನೆಂದು ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ರಾಜಾ ಗುಲಚಂದ್‌ನೇ ಈ ಕೋಟೆ ನಿರ್ಮಾತೃ ಎನ್ನಲು ಚಾರಿತ್ರಿಕ ಪುರಾವೆಗಳ ಕೊರತೆ ಇದೆ. ಸುಮಾರು 3 ಕಿ.ಮೀ. ಸುತ್ತಳತೆಯ ಈ ಕೋಟೆ 2 ಸುತ್ತಿನದ್ದಾಗಿದೆ, ಹೊರಕೋಟೆ ಎತ್ತರದಲ್ಲಿ ಕಿರಿದಿದ್ದು, ಒಳಕೋಟೆ ಎತ್ತರವಾಗಿದ್ದು ಸುಮಾರು 30 ಅಡಿಯ ಕಂದಕವಿದೆ. 15 ಬುರುಜು, 26 ಫಿರಂಗಿಗಳಿರುವ ಕೋಟೆಯಲ್ಲಿ ಒಂದು ಫಿರಂಗಿಯಂತೂ 25 ಅಡಿಯಷ್ಟುಉದ್ದವಿದೆ. ಬಹಮನಿ ಅರಸರ ಹಿಡಿತಕ್ಕೊಳಪಟ್ಟಈ ಕೋಟೆ ಇಂಡೋ ಪರ್ಷಿಯನ್‌ ಶೈಲಿಯ ವಾಸ್ತುಶಿಲ್ಪದೊಂದಿಗೆ ಈಗಿರುವ ರೂಪ ತಾಳಿತು. ಕಲ್ಯಾಣದ ಚಾಲುಕ್ಯರು, ಕಾಕತೀಯರ ಕಾಲದಲ್ಲೇ ಇಲ್ಲಿ ಸ್ವಯಂಭೂ ಸೋಮೇಶ್ವರ ದೇಗುಲವಿತ್ತು ಎಂಬುದು ಇತಿಹಾಸಜ್ಞರ ಅಭಿಪ್ರಾಯವಾಗಿದೆ.

ಕಲಾತ್ಮಕ ಕಂಬಗಳು ಚೆಲ್ಲಾಪಿಲ್ಲಿ: ಕೋಟೆಯೊಳಗಿನ ದೇಗುಲ ಕಲಾತ್ಮಕ ಕುಸರಿ ಕೆತ್ತನೆಯ ಶಿಲ್ಪ ಕಂಬಗಳನ್ನು ಹೊಂದಿತ್ತು ಎಂಬುದಕ್ಕೆ ಅಲ್ಲಿ ಇನ್ನೂ ಗೋಚರಿಸುವ ಕಲಾತ್ಮಕ ರಚನೆಗಳೇ ಸಾಕ್ಷಿ. ಆದರೆ ಕೋಟೆಯೊಳಗಿರುವ ಮಹಾದ್ದಾರ, ಹಿಂಬದಿ ದ್ವಾರ, ಕಾಮನ ಬಾವಿ, ರಣಮಂಡಲ ಇಲ್ಲೆಲ್ಲಾ ಕಲಾತ್ಮಕ ಕಂಬಗಳನ್ನು ಮೆಟ್ಟಿಲಾಗಿ, ಗೋಡೆಗೆ ಬಳಸಲಾಗಿದ್ದು ಇವೆಲ್ಲವೂ ಸೋಮೇಶ್ವರ ದೇಗುಲದ ಭಾಗಗಳೇ ಆಗಿವೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. ಎರಡು ದಶಕದ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯಿಂದ ಕೊಟೆಯ ಕಾಯಕಲ್ಪ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತಾದರೂ ವಿನಾಕಾರಣ ದೇಗುಲ ಭಾಗದಲ್ಲಿನ ಜೀರ್ಣೋದ್ಧಾರ ಯೋಜನೆ ಅರ್ಧಕ್ಕೆ ಕೈಬಿಡಲಾಯ್ತು ಎಂದು ಅನೇಕರು ಹೇಳುತ್ತಾರೆ.

ವಾರಾಣಸಿ: ಗ್ಯಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ? ಕಾಶಿ ದೇವಸ್ಥಾನದ ಮಾಜಿ ಮಹಂತ್ ಹೇಳಿದ್ದಿಷ್ಟು

ಬಹಮನಿ ಕೋಟೆ ಆಗ್ನೇಯ ದಿಕ್ಕಲ್ಲಿ ಮಣ್ಣಲ್ಲಿ ಹೂತು ಹೋಗಿರುವ ದೇಗುಲ ಪ್ರದೇಶದಲ್ಲಿ ಪುರಾತತ್ವ ಸರ್ವೇಕ್ಷಣೆ ಇಲಾಖೆ ಉತ್ಖನ ಕೈಗೆತ್ತಿಕೊಂಡಲ್ಲಿ ಸ್ವಯಂಭು ಸೋಮೇಶ್ವರ ದೇಗುಲದ ನಿಜಾಂಶಗಳು ಹೊರಬರಲು ಸಾಧ್ಯ.
-ಡಾ.ಶಂಭುಲಿಂಗ ವಾಣಿ, ಇತಿಹಾಸ ತಜ್ಞ, ಕಲಬುರಗಿ

Latest Videos
Follow Us:
Download App:
  • android
  • ios