ರಾಜ್ಯದಲ್ಲಿ ಮಳೆ: ಚಿಕ್ಕಮಗಳೂರಲ್ಲಿ ಉಷ್ಣಾಂಶ ದಿಢೀರ್‌ 10 ಡಿಗ್ರಿ ಕುಸಿತ..!

ಕಲಬುರಗಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ 1.5 ಡಿಗ್ರಿ ಇಳಿಕೆಯಾಗಿದೆ. ರಾಯಚೂರಿನಲ್ಲಿ 2.3, ಕೊಪ್ಪಳದಲ್ಲಿ 1.1, ಬೆಳಗಾವಿಯಲ್ಲಿ 1.3, ವಿಜಯಪುರದಲ್ಲಿ 2, ಬಾಗಲಕೋಟೆಯಲ್ಲಿ 4.3, ಗದಗದಲ್ಲಿ 1.7, ಬಳ್ಳಾರಿಯಲ್ಲಿ 3.7, ಶಿವಮೊಗ್ಗದಲ್ಲಿ ಗರಿಷ್ಠ ಉಷ್ಣಾಂಶ 1.6 ಡಿಗ್ರಿ ಇಳಿಕೆಯಾಗಿದೆ.
 

Temperature Suddenly Dropped by 10 Degrees in Chikkamagaluru grg

ಬೆಂಗಳೂರು(ಏ.23):  ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಲ ಝಳ ಕಡಿಮೆಯಾಗಿದ್ದು, ಚಿಕ್ಕಮಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ಏಕಾಏಕಿ ವಾಡಿಕೆ ಪ್ರಮಾಣಕ್ಕಿಂತ 10 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ.

ಕಳೆದ ಎರಡ್ಮೂರು ದಿನಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಏಪ್ರಿಲ್‌ ಮಾಸದಲ್ಲಿ ಸುಮಾರು 32.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಶುಕ್ರವಾರ ಏಕಾಏಕಿ ಗರಿಷ್ಠ ಉಷ್ಣಾಂಶವು ವಾಡಿಕೆ ಪ್ರಮಾಣಕ್ಕಿಂತ 10 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆ ಕಂಡು, 22 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಇನ್ನು ಕನಿಷ್ಠ ಉಷ್ಣಾಂಶ 19.5 ಡಿಗ್ರಿ ಸೆಲ್ಸಿಯಸ್‌ ಆಗಿದ್ದು, 5.5 ಡಿಗ್ರಿಯಷ್ಟು ಇಳಿಕೆಯಾಗಿ 14 ಡಿಗ್ರಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ನಿನ್ನೆ ವರ್ಷದ ಅತಿ ಹೆಚ್ಚು ಬಿಸಿಲು: 36.5ಕ್ಕೆ ತಲುಪಿದ ಉಷ್ಣಾಂಶ

ಕಲಬುರಗಿ, ರಾಯಚೂರು, ಬಳ್ಳಾರಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಸಿಲು ಕಡಿಮೆಯಾಗಿದೆ. ಹೀಗಾಗಿ, ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಕಲಬುರಗಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ 1.5 ಡಿಗ್ರಿ ಇಳಿಕೆಯಾಗಿದೆ. ರಾಯಚೂರಿನಲ್ಲಿ 2.3, ಕೊಪ್ಪಳದಲ್ಲಿ 1.1, ಬೆಳಗಾವಿಯಲ್ಲಿ 1.3, ವಿಜಯಪುರದಲ್ಲಿ 2, ಬಾಗಲಕೋಟೆಯಲ್ಲಿ 4.3, ಗದಗದಲ್ಲಿ 1.7, ಬಳ್ಳಾರಿಯಲ್ಲಿ 3.7, ಶಿವಮೊಗ್ಗದಲ್ಲಿ ಗರಿಷ್ಠ ಉಷ್ಣಾಂಶ 1.6 ಡಿಗ್ರಿ ಇಳಿಕೆಯಾಗಿದೆ.

ಹಲವೆಡೆ ಮಳೆ:

ಶುಕ್ರವಾರ ದೊಡ್ಡಬಳ್ಳಾಪುರ ಹಾಗೂ ಕುಂದಗೋಳದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಬೆಳಗಾವಿಯಲ್ಲಿ ಕನಬರ್ಗಿ, ಚಿಂಚೋಳಿ, ಪಾವಗಡ, ಗೌರಿಬಿದನೂರು, ಯಗಟಿ, ಭಾಗಮಂಡಲದಲ್ಲಿ ತಲಾ 2, ಬೆಳಗಾವಿ ವಿಮಾನ ನಿಲ್ದಾಣ, ಹಾವೇರಿಯ ಗುತ್ತಲ್‌, ರಾಣೆಬೆನ್ನೂರು, ವಿಜಯಪುರದ ಬಸವನಬಾಗೇವಾಡಿ, ಬಂಡೀಪುರ, ಹುಣಸೂರು, ಶಿವಮೊಗ್ಗ, ಬುಕ್ಕಾಪಟ್ಟಣ, ಕುಣಿಗಲ್‌, ದಾವಣಗೆರೆಯ ಉಚ್ಚಂಗಿದುರ್ಗದಲ್ಲಿ ತಲಾ 1 ಸೆಂ.ಮೀ. ಮಳೆಯಾದ ವರದಿಯಾಗಿದೆ.

1-2 ದಿನ ದಕ್ಷಿಣ ಒಳನಾಡಿನಲ್ಲಿ ಮಳೆ:

ದಕ್ಷಿಣ ಒಳನಾಡಿನ ಬೆಂಗಳೂರು, ತುಮಕೂರು, ಮೈಸೂರು, ಕೊಡಗು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ವಿವಿಧ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Latest Videos
Follow Us:
Download App:
  • android
  • ios