ಬೆಂಗಳೂರು[ಫೆ.24]: ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ರಣಬಿಸಿಲು ಕಾಣಿಸಿಕೊಂಡಿದ್ದು, ಜನರು ತತ್ತರಿಸುವಂತಾಗಿದೆ. ಹಗಲಿನ ವೇಳೆಯಲ್ಲಿ ಜನರು ಮನೆಯಿಂದ ಹೊರ ಬರುವುದಕ್ಕೆ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಬಿಸಿಲಿನ ಪ್ರಮಾಣ ಕಡಿಮೆ ಆಗುವ ಲಕ್ಷಣವಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಪ್ರಸಕ್ತ ವರ್ಷ ಹಿಂಗಾರು ಸಂಪೂರ್ಣವಾಗಿ ಕ್ಷೀಣಿಸಿದ್ದರಿಂದ ವಾತಾವರಣದಲ್ಲಿ ಅವಧಿಗೂ ಮುನ್ನವೇ ತೇವಾಂಶದ ಕೊರತೆ ಉಂಟಾಗಿದೆ. ಹೀಗಾಗಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ವಾಡಿಕೆಯಂತೆ ಫೆಬ್ರವರಿ ಅವಧಿಯಲ್ಲಿ 30 ರಿಂದ 32 ಡಿಗ್ರಿ ಉಷ್ಣಾಂಶ ಇರುತ್ತದೆ. ಆದರೆ, ಈ ಬಾರಿ ಅದಕ್ಕಿಂತ ಎರಡರಿಂದ ಮೂರು ಡಿಗ್ರಿ ಉಷ್ಣಾಂಶ ಹೆಚ್ಚಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಚಾಮರಾಜನಗರ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ​ಗ​ಳ ಉಷ್ಣಾಂಶ ಹೆಚ್ಚಳ​ವಾ​ಗಿದೆ. ದಕ್ಷಿಣ ಕನ್ನಡ, ಬೀದರ್‌, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಗದಗ, ಮತ್ತು ಕಲಬುರಗಿಯಲ್ಲಿ ಸರಾಸರಿ 34ರಿಂದ 38 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಹೆಚ್ಚಾಗುವ ಸಾಧ್ಯತೆ ಇದೆ.

ಸದ್ಯಕ್ಕೆ ಉಷ್ಣಾಂಶ ಕಡಿಮೆ ಇಲ್ಲ:

ರಾಜ್ಯದಲ್ಲಿ ಸದ್ಯಕ್ಕೆ ಮೋಡ ಹಾಗೂ ಮಳೆ ಬರುವ ಸಾಧ್ಯತೆಗಳಿಲ್ಲ ಹೀಗಾಗಿ ಉಷ್ಣಾಂಶ ಪ್ರಮಾಣ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಪೂರ್ವ ಮುಂಗಾರು ಆರಂಭವಾದರೆ ಸ್ವಲ್ಪ ಪ್ರಮಾಣದಲ್ಲಿ ಉಷ್ಣಾಂಶ ಕಡಿಮೆ ಆಗಬಹುದಷ್ಟೇ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಅತಿ ಹೆಚ್ಚು ಉಷ್ಣಾಂಶ ಕಂಡು ಬಂದಿರುವ ಜಿಲ್ಲೆಗಳ

ಜಿಲ್ಲೆ ಗರಿಷ್ಠ

ಕನಿಷ್ಠ

ದಕ್ಷಿಣ ಕನ್ನಡ 39.3 18.7
ಉಡುಪಿ 38.8 20.0
ಉತ್ತರ ಕನ್ನಡ 37.9 16.9
ಕಲ್ಬುರ್ಗಿ 37.3 21.0
ರಾಯಚೂರು 37.0 18.8
ಬೀದರ್‌ 36.3 21.0
ಬೆಂಗಳೂರು ನಗರ 32.9 13.9
ಬೆಂಗಳೂರು ಗ್ರಾಮಾಂತರ 32.8 12.8