ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ (SC) ಒಳ ಮೀಸಲಾತಿಯನ್ನು ಜಾರಿಗೊಳಿಸಲು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಈ ನಿರ್ಧಾರದ ಅನ್ವಯ, ದಲಿತ ಎಡಗೈ, ಬಲಗೈ ಮತ್ತು ಇತರ ಸ್ಪೃಶ್ಯ ಸಮುದಾಯಗಳಿಗೆ ನಿರ್ದಿಷ್ಟ ಶೇಕಡಾ ಮೀಸಲಾತಿ ಹಂಚಿಕೆ ಮಾಡಲಾಗಿದೆ. 56,400 ತಕ್ಷಣ ನೇಮಕಾತಿ.

ಬೆಂಗಳೂರು (ಏ.24): ದಶಕಗಳ ಕಾಲದ ಹೋರಾಟ ಮತ್ತು ದಲಿತ ಸಮುದಾಯಗಳ ಸುದೀರ್ಘ ನಿರೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊನೆಗೂ ತಾರ್ಕಿಕ ಅಂತ್ಯ ನೀಡಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಒಳ ಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಈ ಮೂಲಕ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ದಶಕಗಳ ಹೋರಾಟಕ್ಕೆ ಸಂದ ಜಯ:

ಸಚಿವ ಸಂಪುಟದ ಬಳಿಕ ಒಳ ಮೀಸಲಾತಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಬಹಳ ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆದಿದೆ. ನಮ್ಮ ಪಕ್ಷದ ವತಿಯಿಂದ ಚಿತ್ರದುರ್ಗದಲ್ಲಿ ನಡೆಸಿದ ಸಮಾವೇಶದಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಸರ್ವಾನುಮತದಿಂದ ಜಾರಿಗೆ ನಿರ್ಧರಿಸಿದ್ದೆವು. ಚುನಾವಣಾ ಪ್ರಣಾಳಿಕೆಯಲ್ಲೂ ನಾವು ಇದನ್ನು ಭರವಸೆ ನೀಡಿದ್ದೆವು. ಇಂದು ಆ ಭರವಸೆಯನ್ನು ಈಡೇರಿಸಿದ್ದೇವೆ' ಎಂದು ಹೆಮ್ಮೆಯಿಂದ ಘೋಷಿಸಿದರು.

ಯಾರಿಗೆ ಎಷ್ಟು ಮೀಸಲಾತಿ? (ಪರ್ಸೆಂಟೇಜ್ ವಿವರ):

ಸುಪ್ರೀಂ ಕೋರ್ಟ್‌ನ ಆಗಸ್ಟ್ 1, 2024ರ ತೀರ್ಪಿನ ಅನ್ವಯ ರಚಿಸಲಾಗಿದ್ದ ತಾಂತ್ರಿಕ ಸಮಿತಿಯ ವರದಿ ಆಧರಿಸಿ ಸಂಪುಟ ಸಭೆಯಲ್ಲಿ ಮೀಸಲಾತಿ ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ.

  • ದಲಿತ ಎಡಗೈ ಸಮುದಾಯ (SC-Left): 5.25%
  • ದಲಿತ ಬಲಗೈ ಸಮುದಾಯ (SC-Right): 5.25%
  • ಸ್ಪೃಶ್ಯ ಹಾಗೂ ಇತರ ಜಾತಿಗಳು (SC-Others): 4.5%

ಅಲೆಮಾರಿ ಸಮುದಾಯಗಳಿಗೆ ವಿಶೇಷ ಆದ್ಯತೆ: ಸಿ ಕೆಟಗರಿ (4.5%) ಅಡಿಯಲ್ಲಿ ಬರುವ 59 ಅಲೆಮಾರಿ ಜಾತಿಗಳಿಗೆ ಆ ಗುಂಪಿನ ಒಟ್ಟು ಹುದ್ದೆಗಳಲ್ಲಿ ಶೇಕಡಾ 20 ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ಕಲ್ಪಿಸಲು ತೀರ್ಮಾನಿಸಲಾಗಿದೆ.

ಒತ್ತಡಕ್ಕೆ ಮಣಿಯದ ಮುಖ್ಯಮಂತ್ರಿ:

ಈ ಮಹತ್ವದ ತೀರ್ಮಾನದ ಹಿಂದೆ ದೊಡ್ಡ ರಾಜಕೀಯ ಹೈಡ್ರಾಮವೇ ನಡೆದಿದೆ. ಸಂಪುಟ ಸಭೆಯ ಬಳಿಕ ಕೆಲವು ಸಚಿವರು ಮತ್ತು ನಾಯಕರು ಈ ತೀರ್ಮಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಿಎಂ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ, ಯಾವುದಕ್ಕೂ ಮಣಿಯದ ಸಿದ್ದರಾಮಯ್ಯ, ಸಂಪುಟದಲ್ಲಿ ತೆಗೆದುಕೊಂಡ ಒಮ್ಮತದ ತೀರ್ಮಾನವನ್ನೇ ಜಾರಿಗೊಳಿಸಲು ದೃಢ ನಿರ್ಧಾರ ತಳೆದಿದ್ದಾರೆ. 'ನಮ್ಮ ನಿಲುವು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ, ಇದರಲ್ಲಿ ರಾಜಿಯಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

56,400 ಹುದ್ದೆಗಳ ನೇಮಕಾತಿ ತಕ್ಷಣ ಆರಂಭ:

ಉದ್ಯೋಗಾಕಾಂಕ್ಷಿಗಳಿಗೆ ಈ ಸುದ್ದಿಯ ಜೊತೆಗೆ ಮತ್ತೊಂದು ಬಂಪರ್ ಕೊಡುಗೆಯನ್ನು ಸಿಎಂ ನೀಡಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿದಂತೆ 56,400 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತಕ್ಷಣವೇ ಆರಂಭವಾಗಲಿದೆ. ಈ ಎಲ್ಲಾ ನೇಮಕಾತಿಗಳಲ್ಲಿ ಈಗ ಘೋಷಿಸಲಾದ ಹೊಸ ಒಳ ಮೀಸಲಾತಿ ಪದ್ಧತಿಯನ್ನೇ ಅನುಸರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಲಯದ ಮಿತಿ ಮತ್ತು ರೋಸ್ಟರ್ ಅಳವಡಿಕೆ:

ಮೀಸಲಾತಿ ಪ್ರಮಾಣವು 50% ಮಿತಿ ಮೀರಬಾರದು ಎಂಬ ನ್ಯಾಯಾಲಯದ ಆದೇಶವನ್ನು ಗಮನದಲ್ಲಿಟ್ಟುಕೊಂಡು ಈ ಹಂಚಿಕೆ ಮಾಡಲಾಗಿದೆ. ಹಿಂದೆ ನಾಗಮೋಹನ್ ದಾಸ್ ಸಮಿತಿ ವರದಿಯ ಆಧಾರದ ಮೇಲೆ ನಾವು ತೀರ್ಮಾನ ಕೈಗೊಂಡಿದ್ದೆವು. ಈಗ ಟೆಕ್ನಿಕಲ್ ಕಮಿಟಿಯ ಶಿಫಾರಸ್ಸಿನಂತೆ ಅಂಕಿ-ಅಂಶಗಳನ್ನು ತುಸು ಮಾರ್ಪಡಿಸಿ ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡಲಾಗಿದೆ ಎಂದು ಸಿಎಂ ವಿವರಿಸಿದರು.

'ಈ ಐತಿಹಾಸಿಕ ನಿರ್ಧಾರದಿಂದ ದಲಿತ ಸಂಘಟನೆಗಳು ಮತ್ತು ಸಮುದಾಯದ ಜನರು ಸಂತಸಗೊಂಡಿದ್ದಾರೆ ಎಂಬ ವಿಶ್ವಾಸ ನನಗಿದೆ. ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ' ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.