ಸರಿಯಾಗಿ ಎರಡು ವರ್ಷದ ಹಿಂದೆ 2018ರಲ್ಲಿ ನಾವು ಒಂದು ಕುಟುಂಬವಾಗಿ ಅತ್ಯಂತ ಸಂಕಷ್ಟದ ಕ್ಷಣಗಳನ್ನು ದೂರದ ನ್ಯೂಯಾರ್ಕ್ನಲ್ಲಿ ಎದುರಿಸುತ್ತಿದ್ದೆವು. ಬೆಂಗಳೂರು, ದಿಲ್ಲಿಯಲ್ಲಿ ಕಾಯಿಲೆ ವಾಸಿ ಆಗದೆ ಇದ್ದಾಗ ಅಮೆರಿಕಕ್ಕೆ ಅನಂತಕುಮಾರ್‌ರನ್ನು ಕರೆದುಕೊಂಡು ಹೋಗಿದ್ದ ನಾನು ಮತ್ತು ನನ್ನ ಮೈದುನ ನಂದಕುಮಾರ್‌ ದುಗುಡದಲ್ಲಿದ್ದೆವು.

ಅವತ್ತು ಹುಟ್ಟಿದ ಹಬ್ಬದ ದಿನವೇ ಮೆಮೋರಿಯಲ್‌ ಸ್ಲೋನ್‌ ಕೆಟರಿಂಗ್‌ನ ವೈದ್ಯರು ಅನಂತಕುಮಾರ್‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಾವು ಹೊಸದೊಂದು ಮದ್ದು ಶುರು ಮಾಡೋಣ ಎಂದು ಹೇಳಿದಾಗ ಇವರು ಕೂಡ ಉತ್ಸಾಹಿತರಾಗಿದ್ದರು. ಮೈದುನನ ಮಗ ಹತ್ತಿರದಲ್ಲೇ ಹೋಗಿ ಕೇಕ್‌ ತೆಗೆದುಕೊಂಡು ಬಂದ. ಒಂದೆರಡು ಬಲೂನ್‌ ಕಟ್ಟಿಅಲ್ಲೇ ಹುಟ್ಟಿದ ಹಬ್ಬ ಆಚರಿಸಿದೆವು. ಅವುಗಳೇ ಅವರೊಟ್ಟಿಗಿನ ನಮ್ಮ ಕೊನೆಯ ಸಂಭ್ರಮದ ಕ್ಷಣಗಳು. ಹುಟ್ಟಿದ ಹಬ್ಬ ಆಚರಿಸಿದ ಫೋಟೋಗಳನ್ನು ಬೆಂಗಳೂರಿನಲ್ಲಿದ್ದ ಇಬ್ಬರು ಮಕ್ಕಳಿಗೆ ಕಳಿಸಿ ಅವತ್ತು ತುಂಬಾ ದಿನಗಳ ನಂತರ ನಕ್ಕು ಮಾತನಾಡುತ್ತಿದ್ದರು.

ಹಸಿರಿನ ಬಗ್ಗೆ ಅನಂತ ಪ್ರೀತಿ

ವಿದ್ಯಾರ್ಥಿ ಪರಿಷತ್ತಿನ ಕಾಲದಿಂದಲೂ ಅನಂತಕುಮಾರ್‌ ಆಗಿನ ಕಾಲಕ್ಕೆ ಹೊಸದು ಎನ್ನಬಹುದಾಗಿದ್ದ ವಿಷಯಗಳ ಬಗ್ಗೆ ಆಗ್ರಹ ಪೂರ್ವಕವಾಗಿ ಮಾತನಾಡುತ್ತಿದ್ದರು. 2006ರಿಂದಲೇ ಸಸ್ಯಾಗ್ರಹದ ಬಗ್ಗೆ ಮಾತನಾಡಲು ಶುರುಮಾಡಿದ್ದರು. ನಿಜಕ್ಕೂ ಬೆಂಗಳೂರು ಹಳೆಯ ಹಸಿರಿನ ವೈಭವಕ್ಕೆ ಮರಳಬೇಕಾದರೆ ಒಬ್ಬ ಮನುಷ್ಯನಿಗೆ ಸರಾಸರಿ ಒಂದು ಗಿಡ ಇರಲೇಬೇಕು ಎಂದು ಒತ್ತು ಕೊಟ್ಟು ಹೇಳುತ್ತಿದ್ದರು. ‘ಇವತ್ತು 7 ಜನರಿಗೆ ಒಂದು ಗಿಡ ಇದೆ. ಅದು ನಮ್ಮ ಜೀವಮಾನದಲ್ಲೇ 1:1 ಆದರೆ ಖುಷಿಯ ವಿಚಾರ. ಅದಕ್ಕೆ ನಾವೆಲ್ಲರೂ ಹಸಿರು ಸೇನಾನಿ ಆಗಬೇಕು’ ಎನ್ನುತ್ತಿದ್ದರು. ನಮ್ಮ ಬೆಂಗಳೂರಿಗೆ ಪೆಟ್ರೋಲ್‌ ಡೀಸೆಲ್‌ ಕುಡಿಯುವ ಐಷಾರಾಮಿ ಬಿಎಂಡಬ್ಲು ಬೇಡ. ಬೆಂಗಳೂರಿಗೆ ಬೈಸಿಕಲ್‌, ಮೆಟ್ರೋ ಮತ್ತು ವಾಕಿಂಗ್‌ನ ಬಿಎಂಡಬ್ಲು ಬೇಕೆಂದು ಮನೆಯಲ್ಲಿ ಕೂಡ ಮಕ್ಕಳಿಗೆ ಒತ್ತಿ ಹೇಳುತ್ತಿದ್ದರು.

2015ರಲ್ಲಿ ಬಸವನಗುಡಿಯಲ್ಲಿ ಅನಂತ್‌ ಹುಟ್ಟಿದ ದಿನ ಹಚ್ಚಿದ್ದ 57 ಸಸಿಗಳು ಇವತ್ತು ‘ಅನಂತ ವನ’ದಲ್ಲಿ ದೊಡ್ಡದಾಗಿ ಬೆಳೆಯುತ್ತಿವೆ. ರವಿವಾರ ಬೆಂಗಳೂರಿನಲ್ಲಿದ್ದರೆ ಗಿಡ ನೆಡುವ ಕಾರ್ಯಕ್ರಮಕ್ಕೆ ತಪ್ಪದೆ ಬರುತ್ತಿದ್ದರು. ಇವತ್ತಿಗೂ ನಾವೆಲ್ಲ ಅದಮ್ಯ ಚೇತನದ ಕಾರ್ಯಕರ್ತರು ರವಿವಾರ ಗಿಡ ನೆಡಲು ಅನಂತ್‌ರ ಹಸಿರು ಪ್ರೀತಿಯೇ ಪ್ರೇರಣೆ. ನಮ್ಮ ದೊಡ್ಡ ಮಗಳು ಐಶ್ವರ್ಯಾಳ ಮದುವೆಯನ್ನು ಪ್ಲಾಸ್ಟಿಕ್‌ಮುಕ್ತ, ಕಸಮುಕ್ತ ಸಮಾರಂಭವಾಗಿ ರೂಪಿಸಿದ್ದೆವು. ಅಂದರೆ ಆಮಂತ್ರಣ ಪತ್ರಿಕೆಯಿಂದ ಹಿಡಿದು ನೀರಿನ ಬಟ್ಟಲು ಕೂಡ ಪ್ಲಾಸ್ಟಿಕ್‌ರಹಿತವಾಗಿ ಬಳಸಲು ನಾವಿಬ್ಬರೂ ಯೋಜನೆ ರೂಪಿಸಿದ್ದೆವು. ಸಕ್ರಿಯ ರಾಜಕಾರಣಿ ಆಗಿಯೂ ಕೂಡ ಹಸಿರಿನ ಬಗ್ಗೆ ಅವರಿಗೆ ಬದ್ಧತೆ ಇತ್ತು.

ಪುರುಷರ ಪ್ರಾಬಲ್ಯ ಮೆಟ್ಟ ಸಾಧಕಿಯರ ಮೇರು ಸಾಧನೆ..!

ಅದಮ್ಯ ಚೇತನ ಅವರದೇ ಕನಸು

ಹಸಿರಿನ ಜೊತೆಗೆ ಹಸಿದವನಿಗೆ ಅನ್ನ ನೀರು ನೀಡುವುದು ಅನಂತಕುಮಾರ್‌ ಪ್ರಾತಿನಿಧ್ಯದ ವಿಷಯವಾಗಿತ್ತು. ನಮ್ಮ ಮದುವೆಗಿಂತ ಮೊದಲು ಕೂಡ ಅವರ ತಾಯಿ ಗಿರಿಜಾ ಶಾಸ್ತಿ್ರ ಯಾರೇ ಕಾರ್ಯಕರ್ತರು ಮನೆಗೆ ಬಂದರೂ ಮೊದಲು ತಿಂಡಿ, ಊಟ ಕೊಡುವುದನ್ನು ಅಭ್ಯಾಸ ಮಾಡಿದ್ದರು. ನಮ್ಮ ಹುಬ್ಬಳ್ಳಿ, ಬೆಂಗಳೂರು, ದಿಲ್ಲಿ ಯಾವುದೇ ಮನೆಯಲ್ಲೂ ಮನೆಗೆ ಬಂದರೆ ಮೊದಲು ಆಹಾರ, ನಂತರ ಕೆಲಸದ ಚರ್ಚೆ. ನನ್ನ ಮದುವೆಯಾದ ಹೊಸತರಲ್ಲಿ ಜಯಮಹಲ್‌ನ ಎಸ್‌.ಮಲ್ಲಿಕಾರ್ಜುನಯ್ಯ ಅವರಿಗೆ ನೀಡಿದ್ದ ಸರ್ಕಾರಿ ನಿವಾಸದಲ್ಲಿ ಕೆಳಗೆ ನಾವು, ಮೇಲಿನ ಕೋಣೆಯಲ್ಲಿ ಯಡಿಯೂರಪ್ಪ ಇರುತ್ತಿದ್ದರು. ಹುಬ್ಬಳ್ಳಿ ಮೂಲದವಳಾದ ನಾನು ರಾಗಿ ಮುದ್ದೆ, ಸೊಪ್ಪು ಸಾರು ಮಾಡಲು ಕಲಿತಿದ್ದು ಯಡಿಯೂರಪ್ಪನವರು ಊಟಕ್ಕೆ ಬರುತ್ತಾರೆ ಎಂದು.

ಜಯಮಹಲ್‌ನ ನಮ್ಮ ಮನೆಗೆ ಅಡ್ವಾಣಿ, ಪ್ರಮೋದ ಮಹಾಜನ್‌, ಗೋವಿಂದಾಚಾರ್ಯ, ಉಮಾ ಭಾರತಿ, ಸುಂದರ ಸಿಂಗ್‌ ಭಂಡಾರಿ, ಸಿಕಂದರ ಬಕ್ತ ಮುಂತಾದವರು ಬಂದು ಉಳಿದುಕೊಳ್ಳುತ್ತಿದ್ದರು. ಆ ಮನೆಯೇ ಆಗ ನಮ್ಮ ನಿವಾಸ ಮತ್ತು ರಾಜ್ಯ ಬಿಜೆಪಿ ಕಚೇರಿ. ಮದುವೆಯಾದ ನಂತರವೇ ಅನಂತಕುಮಾರ್‌ ಹೇಳಿದ್ದರು ‘ಪಂಕ್ತಿಯಲ್ಲಿ ಬಡಿಸುವಾಗ ಮನೆಗೆ ಬಂದ ಅತಿಥಿಗೆ ಮೊದಲು ಬಡಿಸಬೇಕು. ಅದು ಕಿರಿಯ ಕಾರ್ಯಕರ್ತನಾದರೂ ಸರಿ’ ಎಂದು. ಎಲ್ಲೇ ಕಾರ್ಯಕ್ರಮಕ್ಕೆ ಹೋಗಲಿ ತಾನು ಊಟ ಮಾಡಿದರೆ ತನ್ನ ಸಿಬ್ಬಂದಿ, ಚಾಲಕರು, ಆಪ್ತ ಕಾರ್ಯದರ್ಶಿಗಳು ಊಟ ಮಾಡಿ ಬರುವವರೆಗೆ ಕಾಯುತ್ತಿದ್ದರು. ನನ್ನ ಅತ್ತೆ ಗಿರಿಜಾ ಶಾಸ್ತಿ್ರ ಮತ್ತು ಅನಂತ್‌ ಅವರ ಹಸಿದವರಿಗೆ ಮೊದಲು ಅನ್ನ ನೀಡಬೇಕು ಎಂಬ ಒತ್ತಾಸೆಯಂತೆ 2003ರಲ್ಲಿ ಅದಮ್ಯ ಚೇತನ ಸಂಸ್ಥೆಯಿಂದ ಬಿಸಿ ಊಟ ಆರಂಭಿಸಿದೆವು.

ಮನೆಗೆ ಬರುವ 4 ಅತಿಥಿಗಳಿಗೆ ಊಟ ಮಾಡಿ ಬಡಿಸುವ ಸಾಮಾನ್ಯ ಗೃಹಿಣಿಯಾಗಿದ್ದ ನನಗೆ ಇವತ್ತು ಅದಮ್ಯದಿಂದ ಲಕ್ಷಾಂತರ ಮಕ್ಕಳಿಗೆ ಶುದ್ಧ ಸ್ವಾದಿಷ್ಟಪುಷ್ಕಳ ಭೋಜನ ನೀಡಲು ಸಾಧ್ಯ ಆಗಿರುವುದು ಅನಂತಕುಮಾರ್‌ ಅವರ ಇಚ್ಛಾಶಕ್ತಿ ಮತ್ತು ಬೆಂಬಲದ ಕಾರಣದಿಂದ. 2003ರಲ್ಲಿ ಗವಿ ಗಂಗಾಧರೇಶ್ವರ ದೇವಾಲಯದ ಪಕ್ಕದಲ್ಲಿ ಅದಮ್ಯದಿಂದ ಅಡುಗೆ ಮನೆ ಆರಂಭಿಸುವಾಗ ಅಲ್ಲೇ ಕೆಳಗಡೆ ‘ಗಂಗೆ’ ಸಿಕ್ಕಳು. ಆಗ ಅನಂತ್‌ ಅನ್ನಪೂರ್ಣೇಶ್ವರಿ ದೇವಿ ಕೂಡ ಇಲ್ಲಿ ಕಾಯಂ ಇದ್ದೇ ಇರುತ್ತಾಳೆ ಎಂದು ಯಾವಾಗಲೂ ಹೇಳುತ್ತಿದ್ದರು.

ಕೊನೆಯವರೆಗೂ ಪ್ರವಾಸ ಪ್ರವಾಸ

ನಮ್ಮ ಮದುವೆಗೆ ಮುಂಚಿನಿಂದಲೇ ಅನಂತಕುಮಾರ್‌ ತಿಂಗಳಿಗೆ 20 ದಿನ ರಾಜ್ಯದ ಮೂಲೆಮೂಲೆಗೆ ಪ್ರವಾಸ ಮಾಡುತ್ತಿದ್ದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ಪ್ರವಾಸ ಮಾಡದ ಕ್ಷೇತ್ರಗಳಿಲ್ಲ. ಆಗ ಈಗಿನ ಹಾಗೆ ಮೊಬೈಲ್‌ ಫೋನ್‌ಗಳೇನೂ ಇರಲಿಲ್ಲ. 1989ರ ವಿಧಾನಸಭಾ ಚುನಾವಣೆಯಲ್ಲಿ ಅಂದರೆ ನಮ್ಮ ಮದುವೆಯಾದ 6 ತಿಂಗಳ ನಂತರ ಸತತವಾಗಿ 18 ದಿನ ಅಂಬಾಸಿಡರ್‌ ಕಾರ್‌ನಲ್ಲಿ ರಾತ್ರಿ ಪ್ರವಾಸ ಮಾಡಿದ್ದರು. ಅದರಲ್ಲೇ ನಿದ್ದೆ, ಜೊತೆಗೆ ಚುನಾವಣೆಯ ತಯಾರಿ. ಜೇಬಿನಲ್ಲಿ ದುಡ್ಡು ಇಟ್ಟುಕೊಳ್ಳುತ್ತಿರಲಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಸ ಮಾಡುವುದು 2018ರ ಚುನಾವಣೆವರೆಗೆ ನಡೆದೇ ಇತ್ತು. ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನಿಂದ ದಿಲ್ಲಿಗೆ ವಿಮಾನದಲ್ಲಿ ಹೋಗಿ ರಾತ್ರಿ 12 ಗಂಟೆಗೆ ವಾಪಸ್‌ ಬರುತ್ತಿದ್ದರು.

2018 ರಲ್ಲೇ ಒಮ್ಮೆ ಬೆಳಿಗ್ಗೆ ದಿಲ್ಲಿ ಬಿಟ್ಟವರು ರಾಯಪುರಕ್ಕೆ ಹೋಗಿ ವೆಂಕಯ್ಯ ನಾಯ್ಡು ಜೊತೆಗೆ ಹೈದರಾಬಾದ್‌ಗೆ ಹೋಗಿ ನೆಲ್ಲೂರಿಗೆ ಭೇಟಿ ಕೊಟ್ಟು ಮಂಗಳೂರಿಗೆ ಬಂದು ಕಲ್ಲಡ್ಕಕ್ಕೆ ಹೋಗಿ ವಾಪಸ್‌ ಬೆಂಗಳೂರಿಗೆ ಬಂದು ದಿಲ್ಲಿಗೆ ಹೋಗಿ ಮರುದಿನ ಕೇರಳದ ಕೊಚ್ಚಿಗೆ ಹೋಗಿದ್ದರು. ಕೆಂಪು ಬಸ್ಸಾದರೂ ಸರಿ, ವಿಮಾನ ಪ್ರವಾಸವಾದರೂ ಸರಿ ನಾನು ದಣಿದಿದ್ದೇನೆ, ವಿಶ್ರಾಂತಿ ಬೇಕು ಎಂದು ಹೇಳುತ್ತಿರಲಿಲ್ಲ. ಈ ಪರಿಯ ಓಡಾಟ ವಿದ್ಯಾರ್ಥಿ ಪರಿಷತ್ತಿನ ದಿನಗಳಿಂದ ಆರಂಭವಾಗಿದ್ದು 2018 ರವರೆಗೆ ನಿರಂತರವಾಗಿತ್ತು.

ಇಷ್ಟೆಲ್ಲ ಓಡಾಟ ಮಾಡುತ್ತಿದ್ದರೂ, ನೂರೆಂಟು ವಿಷಯಗಳಲ್ಲಿ ಮಗ್ನರಾಗಿದ್ದರೂ ಕೂಡ ಅನಂತಕುಮಾರ್‌ ಅವರಿಗೆ ಮಲಗಿದ ಕೂಡಲೇ ನಿದ್ದೆ ಬರುತ್ತಿತ್ತು ಎನ್ನುವುದು ವಿಶೇಷ. ಆಗ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್ಸಿನಲ್ಲಿ ಹೋಗುತ್ತಿದ್ದೆವು. ಬಸ್ಸಿನಲ್ಲಿ ಸೀಟಿನಲ್ಲಿ ಕುಳಿತ ಕ್ಷಣ ಇವರು ನಿದ್ದೆ ಮಾಡುತ್ತಿದ್ದರು. ಆದರೆ ಎಷ್ಟೇ ನಿದ್ದೆಗೆಟ್ಟರೂ ಮರುದಿನ ಲವಲವಿಕೆಯಿಂದ ಇರುತ್ತಿದ್ದರು. ಒಮ್ಮೆ ಸತತ ಮೂರು ದಿನ ನಿದ್ದೆ ಇಲ್ಲದೆ ಕೆಲಸ ಮಾಡಿದ ಉದಾಹರಣೆ ಕೂಡ ಇದೆ.

ರಾಷ್ಟ್ರ ಎಂದೂ ಮರೆಯದ ಆಜಾತಶತ್ರು ಅನಂತ್‌ಕುಮಾರ್

ಮೋದಿ ಭಾಷಣಕ್ಕೆ ಪಾಯಿಂಟ್ಸ್‌

ಅನಂತಕುಮಾರ್‌ ಹಿಂದಿ, ಇಂಗ್ಲಿಷ್‌ನಿಂದ ಕನ್ನಡಕ್ಕೆ ನಿರರ್ಗಳ ತರ್ಜುಮೆ ಮಾಡುತ್ತಿದ್ದರು. ಒಂದೂ ಆಂಗ್ಲ ಪದ ಬಳಸದೆ ಮಾತನಾಡುತ್ತಿದ್ದರು. ಮತ್ತು ಯಾವತ್ತೂ ಇವರು ಬರೆದ ಅಕ್ಷರಗಳಲ್ಲಿ ಕಾಗುಣಿತದ ವ್ಯಾಕರಣದ ತಪ್ಪುಗಳಿರುತ್ತಿರಲಿಲ್ಲ. ವಿದ್ಯಾರ್ಥಿ ಪರಿಷತ್ತಿನ ದಿನಗಳಿಂದ ಗೊತ್ತುವಳಿಗಳ ಕರಡನ್ನುಬರೆಯುತ್ತಿದ್ದ ಅವರು, ಮನೆಯಲ್ಲಿ ಮಕ್ಕಳಿಗೆ ಪ್ರೊಜೆಕ್ಟ್ ವರ್ಕ್ಗೆ ನೋಟ್ಸ್‌ ಕೂಡ ಬರೆದುಕೊಡುತ್ತಿದ್ದರು. ಕೊನೆಗೆ 2018ರ ಕೆಂಪು ಕೋಟೆಯ ಪ್ರಧಾನಿ ಮೋದಿ ಭಾಷಣಕ್ಕೆ ಸಾಕಷ್ಟುಪಾಯಿಂಟ್ಸ್‌ ಕೂಡ ಬರೆದುಕೊಟ್ಟಿದ್ದರು.

ನನಗೆ ಅನೇಕ ಬಾರಿ ಆಶ್ಚರ್ಯ ಆಗುವಷ್ಟುಅವರು ವ್ಯಕ್ತಿಗಳ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ನಮ್ಮ ಕಾಲದ ವಿದ್ಯಾರ್ಥಿ ಪರಿಷತ್ತಿನ ಹಳೆಯ ಕಾರ್ಯಕರ್ತರು ಬಂದರೆ ‘ನಿಮ್ಮ ಅಕ್ಕ ಏನು ಮಾಡುತ್ತಾರೆ? ಅಣ್ಣ ಎಲ್ಲಿದ್ದಾನೆ’ ಎಂದೆಲ್ಲ ನೆನಪು ಮಾಡಿಕೊಂಡು ಮಾತನಾಡಿಸುತ್ತಿದ್ದರು. ರಾಷ್ಟ್ರ ನಾಯಕರಾಗಿ ಬೆಳೆದರೂ ಕೂಡ ತನ್ನೊಳಗೆ ಒಬ್ಬ ಕಾರ್ಯಕರ್ತನನ್ನು ಜೀವಂತವಾಗಿ ಇಟ್ಟುಕೊಂಡಿದ್ದ ಅವರು ಒಬ್ಬ ಪುತ್ರನಾಗಿ, ಒಬ್ಬ ಗಂಡನಾಗಿ, ಒಬ್ಬ ತಂದೆಯಾಗಿ, ಒಬ್ಬ ಸಹೋದರನಾಗಿ ಕೂಡ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು.

ನಮ್ಮ ದುರದೃಷ್ಟ. ನಮ್ಮೆಲ್ಲರ ಹೆಮ್ಮೆಯ ಅನಂತಕುಮಾರ್‌ ಈಗ ಭೌತಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಆಯಸ್ಕಾಂತದಂಥ ಅವರ ವ್ಯಕ್ತಿತ್ವದ ಶಕ್ತಿಯೇ ನಮಗೆ ದಾರಿದೀಪ. ಅದಮ್ಯ ಚೇತನದ ಕೆಲಸಗಳಿರಲಿ, ಕಳೆದ ವರ್ಷ 60ನೇ ಹುಟ್ಟುಹಬ್ಬಕ್ಕೆ ಆರಂಭವಾದ ಅನಂತಕುಮಾರ್‌ ಪ್ರತಿಷ್ಠಾನದ ಕೆಲಸಗಳಿರಲಿ, ಅದೃಶ್ಯವಾಗಿಯೇ ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಮುಂದಿನ ದಾರಿ ತೋರಿಸುತ್ತಿದ್ದಾರೆ.

- ತೇಜಸ್ವಿನಿ ಅನಂತಕುಮಾರ್‌

ಸಮಾಜ ಸೇವಕಿ, ಅದಮ್ಯ ಚೇತನ ಟ್ರಸ್ಟ್‌