Asianet Suvarna News Asianet Suvarna News

ರಾಷ್ಟ್ರ ಎಂದೂ ಮರೆಯದ ಆಜಾತಶತ್ರು ಅನಂತ್‌ಕುಮಾರ್

ರಾಷ್ಟ್ರ ರಾಜಕಾರಣ, ಭಾರತೀಯ ಜನತಾ ಪಕ್ಷ ಎಂದಿಗೂ ಮರೆಯದ ಧೀಮಂತ ವ್ಯಕ್ತಿ, ಅಜಾತಶತ್ರು ಅನಂತ್‌ಕುಮಾರ್ ನಮ್ಮನ್ನಗಲಿ ಇಂದಿಗೆ 1 ವರ್ಷ. ಅನಂತಕುಮಾರ್‌ ಯಾವುದೇ ರಾಜಮನೆತನದಿಂದಾಗಲಿ, ಶ್ರೀಮಂತಿಕೆಯ ಕುಟುಂಬದಿಂದಾಗಲೀ ಅಥವಾ ಆರ್ಥಿಕವಾಗಿ ಸಬಲವಾಗಿರುವ ಕುಟುಂಬದಿಂದಾಗಲೀ ಬಂದವರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಟ್ಟಿನಂಬಿಕೆ ಇಟ್ಟುಕೊಂಡು ತಮ್ಮದೇ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

Tejasvini Ananth kumar remembers Ananthkumar on his death Anniversary
Author
Bengaluru, First Published Nov 12, 2019, 1:47 PM IST

ಕೇಂದ್ರ ಸಚಿವ ಅನಂತಕುಮಾರ್‌ ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಸಾರ್ವಜನಿಕ ಬದುಕು ಆರಂಭಿಸಿದವರು. ಆಗಿನಿಂದ ಪ್ರಾರಂಭವಾದ ಅವರ ಸಾರ್ವಜನಿಕ ಬದುಕು 59ನೇ ವಯಸ್ಸಿನವರಿಗೆ ಹೋರಾಟದ ರೂಪದಲ್ಲಿ ನಡೆಯಿತು.

ಹುಬ್ಬಳ್ಳಿಯಲ್ಲಿ ಜನಿಸಿದ ಅನಂತಕುಮಾರ್‌ ಸಾಮಾನ್ಯ ಕುಟುಂಬದಿಂದ ಬಂದವರು. ಅಂತಹ ವ್ಯಕ್ತಿ ಯಾವುದೇ ಬೆಂಬಲ ಇಲ್ಲದೆ ತಮ್ಮದೇ ಶ್ರಮದಿಂದ ದೆಹಲಿಯವರೆಗೆ ಬೆಳೆದು ಕೇಂದ್ರ ಸರ್ಕಾರದ ಉನ್ನತ ನಿರ್ಣಾಯಕ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮಟ್ಟಕ್ಕೆ ಬೆಳೆದರು.

ಅನಂತ ಸ್ಮೃತಿ ವನಕ್ಕೆ ಶಂಕು ಸ್ಥಾಪನೆ: ಕಣ್ಣಿನ ಆಕಾರದ ಸ್ಮಾರಕದಲ್ಲಿ 5 ವೈಶಿಷ್ಟ್ಯಗಳು

ಅನಂತಕುಮಾರ್‌ ಯಾವುದೇ ರಾಜಮನೆತನದಿಂದಾಗಲಿ, ಶ್ರೀಮಂತಿಕೆಯ ಕುಟುಂಬದಿಂದಾಗಲೀ ಅಥವಾ ಆರ್ಥಿಕವಾಗಿ ಸಬಲವಾಗಿರುವ ಕುಟುಂಬದಿಂದಾಗಲೀ ಬಂದವರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಟ್ಟಿನಂಬಿಕೆ ಇಟ್ಟುಕೊಂಡು ತಮ್ಮದೇ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ಅವರಲ್ಲಿ ಒಳ್ಳೆಯ ವ್ಯಕ್ತಿತ್ವದ ಜತೆಗೆ ಕರ್ತೃತ್ವ ಹಾಗೂ ನೇತೃತ್ವದ ಗುಣಗಳಿದ್ದವು. ಬಿಜೆಪಿಯಲ್ಲಿ ಏನೂ ಇಲ್ಲದಿರುವ ಕಾಲದಿಂದಲೂ ಪಕ್ಷವನ್ನು ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದರು. ಪಕ್ಷದಲ್ಲಿ ಒಬ್ಬರೇ ಶಾಸಕರು ಇದ್ದಾಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ನಂತರ ವಿವಿಧ ಹುದ್ದೆಗಳನ್ನು ನಿಭಾಯಿಸಿ ಸಮರ್ಥವಾಗಿ ಕಾರ್ಯನಿರ್ವಹಿಸಿದರು.

ಅವರ ವ್ಯಕ್ತಿತ್ವ, ಕರ್ತೃತ್ವ ಮತ್ತು ನೇತೃತ್ವ ಗುಣವು ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಹಲವು ಸ್ನೇಹಿತರನ್ನು ಸಂಪಾದಿಸುವಂತೆ ಮಾಡಿತು. ದೊಡ್ಡ ಕುಟುಂಬವನ್ನೇ ಅವರು ಗಳಿಸಿದರು. ಪ್ರಸ್ತುತ ಯುವ ಪೀಳಿಗೆಯ ಜತೆಗೆ ಮುಂದಿನ ಪೀಳಿಗೆಯ ಜನಾಂಗಕ್ಕೂ ಮಾದರಿಯಾಗಿರುವಂತೆ ಜೀವಿಸಿದ್ದರು. ಅವರ ಪ್ರತಿಯೊಂದು ನಿರ್ಣಯದಲ್ಲಿಯೂ ಸ್ಪಷ್ಟತೆ ಇತ್ತು.

ಹಿರಿಯರು ಕಿರಿಯರ ಜತೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಅವರಿಂದ ಕಲಿಯಬೇಕು. ತಂದೆಯಾಗಿ, ಪತಿಯಾಗಿ, ರಾಜಕಾರಣಿಯಾಗಿ, ಸಚಿವರಾಗಿ ಅವರು ಆದರ್ಶರಾಗಿದ್ದರು. ವ್ಯಕ್ತಿತ್ವ, ಕರ್ತೃತ್ವ ಮತ್ತು ನೇತೃತ್ವ ಎಷ್ಟುಮುಖ್ಯ ಎಂಬುದನ್ನು ಯುವ ಜನಾಂಗದವರು ಕಲಿಯಬೇಕು ಮತ್ತು ಅದು ಎಷ್ಟುಮುಖ್ಯ ಎಂಬುದನ್ನು ತೋರಿಸಿಕೊಟ್ಟರು.

ಕ್ಯಾನ್ಸರ್‌ ಇರೋದು ತಿಳಿಸಲೇ ಇಲ್ಲ

ಕ್ಯಾನ್ಸರ್‌ ಅವರನ್ನು ಆವರಿಸಿರುವುದು ಅವರಿಗೆ ಗೊತ್ತಿರಲಿಲ್ಲ. ಆದರೆ, ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ಅವರು ಹೆಚ್ಚು ದಿನ ಬದುಕುವುದಿಲ್ಲ ಎಂಬುದು ಗೊತ್ತಾದ ಮೇಲೆ ಅವರು ಮಾಡಬೇಕಾದ ಜವಾಬ್ದಾರಿಗಳತ್ತ ಹೆಚ್ಚಿನ ಗಮನಹರಿಸಿದರು. ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ತಿಳಿಸಿದರೆ ಕೆಲಸಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಅರಿತ ಅವರು ವೈದ್ಯರಿಗೆ ಬಿಟ್ಟರೆ ಬೇರೆಯವರಿಗೆ ಹೇಳಲು ಹಿಂದೇಟು ಹಾಕಿದರು. ತಮಗೆ ಬಂದಿರುವ ಕಾಯಿಲೆಗೆ ಔಷಧಿ ಇಲ್ಲ ಎನ್ನುವುದನ್ನು ಅರಿತ ಅವರು ಸಾವು ಸಮೀಪದಲ್ಲಿಯೇ ಇದೆ ಎಂದು ತಿಳಿದು ಕೊನೆಯವರೆಗೆ ಕೆಲಸ ಮಾಡಬೇಕು ಎಂಬ ಧ್ಯೇಯವನ್ನು ಹೊಂದಿದ್ದರು. ಶಕ್ತಿ ಇರುವವರೆಗೆ ಜನಪರ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದರು. ವೈದ್ಯರಿಗೂ ಸಹ ಯಾರಿಗೂ ತಿಳಿಸದಂತೆ ಮನವಿ ಮಾಡಿದ್ದರು.

ಲೋಕಸಭೆ ಚುನಾವಣೆ ವೇಳೆ ಅವರಿಗೆ ಕ್ಯಾನ್ಸರ್‌ ಕಾಯಿಲೆ ಇರುವ ಬಗ್ಗೆ ತಿಳಿದಿರಲಿಲ್ಲ. ತಮಗೆ ಕ್ಯಾನ್ಸರ್‌ ಕಾಯಿಲೆ ಇದೆ ಎಂಬುದು ಗೊತ್ತಾದ ಮೇಲೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿದ್ದರು. ಆದರೆ ಎಂದಿಗೂ ಕೆಲಸದಲ್ಲಿ ನಿರ್ಲಕ್ಷ್ಯ ತೋರಲಿಲ್ಲ. ಅನಾರೋಗ್ಯವಿದ್ದರೂ ಅವಿಶ್ವಾಸ ನಿರ್ಣಯ ವೇಳೆ ಉಪಸ್ಥಿತರಿರಬೇಕು ಎಂದು ನಿರ್ಧರಿಸಿದ್ದರು. ಹೀಗಾಗಿ ಅವರು ಅಂದು ಭಾಗವಹಿಸಿದ್ದರು. ಅನಂತಕುಮಾರ್‌ ಅವರ ಅನಾರೋಗ್ಯದ ಬಗ್ಗೆ ತಿಳಿದ ಬಳಿಕ ಅವರ ಸಹೋದ್ಯೋಗಿಗಳಿಗೆ ಅಚ್ಚರಿ ಉಂಟಾಯಿತು. ಕೆಲಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಆದರೂ ತಮ್ಮ ಜವಾಬ್ದಾರಿಯನ್ನು ಮುಗಿಸಿ ಹೋಗಬೇಕು ಎಂದು ತಮ್ಮ ಕರ್ತವ್ಯವನ್ನು ಮಾಡಿದರು.

ಅವರಿಲ್ಲ ಎಂದುಕೊಂಡೇ ಇಲ್ಲ

ಅನಂತಕುಮಾರ್‌ ಅವರು ನಿಧನರಾಗಿ ನ.12ಕ್ಕೆ ಒಂದು ವರ್ಷವಾಯಿತು. ಕಳೆದ ಒಂದು ವರ್ಷದಲ್ಲಿ ಅವರು ನಮ್ಮೊಂದಿಗೆ ಇಲ್ಲ ಎಂದುಕೊಂಡು ನಾನು ಕೆಲಸ ಮಾಡಲಿಲ್ಲ. ದೈಹಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಅವರು ಇದ್ದಾರೆ. ಪ್ರತಿ ಭಾನುವಾರ ಆದಮ್ಯ ಚೇತನ ವತಿಯಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯವು ಅವರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿದೆ. ಕೌಟುಂಬಿಕ, ಸಾಮಾಜಿಕ ಮತ್ತು ರಾಜಕೀಯ ಹೀಗೆ ಎಲ್ಲಾ ವಿಚಾರಗಳನ್ನೂ ಅವರು ನಿಭಾಯಿಸುತ್ತಿದ್ದ ಪರಿ ಮೆಚ್ಚುವಂತಹದ್ದು. ಯಾರಿಗೆ ಯಾವ ರೀತಿಯ ಸಲಹೆಗಳನ್ನು ನೀಡಬೇಕೋ ಅದೇ ರೀತಿ ನೀಡುತ್ತಿದ್ದರು. ಅಂತಹದ್ದೊಂದು ಕಲೆ ಅವರಲ್ಲಿತ್ತು.

ಕೆಲಸದ ಒತ್ತಡದ ನಡುವೆಯೂ ಜನಗಳ ಮತ್ತು ಕುಟುಂಬದ ಸದಸ್ಯರ ನಡುವೆ ಇರುತ್ತಿದ್ದರು. ತಮ್ಮ ಪಾತ್ರವನ್ನು ಸಮಯಕ್ಕೆ ತಕ್ಕಂತೆ ವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದರು. ಕುಟುಂಬದ ಸದಸ್ಯರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು. ನಮಗೆ ಗೊತ್ತಿರದ ವಿಚಾರಗಳನ್ನೂ ಅವರು ತಿಳಿದುಕೊಳ್ಳುತ್ತಿದ್ದರು. ಕುಟುಂಬದ ಸದಸ್ಯರಿಗೆ ಇಷ್ಟವಾದ ಭಾಷೆಯಲ್ಲಿಯೇ ಮಾತನಾಡಿ ಅವರ ಒಳ್ಳೆಯ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಹಾಗೂ ಆತ್ಮೀಯತೆಯಿಂದಲೇ ಸಲಹೆ-ಸೂಚನೆಗಳನ್ನು ಸಹ ನೀಡುತ್ತಿದ್ದರು.

ಪಕ್ಷವೂ ಅವರ ಕೆಲಸ ಮುಂದುವರೆಸಲಿ

ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ಇಲ್ಲದ ಅದಮ್ಯ ಚೇತನ ನೆನಪಿಸಿಕೊಳ್ಳುವುದು ಕಷ್ಟ. ಮಾತ್ರವಲ್ಲ ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಆದರೆ ವಾಸ್ತವವನ್ನು ಎದುರಿಸಲೇಬೇಕು. ಅವರ ಬೆಂಬಲದ ಮಾತುಗಳು, ಧೈರ್ಯ ತುಂಬಿದ ವೈಖರಿಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಅವರಿಂದ ಒಳ್ಳೆಯ ಸಂಗತಿಗಳನ್ನು ತೆಗೆದುಕೊಂಡು ಸಮಾಜಕ್ಕೆ ನೀಡುವ ಕೆಲಸ ಮಾಡುತ್ತಿದ್ದೇನೆ. ಪಕ್ಷವು ಸಹ ಅವರ ಮಾರ್ಗದರ್ಶನಗಳನ್ನು ಮತ್ತು ಜವಾಬ್ದಾರಿಗಳನ್ನು ಅರಿತು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಅಷ್ಟೇ.

ನಮ್ಮೊಂದಿಗೆ ಅನಂತಕುಮಾರ್‌ ಇಲ್ಲ ಎಂಬ ಮನೋಭಾವನೆ ಮೂಡಬಾರದು ಮತ್ತು ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಕಾರಣಕ್ಕೆ ಅವರ ಸ್ಮರಣಾರ್ಥ ಅನಂತಕುಮಾರ್‌ ಪ್ರತಿಷ್ಠಾನ ಪ್ರಾರಂಭಿಸಲಾಗಿದೆ. ಪ್ರತಿಷ್ಠಾನದಲ್ಲಿ ಕುಟುಂಬದ ಸದಸ್ಯರು, ಪಕ್ಷದವರು ಸೇರಿದಂತೆ ಸ್ನೇಹಿತರು, ಹಿತೈಷಿಗಳು ಇದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಮತ್ತು ಒಳ್ಳೆಯ ಕೆಲಸ ಮಾಡಲು ಪ್ರತಿಷ್ಠಾನ ಸಹಕಾರಿಯಾಗಲಿದೆ. ಪ್ರತಿಷ್ಠಾನದ ಮೂಲಕ ಸಮಾಜಕ್ಕೆ ಒಳಿತು ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಹುಬ್ಬಳ್ಳಿಯಲ್ಲಿ ಅನಂತ್‌ ಸ್ಮಾರಕ

ಅನಂತಕುಮಾರ್‌ ಹೆಸರಲ್ಲಿ ಹುಬ್ಬಳ್ಳಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸುವ ಉದ್ದೇಶವಿದೆ. ಯಾವ ರೀತಿಯಲ್ಲಿ ನಿರ್ಮಿಸಬೇಕು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ವಿಷಯ ಸಂಗ್ರಹಣೆ ಮಾಡುವುದರಲ್ಲಿ ತಡವಾಗಿದೆ. ಇದನ್ನು ಅದಷ್ಟುಬೇಗ ಮಾಡಲಾಗುವುದು. ಅಲ್ಲದೇ, ಅನಂತಕುಮಾರ್‌ ಕುರಿತು ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳು ಸಣ್ಣ ಪುಸ್ತಕಗಳಾಗಿದ್ದು, ವಿಸ್ತೃತವಾದ ಪುಸ್ತಕವನ್ನು ಹೊರತರುವ ಆಲೋಚನೆ ಇದೆ. ಅನಂತಕುಮಾರ್‌ ಅವರ ಬಂಧು-ಬಳಗ, ಸ್ನೇಹಿತರು, ಆಪ್ತರು ಸೇರಿದಂತೆ ಅವರ ಒಡನಾಡಿಗಳೊಂದಿಗೆ ಚರ್ಚಿಸಿ ವಿಷಯ ಸಂಗ್ರಹಿಸುವ ಕೆಲಸ ಮಾಡಲಾಗುವುದು. ಈ ಕೆಲಸ ಒಂದು ವರ್ಷ ತೆಗೆದುಕೊಳ್ಳಬಹುದು. ಹಲವರನ್ನು ಸಂಪರ್ಕಿಸಿ ಬರೆಯಬೇಕು. ಅನಂತಕುಮಾರ್‌ ಅವರ ವ್ಯಕ್ತಿತ್ವ, ಕರ್ತೃತ್ವ ಮತ್ತು ನೇತೃತ್ವವನ್ನು ಜನರ ಮುಂದೆ ಇಡುತ್ತೇವೆ.

ನಾಯಕತ್ವ ತರಬೇತಿ ಕೇಂದ್ರ ಸ್ಥಾಪನೆ

ನಾಯಕತ್ವದ ಗುಣಗಳನ್ನು 16 ವರ್ಷಕ್ಕೇ ಬೆಳೆಸಿಕೊಂಡ ಅವರು ಹಲವು ನಾಯಕರನ್ನು ಸಹ ಹುಟ್ಟುಹಾಕಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲ ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ನಾಯಕರನ್ನು ಬೆಳೆಸಿದರು. ಹೀಗಾಗಿ ಅವರ ನೆನಪಿನಲ್ಲಿ ನಾಯಕತ್ವ ಗುಣಗಳನ್ನು ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದೆ. ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ಕೆಲಸ ಮಾಡುವವರಿಗೆ ತರಬೇತಿ ನೀಡಲಾಗುತ್ತದೆ. ಇದರ ಜತೆಗೆ ಕ್ಯಾನ್ಸರ್‌ ಕಾಯಿಲೆಗೆ ಔಷಧ ಸಂಶೋಧನೆ ಮಾಡುವ ಬಗ್ಗೆ ಚಿಂತನೆ ಇದೆ. ಜನಜೀವನ ಬದಲಾವಣೆ, ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದು ಪರಿಸರ ಸ್ನೇಹಿ ಬದುಕು ನಡೆಸಲು ಒತ್ತು ನೀಡಬೇಕಾಗಿದೆ. ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದ ಅವರು ತಮ್ಮ ಹೋರಾಟಕ್ಕೆ ಸಸ್ಯಾಗ್ರಹ ಎಂದು ಹೆಸರು ಇಡಬೇಕು ಎಂದುಕೊಂಡಿದ್ದರು. ಅವರ ಆಸೆಯನ್ನು ಈಡೇರಿಸುವ ಉದ್ದೇಶ ಇದ್ದು, ಅದನ್ನು ಮಾಡಿ ತೋರಿಸಬೇಕು ಎಂದು ಕೊಂಡಿದ್ದೇನೆ.

ಅನಂತಕುಮಾರ್‌ ಅವರ ನೆನಪು ಸದಾ ನಮ್ಮಲ್ಲಿ ಉಳಿಯುತ್ತದೆ. ಪ್ರತಿಯೊಂದು ಕಾರ್ಯದಲ್ಲಿಯೂ ಅವರು ಇದ್ದಾರೆ. ಸಾರ್ವಜನಿಕ ಜೀವನದಲ್ಲಿ ಹೇಗೆ ಶಿಸ್ತನ್ನು ರೂಢಿಸಿಕೊಂಡು ಬದುಕುಬೇಕು ಎಂಬುದನ್ನು ಅವರು ಹೇಳಿಕೊಟ್ಟಿದ್ದಾರೆ. ಅದನ್ನು ಮುಂದುವರಿಸುವ ಕೆಲಸ ಮಾಡಿಕೊಂಡು ಹೋಗುತ್ತೇವೆ.

- ತೇಜಸ್ವಿನಿ ಅನಂತ್‌ಕುಮಾರ್, 

‘ಅದಮ್ಯ ಚೇತನ’ ಮುಖ್ಯಸ್ಥೆ

Follow Us:
Download App:
  • android
  • ios