ಬೆಂಗಳೂರು (ನ.21):  ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ಜೈವಿಕ ಆರ್ಥಿಕತೆ (ಬಯೋ ಎಕಾನಮಿ) ವಹಿವಾಟನ್ನು 5000 ಕೋಟಿ ಡಾಲರ್‌ ಗಳಿಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಈ ದಿಸೆಯಲ್ಲಿ ಲಸಿಕೆ, ಕೃಷಿ ತಾಂತ್ರಿಕತೆ, ಸಾಗರ ಸಂಬಂಧಿ ಜೈವಿಕ ತಾಂತ್ರಿಕತೆಯಲ್ಲಿ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಮೇಳ-2020’ರ ಎರಡನೇ ದಿನವಾದ ಶುಕ್ರವಾರ ಮೊಟ್ಟಮೊದಲ ಬಾರಿಗೆ ‘ಕರ್ನಾಟಕ ಜೈವಿಕ ಆರ್ಥಿಕತೆ ವರದಿ-2020’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೃಷಿ, ಪಶುಸಂಗೋಪನೆ, ಪೌಷ್ಟಿಕತೆ, ಲಸಿಕೆ, ಆರೋಗ್ಯ ಸೇವೆ, ಜೈವಿಕ ಇಂಧನ, ಸಾಗರ ಜೀವನೋಪಾಯ ಕ್ಷೇತ್ರಗಳಲ್ಲಿ ಆಗುವ ಜೈವಿಕ ತಂತ್ರಜ್ಞಾನದ ಬೆಳವಣಿಗೆ ಜನಸಾಮಾನ್ಯರ ಬದುಕನ್ನು ನೇರವಾಗಿ ಸುಧಾರಿಸಲಿವೆ. ಜೊತೆಗೆ ರಾಜ್ಯದ ಜೈವಿಕ ಆರ್ಥಿಕತೆಗೂ ವಿಶೇಷ ಕೊಡುಗೆ ನೀಡಲಿವೆ ಎಂದು ಹೇಳಿದರು.

ಬೆಂಗಳೂರು ಟೆಕ್‌ ಸಮ್ಮಿಟ್‌-2020: ದೇಶದ ಡಿಜಿಟಲ್‌ ಕ್ರಾಂತಿಗೆ ಉಪಗ್ರಹಗಳ ನೆರವು .

ಚರ್ಮ ಸೇರಿದಂತೆ ದೇಹದ ಯಾವುದೇ ಅಂಗವನ್ನು ಪ್ರಯೋಗಾಲಯದಲ್ಲಿ ಬೆಳೆಸಬಹುದಾದ ಮಟ್ಟಕ್ಕೆ ಜೈವಿಕ ತಂತ್ರಜ್ಞಾನ ಬೆಳೆದಿದೆ. ಜೀನ್‌ ಎಡಿಟಿಂಗ್‌ನಿಂದ ವಂಶ ಪಾರಂಪರ್ಯವಾಗಿ ಬರುವ ಕಾಯಿಲೆಗಳನ್ನು ನಿವಾರಿಸಬಹುದು ಎಂಬ ಆಶಾಭಾವನೆ ಮೂಡಿದೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರದ ಸಂಶೋಧನೆಗಳು ಜನರ ಬದುಕಿನ ಮೇಲೆ ಅಗಾಧ ಪರಿಣಾಮ ಬೀರಲಿದೆ. ಜನರ ಜೀವನ ಶೈಲಿ ಬದಲಿಸಲಿವೆ ಎಂದರು.

ಹೆಣ್ಣು ಕರುಗಳಿಗೆ ಮಾತ್ರವೇ ಜನ್ಮ ನೀಡುವ ತಂತ್ರಜ್ಞಾನ 

ಜೈವಿಕ ತಂತ್ರಜ್ಞಾನದ ನೆರವಿನಿಂದ ಹೆಣ್ಣು ಕರುಗಳಿಗೆ ಮಾತ್ರವೇ ಜನ್ಮ ನೀಡುವಂತೆ ಮಾಡಲು ಸಾಧ್ಯ ಎಂದು ವಿಜ್ಞಾನ ತೋರಿಸಿಕೊಟ್ಟಿದೆ. ಜೀವ ಸೈನ್ಸಸ್‌ ಸೇರಿದಂತೆ ಹಲವು ಕಂಪನಿಗಳು ಬಯೋ-ವೆಂಚರ್‌ ಅನುದಾನದೊಂದಿಗೆ ಇಂತಹ ತಂತ್ರಜ್ಞಾನ ರೂಪಿಸುವ ದಿಸೆಯಲ್ಲಿ ಮುನ್ನಡೆಯುತ್ತಿವೆ. ಇವೆಲ್ಲವೂ 5000 ಕೋಟಿ ಡಾಲರ್‌ ಆರ್ಥಿಕ ಕೊಡುಗೆಯ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.