ಬೆಂಗಳೂರು (ಸೆ.30):  ರಾಜ್ಯ ವಿಧಾನ ಪರಿಷತ್‌ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಮುಹೂರ್ತ ನಿಗದಿಯಾಗಿದ್ದು, ಅಕ್ಟೋಬರ್‌ 28ರಂದು ಮತದಾನ ನಡೆಯಲಿದೆ. ಚುನಾವಣೆ ನಡೆಯುವ ಕ್ಷೇತ್ರದಲ್ಲಿ ತಕ್ಷಣದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ.

ಆಗ್ನೇಯ ಪದವೀಧರರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಅ.1ರಂದು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಅ.8ಕ್ಕೆ ಕೊನೆಯ ದಿನ, ಅ.9ಕ್ಕೆ ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ವಾಪಸ್‌ ಪಡೆಯಲು ಅ.12 ಕೊನೆಯ ದಿನವಾಗಿದೆ. ಅ.28ರಂದು ಬೆಳಗ್ಗೆ 8ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ನ.2ರಂದು ಮತ ಎಣಿಕೆ ನಡೆಯಲಿದೆ. ನ.5ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಶಿರಾಕ್ಕೆ ಕೈ ಅಭ್ಯರ್ಥಿ ಟಿಬಿಜೆ; ಬಿಜೆಪಿ, ದಳದಿಂದ ಯಾರು? ...

2020ರ ಜೂ.30ಕ್ಕೆ ಮೇಲ್ಮನೆ ಸದಸ್ಯರಾದ ಆರ್‌.ಚೌಡರೆಡ್ಡಿ ತೂಪಲ್ಲಿ, ಎಸ್‌.ವಿ.ಸಂಕನೂರು, ಶರಣಪ್ಪ ಮಟ್ಟೂರು ಮತ್ತು ಪುಟ್ಟಣ್ಣ ಅವರ ಅವಧಿ ಕೊನೆಗೊಂಡಿದೆ. ತೆರವಾಗಿರುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕೋವಿಡ್‌-19 ಮಾರ್ಗಸೂಚಿಯನ್ವಯ ಚುನಾವಣೆ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು. ಚುನಾವಣಾ ಕೊಠಡಿಗೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬರು ಥರ್ಮಲ್‌ ಸ್ಕಾ್ಯನಿಂಗ್‌ ಮಾಡಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದಕ್ಕೆ ಅನುಕೂಲವಾಗುವ ಕೊಠಡಿಗಳನ್ನು ಗುರುತಿಸಬೇಕು. ವಾಹನಗಳನ್ನು ಮಾರ್ಗಸೂಚಿಯನ್ವಯ ಚುನಾವಣಾ ಕಾರ್ಯಕ್ಕೆ ಬಳಸಬೇಕು ಎಂದು ಸೂಚನೆ ನೀಡಿದೆ.

ಜೂ.30ರೊಳಗೆ ಚುನಾವಣೆ ನಡೆಸಲು ಆಯೋಗವು ಸಿದ್ದತೆ ಕೈಗೊಂಡಿತ್ತು. ಆದರೆ ಕೋವಿಡ್‌ನಿಂದಾಗಿ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.