ತುಮಕೂರು/ ಬೆಂಗಳೂರು (ಸೆ.30): ಜೆಡಿಎಸ್‌ ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ಹಾಗು ಜೆಡಿಎಸ್‌ ಪಕ್ಷಗಳು ಚುರುಕಾಗಿದ್ದು, ತಮ್ಮದೇ ಆದ ರಾಜಕೀಯ ಲೆಕ್ಕಾಚಾರ ಪ್ರಾರಂಭಿಸಿವೆ.

ರಾಜಕೀಯ ಲೆಕ್ಕಾಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಕೊಂಚ ಮುಂದಿದ್ದು, ತನ್ನ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಕಣಕ್ಕಿಳಿಸಲು ಈಗಾಗಲೇ ತೀರ್ಮಾನಿಸಿದೆ. ಆದರೆ, ಬಿಜೆಪಿ ಮತ್ತು ಜೆಡಿಎಸ್‌ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ನಿರತವಾಗಿವೆ. ಕಾಂಗ್ರೆಸ್‌ ಅಭ್ಯರ್ಥಿ ಜಯಚಂದ್ರ ಅವರು ಈ ಮೊದಲು ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ, ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಕಳ್ಳಂಬೆಳ್ಳ ಕ್ಷೇತ್ರ ಇಲ್ಲವಾದ್ದರಿಂದ ಅವರು ಶಿರಾ ಕ್ಷೇತ್ರಕ್ಕೆ ವಲಸೆ ಬಂದು 2008, 2013ರ ಚುನಾವಣೆಯಲ್ಲಿ ಸತತವಾಗಿ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಅವರು ಪರಾಭವಗೊಂಡು ಜೆಡಿಎಸ್‌ನ ಸತ್ಯನಾರಾಯಣ್‌ ಶಾಸಕರಾಗಿ ಆಯ್ಕೆಯಾಗಿದ್ದರು.

ಆರ್‌ಆರ್‌ ನಗರದಲ್ಲಿ ಮುನಿರತ್ನ ವಿರುದ್ಧ ಡಿ. ಕೆ. ರವಿ ಪತ್ನಿ ಸ್ಪರ್ಧೆ?

ಆರಂಭದಲ್ಲಿ ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ಅವರು ಶಿರಾ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತುಕತೆಯ ಫಲವಾಗಿ ಸ್ಪರ್ಧೆಯಿಂದ ಹಿಂದೆ ಸರಿಯಲು ರಾಜಣ್ಣ ನಿರ್ಧರಿಸಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಯಚಂದ್ರ ಅವರೇ ಸ್ಪರ್ಧಿಸುತ್ತಿದ್ದಾರೆ.

ತಂತ್ರಗಾರಿಕೆಯಲ್ಲಿ ಬಿಜೆಪಿ:

ತುಮಕೂರು ಜಿಲ್ಲೆಯಲ್ಲಿ ಈಗಾಗಲೇ 4 ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವ ಬಿಜೆಪಿ ಇದೀಗ ಶಿರಾ ಕ್ಷೇತ್ರವನ್ನು ಗೆದ್ದುಕೊಳ್ಳುವ ತಂತ್ರಗಾರಿಕೆಯಲ್ಲಿ ತೊಡಗಿದೆ. ಈ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಗಣನೀಯ ಸಾಧನೆ ಮಾಡಿಲ್ಲ. ಹೀಗಾಗಿ ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನ್ನ ನೆಲೆ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಸುರೇಶ ಗೌಡ ಬೂತ್‌ ಮಟ್ಟದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಕೂಡ ಆಗಮಿಸಿ ಸಭೆ ನಡೆಸಿದ್ದರು.

ಸದ್ಯ ಬಿಜೆಪಿಯಿಂದ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಬಿ.ಕೆ. ಮಂಜುನಾಥ್‌, ಎಸ್‌.ಆರ್‌.ಗೌಡ, ಡಾ.ರಾಜೇಶಗೌಡ ಮತ್ತು ಶ್ರೀನಿವಾಸ್‌ ಅವರು ಟಿಕೆಟ್‌ ರೇಸ್‌ನಲ್ಲಿದ್ದಾರೆ. ಗೊಲ್ಲ ಸಮುದಾಯಗಳ ಮತ ಸೇರಿ ಹಿಂದುಳಿದ ವರ್ಗಗಳ ಮತಗಳು ಗಣನೀಯ ಪ್ರಮಾಣದಲ್ಲಿದೆ. ಹೀಗಾಗಿ ಆ ಸಮುದಾಯವನ್ನು ಸೆಳೆಯಲು ಗೊಲ್ಲ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಜೆಡಿಎಸ್‌ನಲ್ಲಿ ಪೈಪೋಟಿ:

ಇನ್ನು ಜೆಡಿಎಸ್‌ಗೆ ಕ್ಷೇತ್ರ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಅನುಕಂಪದ ಲಾಭ ಪಡೆಯಲು ಬಿ.ಸತ್ಯನಾರಾಯಣ ಅವರ ಪುತ್ರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯಪ್ರಕಾಶ್‌ ಅವರನ್ನು ಕಣಕ್ಕಿಳಿಸುವ ಇಚ್ಛೆ ಹೊಂದಿದೆ. ಆದರೆ ಜೆಡಿಎಸ್‌ ಟಿಕೆಟ್‌ ರೇಸ್‌ನಲ್ಲಿ ಸಾಕಷ್ಟುಮಂದಿ ಇದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್‌ ಅವರ ಪತಿ ಕಲ್ಕೆರೆ ರವಿಕುಮಾರ್‌, ಜೆಡಿಎಸ್‌ ಶಿರಾ ತಾಲೂಕು ಅಧ್ಯಕ್ಷ ಆರ್‌. ಉಗ್ರೇಶ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್‌. ಉಮೇಶ್‌ ಅವರು ಟಿಕೆಟ್‌ ರೇಸ್‌ನಲ್ಲಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಿರಾ ಕ್ಷೇತ್ರದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಶೀಘ್ರದಲ್ಲಿಯೇ ಮತ್ತೊಂದು ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ.