ಬೆಂಗಳೂರು[ಡಿ.06]: ಭಾಷೆ ಕಲಿಸುವ ನೆಪದಲ್ಲಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪದ ಮೇರೆಗೆ ಶಿಕ್ಷಕನೊಬ್ಬನನ್ನು ಅಶೋಕ ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆನೇಪಾಳ್ಯದ ನಿವಾಸಿ ಮುನೀರ್‌ ಅಬ್ಬಾಸ್‌ (50) ಬಂಧಿತನಾಗಿದ್ದು, ಆತನ ವಿರುದ್ಧ ಪೊಲೀಸರಿಗೆ 7 ಬಾಲಕರು ದೂರು ನೀಡಿದ್ದಾರೆ. ಅದರನ್ವಯ ಪೊಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಯಿತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ 10 ದಿನಗಳು ವಶಕ್ಕೆ ಪಡೆದಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೌರಿಬಿದನೂರು ತಾಲೂಕಿನ ಅಬ್ಬಾಸ್‌, ಹಲವು ದಿನಗಳಿಂದ ಆನೇಪಾಳ್ಯದಲ್ಲಿ ನೆಲೆಸಿದ್ದ. ಜಾನ್ಸನ್‌ ಮಾರ್ಕೆಟ್‌ ಪ್ರಾರ್ಥನಾ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಆತ, ಮನೆಯಲ್ಲಿ ಮಕ್ಕಳಿಗೆ ಅರೇಬಿಕ್‌ ಮತ್ತು ಕನ್ನಡ ಕಲಿಸುತ್ತಿದ್ದ. ಭಾಷೆ ಕಲಿಕೆಗೆ ಬರುತ್ತಿದ್ದ ಮಕ್ಕಳನ್ನು ಲೈಂಗಿಕವಾಗಿ ಆರೋಪಿ ಶೋಷಿಸಿದ್ದಾನೆ. ತಮ್ಮ ಪೋಷಕರ ಮಂಗಳವಾರ ರಾತ್ರಿ ಮಕ್ಕಳು ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಈ ವಿಚಾರ ತಿಳಿದು ಕೆರಳಿದ ಪೋಷಕರು, ಕೂಡಲೇ ಅಶೋಕ ನಗರ ಠಾಣೆಗೆ ಮಕ್ಕಳನ್ನು ಕರೆದೊಯ್ದು ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

ತನ್ನ ಬಳಿ ಭಾಷಾ ಕಲಿಕೆಗೆ ಬರುತ್ತಿದ್ದ ಹಲವು ಮಕ್ಕಳಿಗೆ ಅಬ್ಬಾಸ್‌ ಅನೈಸರ್ಗಿಕ ಲೈಂಗಿಕ ಶೋಷಣೆ ನಡೆಸಿರುವುದು ಗೊತ್ತಾಗಿದೆ. ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ವಿಚಾರಣೆ ಮುಂದುವರಿಸಲಾಗಿದೆ. ಈ ಹಿಂದೆ ಏನಾದರೂ ಇದೇ ರೀತಿ ಕೃತ್ಯ ಎಸಗಿರುವ ಕುರಿತು ಸಹ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.