ಕಾಂಗ್ರೆಸ್ ಶಕ್ತಿ ಯೋಜನೆ ದುರುಪಯೋಗ ಮಾಡಿಕೊಂಡ ತಮಿಳುನಾಡು ಮಹಿಳೆ: ಕೊಳ್ಳೇಗಾಲದಲ್ಲಿ ಅಂದರ್
ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ತಮಿಳುನಾಡು ಮಹಿಳೆಯೊಬ್ಬರಳು ದುರುಪಯೋಗ ಮಾಡಿಕೊಂಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಚಾಮರಾಜನಗರ (ಸೆ.16): ಕರ್ನಾಟಕದಲ್ಲಿ ಕಾಂಗ್ರೆಸ್‌ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊಟ್ಟಮೊದಲನೆಯದಾಗಿ ಜಾರಿಗೆ ತರಲಾದ ಗ್ಯಾರಂಟಿ ಯೋಜನೆಯಾದ 'ಶಕ್ತಿ ಯೋಜನೆ' ಅಡಿಯಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಈ ಯೋಜನೆಯನ್ನು ದುರುಪಯೋಗ ಮಾಡಿಕೊಂಡಿದ್ದ ತಮಿಳುನಾಡಿದ ಮಹಿಳೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ.
ಹೌದು, ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣಕ್ಕೆ ಗುಂಪು ಗುಂಪಾಗಿ ಬರುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ತಮಿಳುನಾಡು ಮಹಿಳೆಯ ವಂಚನೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಬಸ್ ನಿಲ್ದಾಣದಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಅವರ ಕತ್ತಿನಲ್ಲಿರುವ ಚಿನ್ನವನ್ನು ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್ ಆಗಿದ್ದಾಳೆ. ತಮಿಳುನಾಡಿನ ರಾಜ್ಯದ ತಿರುಪುರ ಮೂಲದ ಸೆಲ್ವಿ(60) ಬಂಧಿತ ಆರೋಪಿ ಆಗಿದ್ದಾಳೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಪೊಲೀಸರಿಂದ ಕಳ್ಳಿಯ ಬಂಧನವಾಗಿದೆ. ಈಕೆಯಿಂದ ಪೊಲೀಸರು 57 ಗ್ರಾಂ ಚಿನ್ನ ಜಪ್ತಿ ಮಾಡಿಕೊಂಡಿದ್ದಾರೆ.
ಉಚಿತ ಬಸ್ ಎಂದು ನಾರಿಮಣಿಯರ ದುಂಬಾಲು: ಬಸ್‌ಗಳ ಮಧ್ಯೆ ಸಿಲುಕಿ ಇಬ್ಬರು ಮಹಿಳೆಯರು ಸಾವು
ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕಳ್ಳತನ: ಕಳೆದ ತಿಂಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವಡಗೆರೆ ಗ್ರಾಮದ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಚಾಲಾಕಿ ಸೆಲ್ವಿ ಚಿನ್ನದ ಸರ ಎಗರಿಸಿದ್ದಳು. ಬಸ್ ನಿಲ್ದಾಣದಲ್ಲಿ ಪರಿಚಯ ಮಾಡಿಕೊಂಡು ಜ್ಯೂಸ್ ನಲ್ಲಿ ಔಷಧಿ ಕುಡಿಸಿ ಪ್ರಜ್ಞೆ ತಪ್ಪಿಸಿ ಚಿನ್ನದ ಸರವನ್ನು ಎಗರಿಸಿ ನಾಪತ್ತೆಯಾಗುತ್ತಿದ್ದಳು. ಕಿರುಗಾವಲು ಗ್ರಾಮದ ಮಹಿಳೆಯೊಬ್ಬಳು ಬಸ್ಸು ಹತ್ತುವಾಗ ಕತ್ತಿನಿಂದ ಚಿನ್ನ ಎಗರಿಸಿ ಪರಾರಿಯಾಗಿದ್ದಳು. ಈ ಎರಡು ಸರಗಳ್ಳತನ ಪ್ರಕರಣಗಳು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅನುಮಾನಸ್ಪಾದವಾಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಂದ ಸರ ಎಗರಿಸಲು ಹೊಂಚು ಹಾಕುತ್ತಿದ್ದ ವೇಳೆ ಬಂಧನ ಮಾಡಲಾಗಿದೆ. ನಂತರ, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದಾಗ, ಎರಡು ಪ್ರಕರಣಗಳನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.