ತಿರುಪತಿ ತಿರುಮಲದ ಲಡ್ಡುಗೆ ನಂದಿನಿ ತುಪ್ಪ ಖರೀದಿ ಮಾಡಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿರಾಕರಿಸಿದೆ ಎಂಬುದು ಸುಳ್ಳು. ಟಿಟಿಡಿ ಕರೆದ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸಿರಲಿಲ್ಲ ಎಂದು ಟಿಟಿಡಿ ಸದಸ್ಯ, ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಸ್ಪಷ್ಟನೆ ನೀಡಿದ್ದಾರೆ.

ಯಲಹಂಕ (ಆ.3) :  ತಿರುಪತಿ ತಿರುಮಲದ ಲಡ್ಡುಗೆ ನಂದಿನಿ ತುಪ್ಪ ಖರೀದಿ ಮಾಡಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿರಾಕರಿಸಿದೆ ಎಂಬುದು ಸುಳ್ಳು. ಟಿಟಿಡಿ ಕರೆದ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸಿರಲಿಲ್ಲ ಎಂದು ಟಿಟಿಡಿ ಸದಸ್ಯ, ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಲಡ್ಡು ತಯಾರಿಕೆಗಾಗಿ ಕೆಎಂಎಫ್‌(KMF)ನ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ನೂರಾರು ಕೋಟಿ ರೂಪಾಯಿ ವ್ಯವಹಾರದ ತುಪ್ಪ ಪೂರೈಕೆ ಟೆಂಡರ್‌ ಪಡೆದುಕೊಂಡಿದ್ದರೆ ಸಂಸ್ಥೆಗೆ ಲಾಭವೂ ಬರುತ್ತಿತ್ತು ಮತ್ತು ವರ್ಷ ಪೂರ್ತಿ ವ್ಯವಹಾರವೂ ಲಭ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈಗಲಾದರೂ ಟಿಟಿಡಿ(TTD) ಜೊತೆ ಮಾತುಕತೆ ನಡೆಸಿ ಮುಂಬರುವ ದಿನಗಳಲ್ಲಿ ತುಪ್ಪ ಪೂರೈಸಲು ಕೆಎಂಎಫ್‌ ಮತ್ತು ರಾಜ್ಯ ಸರ್ಕಾರ ಮುಂದಾಗಲಿ ಎಂದು ಅವರು ಸಲಹೆ ನೀಡಿದ್ದಾರೆ.

1 ವರ್ಷದಲ್ಲಿ 42 ಟ್ರಕ್‌ ಲೋಡ್‌ ತುಪ್ಪ ತಿರಸ್ಕರಿಸಿದ ಟಿಟಿಡಿ

ಇತರ ಬ್ರ್ಯಾಂಡಿನ ತುಪ್ಪದ ದರಕ್ಕೆ ಹೋಲಿಸಿದರೆ ನಂದಿನಿ ತುಪ್ಪದ ಬೆಲೆ ಹೆಚ್ಚಿತ್ತು. ಈ ಹಿಂದೆ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಸಿ ದರ ಇಳಿಸುವ ಬಗ್ಗೆ ಕೆಎಂಎಫ್‌ ಜೊತೆಗೆ ಮಾತುಕತೆ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು. ಈ ಸಂಬಂಧ ಕೆಎಂಎಫ್‌ ಜೊತೆಗೆ ಪತ್ರ ವ್ಯವಹಾರವನ್ನೂ ನಡೆಸಲಾಗಿತ್ತು. ಆದರೆ, ಈ ಕುರಿತು ಕೆಎಂಎಫ್‌ನಿಂದ ಪ್ರತಿಕ್ರಿಯೆ ಬಂದಿರಲಿಲ್ಲ ಎಂದ್ದಾರೆ.

ಈ ವರ್ಷ ನಂದಿನಿ ತುಪ್ಪವನ್ನು ಖರೀದಿ ಮಾಡಲು ಟಿಟಿಡಿ ನಿರಾಕರಿಸಿದೆ ಎಂದಷ್ಟೇ ಸುದ್ದಿಯನ್ನು ಹರಿಯಬಿಡಲಾಗುತ್ತಿದೆ. ದುಬಾರಿ ಎಂಬ ಕಾರಣಕ್ಕೆ ತುಪ್ಪ ಖರೀದಿಯನ್ನು ಕೈಬಿಡಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ವಾಸ್ತವ ಮರೆಮಾಚಲಾಗುತ್ತಿದೆ. ಈ ವರ್ಷ ಲಡ್ಡು ತಯಾರಿಕೆಗೆ ಅಗತ್ಯವಿರುವ ತುಪ್ಪ ಪೂರೈಕೆಗಾಗಿ ಆಸಕ್ತ ಸಂಸ್ಥೆಗಳಿಂದ ಟೆಂಡರ್‌ ಕರೆಯಲಾಗಿತ್ತು. ಈ ಟೆಂಡರ್‌ನಲ್ಲಿ ಕೆಎಂಎಫ್‌ ಪಾಲ್ಗೊಂಡಿರಲಿಲ್ಲ. ಈ ವಿಷಯವನ್ನು ಮರೆಮಾಚಲಾಗುತ್ತಿದ್ದು, ಟಿಟಿಡಿಯೇ ನಿರಾಕರಣೆ ಮಾಡಿದೆ ಎಂಬರ್ಥದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದು ವಿಶ್ವನಾಥ್‌ ಟೀಕಿಸಿದ್ದಾರೆ.

ತುಪ್ಪದ ಟೆಂಡರ್‌ನಲ್ಲೇ ಕೆಎಂಎಫ್‌ ಭಾಗವಹಿಸಿಲ್ಲ: ಟಿಟಿಡಿ

ತಿರುಮಲದ ತಿಮ್ಮಪ್ಪನಿಗೆ ಪೂರೈಸುವ ತುಪ್ಪದ ವಿಚಾರದಲ್ಲಿ ವ್ಯಾಪಾರಿ ಮನೋಭಾವಕ್ಕೆ ಬದಲಾಗಿ ಭಕ್ತಿ ಅಗತ್ಯ. ದೇವರಿಗೆ ನೀಡುವ ಉತ್ಪನ್ನಗಳಿಂದ ಲಾಭ ನಿರೀಕ್ಷೆ ಮಾಡುವುದು ಸರಿಯಲ್ಲ ಎಂದಿದ್ದಾರೆ.