ತಿರುಪತಿಗೆ ತುಪ್ಪ ಪೂರೈಸುವ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸದೆ ಹಿಂದೆ ಉಳಿದ ವಿಚಾರದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಟಿಟಿಡಿಯ ಈ ಹೇಳಿಕೆ ಬಂದಿರುವುದು ಕುತೂಹಲ ಮೂಡಿಸಿದೆ.

ತಿರುಪತಿ(ಆ.03): ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲದ ಪ್ರಸಿದ್ಧ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದ ಗುಣಮಟ್ಟದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ, ಕಳೆದ ಒಂದು ವರ್ಷದಲ್ಲಿ 42 ಟ್ರಕ್‌ಲೋಡ್‌ ತುಪ್ಪವನ್ನು ಗುಣಮಟ್ಟದ ಕೊರತೆಯಿಂದಾಗಿ ತಿರಸ್ಕರಿಸಿದ್ದೇವೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್‌ (ಟಿಟಿಡಿ) ಟ್ರಸ್ಟ್‌ ಹೇಳಿದೆ. ತಿರುಪತಿಗೆ ತುಪ್ಪ ಪೂರೈಸುವ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸದೆ ಹಿಂದೆ ಉಳಿದ ವಿಚಾರದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಟಿಟಿಡಿಯ ಈ ಹೇಳಿಕೆ ಬಂದಿರುವುದು ಕುತೂಹಲ ಮೂಡಿಸಿದೆ.

‘ತಿರುಪತಿಗೆ ತುಪ್ಪ ತರುವ ಪ್ರತಿ ಟ್ರಕ್‌ನಲ್ಲೂ ಸುಮಾರು 18 ಟನ್‌ ತುಪ್ಪವಿರುತ್ತದೆ. ಅದು ಶುದ್ಧವಾದ ಹಸುವಿನ ತುಪ್ಪವೇ, ಅದರ ಗುಣಮಟ್ಟಉತ್ಕೃಷ್ಟವಾಗಿದೆಯೇ ಎಂದು ಎರಡು ರೀತಿಯ ಪರೀಕ್ಷೆಗಳನ್ನು ನಡೆಸಿದ ನಂತರವೇ ಟ್ರಕ್‌ಗಳನ್ನು ಗೇಟಿನೊಳಗೆ ಬಿಡುತ್ತೇವೆ. ಆರೋಗ್ಯ, ವಿಚಕ್ಷಣೆ, ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಹಾಗೂ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಸೋಧನಾ ಸಂಸ್ಥೆ (ಸಿಎಫ್‌ಟಿಆರ್‌)ಯ ಹಿರಿಯ ಕೆಮಿಸ್ಟ್‌ ಒಬ್ಬರ ನೇತೃತ್ವದಲ್ಲಿ ನಡೆಯುವ ಪರೀಕ್ಷೆಯಲ್ಲಿ ಪಾಸಾದ ತುಪ್ಪವನ್ನು ಮಾತ್ರ ಸ್ವೀಕರಿಸುತ್ತೇವೆ. 2022ರ ಜು.22 ಹಾಗೂ 2023ರ ಜೂ.30ರ ನಡುವೆ ಗುಣಮಟ್ಟದ ಕೊರತೆಯ ಕಾರಣ 42 ಟ್ರಕ್‌ಲೋಡ್‌ ತುಪ್ಪವನ್ನು ತಿರಸ್ಕರಿಸಿದ್ದೇವೆ’ ಎಂದು ಟಿಟಿಡಿ ಖರೀದಿ ವಿಭಾಗದ ಜನರಲ್‌ ಮ್ಯಾನೇಜರ್‌ ಪಿ.ಮುರಳಿಕೃಷ್ಣ ಬುಧವಾರ ತಿಳಿಸಿದ್ದಾರೆ.

ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ, ಬಿಜೆಪಿ-ಕಾಂಗ್ರೆಸ್ ಆರೋಪ ಪ್ರತ್ಯಾರೋಪಕ್ಕೆ ಹುರುಳೇ ಇಲ್ಲ!

ಟಿಟಿಡಿಯ ನೀರು ಮತ್ತು ಆಹಾರ ಪರೀಕ್ಷೆ ಪ್ರಯೋಗಾಲಯದಲ್ಲಿ ತುಪ್ಪದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ತುಪ್ಪದ ಟೆಂಡರ್‌ಗೆ ಒಪ್ಪಿಗೆ ನೀಡುವುದಕ್ಕೂ ಮೊದಲೇ ನಮ್ಮ ತಜ್ಞರು ಆಯಾ ಡೈರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಅಲ್ಲಿನ ತುಪ್ಪದ ಮಾದರಿಯನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುತ್ತಾರೆ ಎಂದೂ ಅವರು ಹೇಳಿದ್ದಾರೆ.

ಲಡ್ಡು ಮಾತ್ರವಲ್ಲ, ಎಲ್ಲದಕ್ಕೂ ಇದೇ ತುಪ್ಪ ಬಳಕೆ:

ಟಿಟಿಡಿ ತರಿಸಿಕೊಳ್ಳುವ ಶುದ್ಧ ಹಸುವಿನ ತುಪ್ಪವನ್ನು ಲಡ್ಡು ತಯಾರಿಸಲು ಮಾತ್ರವಲ್ಲದೆ, ಅನ್ನಪ್ರಸಾದ, ಅನ್ನದಾನ, ಅನೇಕ ಸ್ಥಳೀಯ ದೇವಸ್ಥಾನಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುವ ಊಟದಲ್ಲೂ ಬಳಸಲಾಗುತ್ತದೆ. ಟಿಟಿಡಿಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳಲ್ಲೂ ಇದೇ ತುಪ್ಪ ಬಳಸಲಾಗುತ್ತದೆ. ದೇವಸ್ಥಾನದಲ್ಲಿ ದೀಪ ಹಚ್ಚಲು ಹಾಗೂ ದೀಪೋತ್ಸವದಲ್ಲಿ ಲಕ್ಷಾಂತರ ಹಣತೆಗಳನ್ನು ಹಚ್ಚಲೂ ಇದೇ ತುಪ್ಪ ಬಳಸಲಾಗುತ್ತದೆ. ತಿರುಮಲ ಹಾಗೂ ತಿರುಚನೂರು ದೇವಸ್ಥಾನಕ್ಕೆ ಟ್ರಕ್‌ನಲ್ಲಿ ತುಪ್ಪ ಪೂರೈಕೆಯಾದರೆ, ಇನ್ನುಳಿದ ದೇವಸ್ಥಾನಗಳಿಗೆ 15 ಕೆ.ಜಿ. ಡಬ್ಬಗಳಲ್ಲಿ ತುಪ್ಪ ಪೂರೈಕೆಯಾಗುತ್ತದೆ ಎಂದು ಮುರಳಿಕೃಷ್ಣ ಹೇಳಿದ್ದಾರೆ.