ತುಪ್ಪದ ಟೆಂಡರ್‌ನಲ್ಲೇ ಕೆಎಂಎಫ್ ಭಾಗವಹಿಸಿಲ್ಲ: ಟಿಟಿಡಿ
ನಮ್ಮದು ಸರ್ಕಾರಿ ಸಂಸ್ಥೆ. ಹೀಗಾಗಿ ದೇಗುಲಕ್ಕೆ ಬೇಕಾದ ಎಲ್ಲಾ ವಸ್ತುಗಳ ಖರೀದಿಗೂ ಟೆಂಡರ್ ಮಾರ್ಗ ಅನುಸರಿಸಲಾಗುತ್ತದೆ. ಅದರಲ್ಲಿ ನಮ್ಮ ಮಾನದಂಡ ಪೂರೈಸಿ, ಅತ್ಯಂತ ಕಡಿಮೆ ದರ ನಮೂದು ಮಾಡಿದವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಹೀಗಾಗಿ ಕರ್ನಾಟಕದ ಕೆಎಂಎಫ್‌ಗೆ ಅವಕಾಶ ನೀಡಿಲ್ಲ ಎಂಬುದು ಸರಿಯಲ್ಲ: ಧರ್ಮಾರೆಡ್ಡಿ
ತಿರುಮಲ(ಆ.02): ‘ಇಲ್ಲಿನ ಪ್ರಸಿದ್ಧ ತಿರುಪತಿ ದೇಗುಲದಲ್ಲಿ ತಯಾರಿಸುವ ಲಡ್ಡು ತಯಾರಿಕೆಗೆ ತುಪ್ಪ ಪೂರೈಸಲು ಕಡಿಮೆ ದರ ನಮೂದಿಸಿದ್ದ ಬೇರೊಂದು ಕಂಪನಿಯೊಂದನ್ನು ಆಯ್ಕೆ ಮಾಡಲಾಗಿದೆ’ ಎಂದು ತಿರುಪತಿ ದೇಗುಲದ ಉಸ್ತುವಾರಿ ಹೊತ್ತಿರುವ ಟಿಟಿಡಿ ಸ್ಪಷ್ಟಪಡಿಸಿದೆ.
ದುಬಾರಿ ದರ ನಿಗದಿಪಡಿಸಿದ್ದ ಕರ್ನಾಟಕದ ‘ನಂದಿನಿ’ ತುಪ್ಪದ ಟೆಂಡರ್ ರದ್ದು ಮಾಡಲಾಗಿದೆ ಎಂಬ ವಿವಾದದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ, ‘ನಮ್ಮದು ಸರ್ಕಾರಿ ಸಂಸ್ಥೆ. ಹೀಗಾಗಿ ದೇಗುಲಕ್ಕೆ ಬೇಕಾದ ಎಲ್ಲಾ ವಸ್ತುಗಳ ಖರೀದಿಗೂ ಟೆಂಡರ್ ಮಾರ್ಗ ಅನುಸರಿಸಲಾಗುತ್ತದೆ. ಅದರಲ್ಲಿ ನಮ್ಮ ಮಾನದಂಡ ಪೂರೈಸಿ, ಅತ್ಯಂತ ಕಡಿಮೆ ದರ ನಮೂದು ಮಾಡಿದವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಹೀಗಾಗಿ ಕರ್ನಾಟಕದ ಕೆಎಂಎಫ್‌ಗೆ ಅವಕಾಶ ನೀಡಿಲ್ಲ ಎಂಬುದು ಸರಿಯಲ್ಲ. ಮೇಲಾಗಿ ಈ ಹಿಂದೆ 2023ರ ಮಾಚ್‌ರ್‍ನಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಕೆಎಂಎಫ್ ಭಾಗವಹಿಸಿರಲಿಲ್ಲ’ ಎಂದು ಹೇಳಿದ್ದಾರೆ.
ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ, ಬಿಜೆಪಿ-ಕಾಂಗ್ರೆಸ್ ಆರೋಪ ಪ್ರತ್ಯಾರೋಪಕ್ಕೆ ಹುರುಳೇ ಇಲ್ಲ!
ಇದೆ ವೇಳೆ ಸತತವಾಗಿ ಕಳೆದ 20 ವರ್ಷಗಳಿಂದ ಕೆಎಂಎಫ್, ಟಿಟಿಡಿಗೆ ತುಪ್ಪ ಪೂರೈಕೆ ಮಾಡುತ್ತಿತ್ತು ಎಂಬ ಕೆಎಂಎಫ್ ಅಧ್ಯಕ್ಷ ಭೀಮಾನಾಯ್‌್ಕ ಹೇಳಿಕೆಯನ್ನೂ ಅವರು ತಳ್ಳಿಹಾಕಿದ್ದಾರೆ.
ಗುಣಮಟ್ಟ ರಾಜಿ ಇಲ್ಲ:
‘ಇದೇ ವೇಳೆ ಕಡಿಮೆ ದರಕ್ಕಾಗಿ ಟಿಟಿಡಿ ಗುಣಮಟ್ಟದಲ್ಲಿ ರಾಜೀ ಮಾಡಿಕೊಂಡಿದೆ ಎಂಬ ಕಳವಳವನ್ನು ಧರ್ಮಾರೆಡ್ಡಿ ತಳ್ಳಿಹಾಕಿದ್ದಾರೆ. ನಾವು ತುಪ್ಪ ಖರೀದಿಗೆ ನಮ್ಮದೇ ಆದ ಮಾನದಂಡ ಹೊಂದಿದ್ದೇವೆ. ಕಡಿಮೆ ದರ ನಮೂದಿಸಿದವರ ತುಪ್ಪವನ್ನು ನಾವು ನಮ್ಮ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುತ್ತೇವೆ. ನಂತರವಷ್ಟೇ ಅದನ್ನು ಬಳಸುತ್ತೇವೆ. ಹೀಗಾಗಿ ಗುಣಮಟ್ಟದಲ್ಲಿ ರಾಜೀ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.
ಟಿಟಿಡಿ ಕೇಳಿದ ದರಕ್ಕೆ ಕೆಎಂಎಫ್ ತುಪ್ಪ ನೀಡಲಾಗದು: ಭೀಮಾ ನಾಯಕ್
ಕೆಎಂಎಫ್ ಬದಲು ಅಮುಲ್‌ಗೆ ತುಪ್ಪ ಪೂರೈಕೆ ಟೆಂಡರ್?
ಲಡ್ಡು ತಯಾರಿಸಲು ಟಿಟಿಡಿ ಪ್ರತಿ ವರ್ಷ 2800 ಟನ್‌ಗಳಷ್ಟುತುಪ್ಪವನ್ನು ಖರೀದಿಸುತ್ತದೆ. ಹಲವು ವರ್ಷಗಳಿಂದ ಈ ತುಪ್ಪವನ್ನು ಕೆಎಂಎಫ್ ಪೂರೈಸುತ್ತಿತ್ತು. ಆದರೆ ಈ ಬಾರಿ ಗುಜರಾತ್ ಮೂಲದ ಅಮುಲ್ ಸಂಸ್ಥೆ ಕಡಿಮೆ ದರ ನಮೂದಿಸುವ ಮೂಲಕ ಗುತ್ತಿಗೆ ಪಡೆದುಕೊಂಡಿದೆ ಎಂಬ ದಟ್ಟವದಂತಿ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆದರೆ ಈ ವಿಷಯವನ್ನು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ ಖಚಿತಪಡಿಸಿಲ್ಲ. ‘ನಂದಿನಿ ಬದಲು ಕಡಿಮೆ ದರ ನಮೂದಿಸಿದ ಬೇರೊಂದು ಸಂಸ್ಥೆಯನ್ನು ತುಪ್ಪ ಪೂರೈಸಲು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದಷ್ಟೇ ಅವರು ಮಾಹಿತಿ ನೀಡಿದ್ದಾರೆ.