ನಿಮ್ಮ ಮನೆ ಜವಾಬ್ದಾರಿ ನಿಮ್ಮದು| ಸಿದ್ದು ಟ್ವೀಟ್‌ಗೆ ಡಿವಿಎಸ್ ತಿರುಗೇಟು
ಬೆಂಗಳೂರು[ಜ.16]: ಕಾಂಗ್ರೆಸ್ ನಾಯಕರ ಹತಾಶೆಯ ಹೇಳಿಕೆಗಳು ಅವರ ಮೈಪರಚಿಕೊಳ್ಳುವ ಪರಿಸ್ಥಿತಿಯನ್ನು ತೋರಿಸುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಚೌಕಿದಾರ್ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮನ್ನು ದೇಶದ ಚೌಕಿದಾರ್ ಎಂದು ಹೇಳಿಕೊಳ್ಳುತ್ತಿರಿ. ಈಗ ನಮ್ಮ ರಾಜ್ಯದ ಶಾಸಕರನ್ನು ಹೋಟೆಲ್ ಕೊಣೆಯೊಳಗೆ ಕೂಡಿಹಾಕಿ ಕಾಯುತ್ತಿರುವ ಚೌಕಿದಾರ್ ಆಗಿಬಿಟ್ಟಿರಲ್ಲಾ....ಛೇ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕೇಂದ್ರ ಸಚಿವರು ‘ನಿಮ್ಮ ಮನೆಯ ಜವಾಬ್ದಾರಿ ನಿಮ್ಮದು. ಅದು ಬಿಟ್ಟು ಯಾಕೆ ಈ ಅಸಂಬದ್ಧ ಮಾತು? ನಮ್ಮ ಪ್ರಧಾನಿ ನಮ್ಮ ಹೆಮ್ಮೆ. ಹೌದು ಅವರೇ ನಮ್ಮ ಚೌಕಿದಾರ. ಅವರು ಕೈಗೊಂಬೆಯಲ್ಲ. ಆಗ 10 ವರ್ಷ ಕೇಂದ್ರದಲ್ಲೊಂದು ಕೈಗೊಂಬೆ, ಈಗ ಕರ್ನಾಟಕದಲ್ಲಿ ಹೊಸ ಕೈಗೊಂಬೆ’ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
‘ನಾನು ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ. ನಾನು ವಿಷ ಕಂಠನಾಗಿದ್ದೇನೆ. ನನ್ನದು ಹಗ್ಗದ ಮೇಲಿನ ನಡಿಗೆ, ನಾನು ಮುಖ್ಯಮಂತ್ರಿಯಲ್ಲ ಕ್ಲರ್ಕ್, ನಮ್ಮನ್ನು 3ನೇ ದರ್ಜೆಯವರಂತೆ ನೋಡಬೇಡಿ. ಇದನ್ನು ಯಾರಿಗೆ ಯಾರು ಹೇಳಿದ್ದು? ಈಗ ಹೇಳಿ ಮೈತ್ರಿ ಸರ್ಕಾರದ ಬುಡಕ್ಕೆ ಬೆಂಕಿ ಇಟ್ಟವರು ಯಾರು? ನಮ್ಮ ಮೇಲೆ ಏಕೆ ಆರೋಪ’ ಎಂದು ಮೈತ್ರಿ ಸರ್ಕಾರದ ಕಾಲು ಎಳೆದಿದ್ದಾರೆ.
ಇದಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಸದಾನಂದ ಗೌಡ ಅವರು, ನಮಗೆ ಕಾಯಿಲೆ ಇಲ್ಲ. ಹಾಗಾಗಿ ನಮಗೆ ಯಾವುದೇ ಅಪರೇಷನ್ ಅಗತ್ಯವಿಲ್ಲ. ಅದೆಲ್ಲ ಇರುವುದು ಕಾಂಗ್ರೆಸ್-ಜೆಡಿಎಸ್‌ನವರಿಗೆ ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆದಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಕಾಂಗ್ರೆಸ್-ಜೆಡಿಎಸ್ ಸಂಬಂಧ ಚೆನ್ನಾಗಿಲ್ಲ. ರಾಜಕೀಯ ರಾದ್ಧಾಂತ ನಡೆಯುತ್ತಿದೆ. ಡಿವೋರ್ಸ್ ಹಂತ ತಲುಪಿದೆ ಎಂಬ ವಿಷಯ ಗೊತ್ತಾಯಿತು. 104 ಸದಸ್ಯ ಬಲವಿರುವ ದೊಡ್ಡ ಪಕ್ಷ ನಮ್ಮದು. ಜನರಿಗೆ ತೊಂದರೆಯಾಗದಂತೆ ಮತ್ತು ಬದಲಿ ವ್ಯವಸ್ಥೆ ಮಾಡಿಕೊಡುವಂತಹ ಜವಾಬ್ದಾರಿ ನಮ್ಮ ಮೇಲೂ ಇದೆ ಅಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.
37 ಶಾಸಕರನ್ನು ಹೊಂದಿರುವವರು ರಾಜ್ಯ ಆಳುತ್ತಾರೆ ಎಂದಾದರೆ 104 ಮಂದಿ ಇರುವವರು ಏಕೆ ಆಡಳಿತ ಮಾಡಬಾರದು ಎಂದು ಮಾಧ್ಯಮಗಳಿಗೆ ಮರು ಪ್ರಶ್ನಿಸಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸದಾನಂದಗೌಡರು, ಕಾಂಗ್ರೆಸ್-ಜೆಡಿಎಸ್‌ನಲ್ಲಿ ಏನು ಬೇಕಾದರೂ ಆಗಬಹುದು. ಅಸಮಾಧಾನ ಭುಗಿಲೆದ್ದು ಸರ್ಕಾರ ಬೀಳಬಹುದು. ಅವರವರೇ ಕಚ್ಚಾಡಿಕೊಂಡು ಬಿದ್ದು ಬಿಟ್ಟರೆ ನಾವು ಸರ್ಕಾರ ರಚಿಸುವುದರಲ್ಲಿ ತಪ್ಪಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಒಂದೇ ಕಡೆ ಇರಲಿ ಎಂಬ ಉದ್ದೇಶದಿಂದ ದೆಹಲಿಯಲ್ಲಿದ್ದಾರೆ ಎಂದು ಹೇಳಿದರು.
