ಕೋಮುಸೌಹಾರ್ದತೆ ಭಂಜಕರ ವಿರುದ್ಧ ಕಠಿಣ ಕ್ರಮದ ಘೋಷಣೆ, ಬೆಂಗಳೂರಿನಲ್ಲಿ 11 ಹೊಸ ಠಾಣೆಗಳು, 2454 ಹೊಸ ಹುದ್ದೆಗಳ ಸೃಷ್ಟಿ, ಪೊಲೀಸ್‌ ವಸತಿ ಯೋಜನೆಗೆ 450 ಕೋಟಿ ರು. ಅನುದಾನ, ಸಿಸಿಐ, ಸಿಸಿಡಿ, ಸಿಇಎನ್‌ ಠಾಣೆಗಳ ಉನ್ನತೀಕರಣಕ್ಕೆ 10 ಕೋಟಿ ರು. 

ಬೆಂಗಳೂರು(ಜು.08): ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆಗೇರಿದ ದಿನದಿಂದಲೂ ನೈತಿಕ ಪೊಲೀಸ್‌ಗಿರಿ ವಿರುದ್ಧ ಗುಟರು ಹಾಕುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಬಜೆಟ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಹಾಗೂ ಸುಳ್ಳು ಸುದ್ದಿ ಹಬ್ಬಿಸಿ ಕೋಮು ಸೌಹಾರ್ದತೆ ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಘೋಷಿಸಿದ್ದಾರೆ. ಅದೇ ರೀತಿ ಅಪರಾಧ ಪ್ರಕರಣಗಳ ತನಿಖೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಬಲವರ್ಧನೆಗೆ ತಾಂತ್ರಿಕತೆ ಬಳಕೆಗೆ ಅನುದಾನ ನೀಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಪೊಲೀಸ್‌ ವಸತಿ ಯೋಜನೆಯಡಿ ಸರ್ಕಾರವು 2,125 ಮನೆಗಳ ನಿರ್ಮಾಣ ಗುರಿ ಹೊಂದಿದ್ದು, 450 ಕೋಟಿ ರು. ಅನುಮಾನ ನೀಡಿದೆ. ಹಾಗೆಯೇ ಪೊಲೀಸರಿಗೆ ಹೊಸ ವಾಹನ ಖರೀದಿಗೆ ಹಂತ ಹಂತವಾಗಿ 100 ಕೋಟಿ ರು. ಕಲ್ಪಿಸುವುದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಹೇಳಿದ್ದಾರೆ. ಠಾಣೆಗಳು, ಕಚೇರಿ ಹಾಗೂ ಕಟ್ಟಡಗಳ ಉನ್ನತೀಕರಣಕ್ಕೆ 10 ಕೋಟಿ ರು. ಅನುದಾನ ಕೊಡಲಾಗಿದೆ. ಬೆಂಗಳೂರಿಗೆ ಐದು ಸಂಚಾರ ಹಾಗೂ ಆರು ಮಹಿಳಾ ಠಾಣೆಗಳ ಸೇರಿ 11 ಠಾಣೆಗಳ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ 2,454 ಹುದ್ದೆಗಳನ್ನು ಸೃಜಿಸುವುದಾಗಿ ಸರ್ಕಾರ ಹೇಳಿದೆ. ಅಪರಾಧ ಪ್ರಕರಣಗಳ ತನಿಖೆಗೆ ಹೆಚ್ಚಿನ ಆದ್ಯತೆ ನೀಡಿರುವ ಸರ್ಕಾರವು, ಅಪರಾಧ ತನಿಖಾ ದಳ (ಸಿಐಡಿ), ಸೈಬರ್‌ ಅಪರಾಧ ಘಟಕ (ಸಿಸಿಡಿ) ಹಾಗೂ ಸೈಬರ್‌, ಎಕನಾಮಿಕ್ಸ್‌ ಹಾಗೂ ನಾರ್ಕೋಟಿಕ್ಸ್‌ (ಸಿಇಎನ್‌) ಠಾಣೆಗಳ ಉನ್ನತೀಕರಣಕ್ಕೆ 10 ಕೋಟಿ ರು. ಹಣ ಮೀಸಲಿಟ್ಟಿದೆ. ಇನ್ನು ಕಾನೂನು ಮತ್ತು ಸುವ್ಯವಸ್ಥೆಗೆ ಬಲಪಡಿಸಲು ಡ್ರೋನ್‌ ಕ್ಯಾಮರಾ, ಕಣ್ಗಾವಲು ಕ್ಯಾಮರಾ ಹಾಗೂ ಬಾಡಿ ವೋರ್ನ್‌ ಕ್ಯಾಮರಾಗಳನ್ನು ಪೂರೈಸಲು ತೀರ್ಮಾನಿಸಿದೆ. ಕಾರಾಗೃಹಗಳ ಅಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸಲು 5 ಕೋಟಿ ರು. ವೆಚ್ಚದಲ್ಲಿ ವಾಚ್‌ ಟವರ್‌ಗಳ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಕೈದಿಗಳ ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ವ್ಯವಸ್ಥೆ ಬಲಪಡಿಸಲು 3 ಕೋಟಿ ರು. ಹಾಗೂ ಪ್ರಸಕ್ತ ಸಾಲಿನಿಂದ ಬೆಂಗಳೂರಿನಲ್ಲಿ ಕಾರಾಗೃಹ ಅಕಾಡೆಮಿ ಕಾರ್ಯಾರಂಭಿಸಲು 5 ಕೋಟಿ ರು. ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಪಿಸಿದ್ದಾರೆ.

ಕಿವಿಗೆ ಹೂವಿಟ್ಟು ಪ್ರತಿಭಟಿಸಿದ ಕಾಂಗ್ರೆಸ್ ಇದೀಗ ಜನರ ತಲೆಗೆ ಚೆಂಡು ಹೂವಿಟ್ಟಿದೆ; ಹೆಚ್‌ಡಿಕೆ ಟೀಕೆ!

ತನಿಖೆ ವಿಭಾಗದ ಉನ್ನತೀಕರಣ ಸ್ವಾಗತಾರ್ಹ

ಹೊಸ ಸರ್ಕಾರದ ಹೊಸ ಬಜೆಟ್‌ನಲ್ಲಿ ಪೊಲೀಸ್‌ ಇಲಾಖೆಯ ಸಮಗ್ರ ಬದಲಾವಣೆಗೆ ಹೇಳಿಕೊಳ್ಳುವಂತಹ ಹೊಸ ಭರವಸೆಗಳೇನಿಲ್ಲ. ಪೊಲೀಸರಿಗೆ ತಾಂತ್ರಿಕ ತರಬೇತಿ, ಗೃಹ ಯೋಜನೆ ಹಾಗೂ ಅಪರಾಧ ಪ್ರಕರಣಗಳ ತನಿಖೆ ವಿಭಾಗದ ಉನ್ನತೀಕರಣಕ್ಕೆ ಮುಖ್ಯಮಂತ್ರಿಗಳು ಆದ್ಯತೆ ನೀಡಿರುವುದು ಉತ್ತಮ ನಿರ್ಧಾರವಾಗಿದೆ. ನೈತಿಕ ಪೊಲೀಸ್‌ ಗಿರಿ ವಿರುದ್ಧ ಕಠಿಣ ನಿಲುವು ತಾಳಿರುವುದು ಸ್ವಾಗತಾರ್ಹವಾದ ಕ್ರಮವಾಗಿದೆ. ಕಾರಾಗೃಹ ಇಲಾಖೆಯಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿ ಸಿಬ್ಬಂದಿ ತರಬೇತಿಗಾಗಿ ಹೊಸ ಅಕಾಡೆಮಿ ಆರಂಭಿಸಲು ಅನುಧಾನ ನೀಡಿರುವುದು ಸಮಾಧಾನಕರ ಸಂಗತಿ ಅಂತ ನಿವೃತ್ತ ಡಿಐಜಿ ಡಾ.ಡಿ.ಸಿ.ರಾಜಪ್ಪ ತಿಳಿಸಿದ್ದಾರೆ.