ಬೆಂಗಳೂರು(ಆ.27):  ನಮ್ಮ ಮೆಟ್ರೋ ನಿಗಮಕ್ಕೆ ಹೊರಗುತ್ತಿಗೆ ನೌಕರರನ್ನು ಒದಗಿಸುವ ಸಂಸ್ಥೆಗಳಿಗೆ ಕನ್ನಡಿಗರನ್ನೇ ಕರೆ ತರುವಂತೆ ಷರತ್ತು ವಿಧಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗುವಂತೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಸೂಚನೆ ನೀಡಿದ್ದಾರೆ.

ಬುಧವಾರ ವಿಡಿಯೋ ಸಂವಾದದ ಮೂಲಕ ನಮ್ಮ ಮೆಟ್ರೋ ನಿಗಮದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಮೆಟ್ರೋ ನಿಗಮದಲ್ಲಿ ಸ್ವಚ್ಛತಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಅನ್ಯ ರಾಜ್ಯದವರೇ ಇರುವ ಕುರಿತು ಸಾಕಷ್ಟುದೂರುಗಳು ಬಂದಿವೆ. ಉತ್ತರ ಕರ್ನಾಟಕ ಸೇರಿದಂತೆ ನಮ್ಮ ರಾಜ್ಯದ ಸಾಕಷ್ಟು ಜಿಲ್ಲೆಯ ಜನರಿಗೆ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಹೀಗಿರುವಾಗ ಬಿಎಂಆರ್‌ಸಿಎಲ್‌ ಅನ್ಯ ರಾಜ್ಯದವರಿಗೆ ಕೆಲಸ ನೀಡುವುದು ಸರಿಯಲ್ಲ. ಹೊರಗುತ್ತಿಗೆ ನೌಕರರನ್ನು ಒದಗಿಸುವ ಖಾಸಗಿ ಸಂಸ್ಥೆಗಳಿಗೆ ಕನ್ನಡಿಗರನ್ನೇ ಕರೆತರುವಂತೆ ಷರತ್ತು ವಿಧಿಸಬೇಕು. ಯಾವುದೇ ಕಾರಣನ್ನೂ ಇನ್ನು ಮುಂದೆ ಕನ್ನಡಿಗರನ್ನು ಕಡೆಗಣಿಸದಂತೆ ಎಚ್ಚರ ವಹಿಸಬೇಕು ಎಂದು ನಮ್ಮ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್‌ ಸೇಠ್‌ ಅವರಿಗೆ ಸೂಚಿಸಿದರು.

ಕೋಲುಮಂಡೆ; 'ಅಶ್ಲೀಲ ಎನ್ನುವುದು ನೋಡುವವರ ಯೋಚನೆಯಲ್ಲಿದೆ'

ನಮ್ಮ ಮೆಟ್ರೋ ಹಿಂದಿ ಹೇರುವ ವಕ್ತಾರರಾಗದೆ ಕನ್ನಡ ನಾಡು, ನುಡಿ, ಸಂಸ್ಕೃತಿಯ ಸಂದೇಶ ಪ್ರಚುರಪಡಿಸುವ ಮೂಲಕ ಕನ್ನಡ ಭಾಷೆಯ ವಾಹಕವಾಗಿ ಕೆಲಸ ಮಾಡಬೇಕು. ಕನ್ನಡದ ಇತಿಹಾಸ, ಪರಂಪರೆ, ಸಂಗೀತ, ಸಾಹಿತ್ಯವನ್ನು ಉತ್ತುಂಗಕ್ಕೇರಿಸುವಲ್ಲಿ ನಮ್ಮ ಮೆಟ್ರೋದ ಜವಾಬ್ದಾರಿಯೂ ಇದೆ. ಈ ನೆಲದ ಕಾನೂನನ್ನು ಗೌರವಿಸುವುದರ ಜತೆಗೆ ರಾಜ್ಯ ಸರ್ಕಾರದ ಭಾಷಾ ನೀತಿಯನ್ವಯ ಕಾರ್ಯನಿರ್ವಹಿಸುವುದು ಮೆಟ್ರೋ ನಿಗಮದ ಕರ್ತವ್ಯ ಎಂದು ಹೇಳಿದರು.
ತುರ್ತು ಸಂದರ್ಭದಲ್ಲಿ ಬಳಸುವ ಮೆಟ್ರೋ ರೈಲಿನ ಬಾಗಿಲುಗಳ ಮೇಲೆ ಸಂಪೂರ್ಣವಾಗಿ ಹಿಂದಿಯನ್ನು ಬಳಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಾಗಾಭರಣ ಅವರು, ಮೆಟ್ರೋದಲ್ಲಿ ಓಡಾಡುವ ಬಹುತೇಕ ಜನರು ಕನ್ನಡಿಗರೇ ಆಗಿದ್ದಾರೆ. ರಾಜ್ಯದೊಳಗೆ ಇರುವ ಯಾವುದೇ ಸಂಸ್ಥೆಯು ರಾಜ್ಯ ಸರ್ಕಾರದ ಭಾಷಾ ನೀತಿಯನ್ವಯ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸೇಠ್‌ ನಮ್ಮ ಮೆಟ್ರೋದಲ್ಲಿ ಕರ್ನಾಟದವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು. ಕನ್ನಡ ಭಾಷೆ, ಪರಂಪರೆ ಹಂಚುವ ನಿಟ್ಟಿನಲ್ಲಿ ಮೆಟ್ರೋ ಕಾರ್ಯನಿರ್ವಹಿಸಲಿದೆ. ಸಭೆಯಲ್ಲಿ ಚರ್ಚಿತವಾಗಿರುವ ಎಲ್ಲ ಲೋಪ ದೋಷಗಳನ್ನು ನವೆಂಬರ್‌ ಒಳಗೆ ಸರಿಪಡಿಸಿಕೊಂಡು ವರದಿ ನೀಡುವುದಾಗಿ ಭರವಸೆ ನೀಡಿದರು.