ಬೆಂಗಳೂರು(ಆ.13):  ನಾಡಿನ ಸೌಲಭ್ಯಗಳನ್ನು ಬಳಸಿಕೊಂಡು ಬೃಹತ್ತಾಗಿ ಬೆಳೆದಿರುವ ಐಟಿಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನಿರ್ದೇಶಕರಾದ ಮೀನಾ ನಾಗಾರಾಜ್‌ ಅವರಿಗೆ ಸೂಚಿಸಿದ್ದಾರೆ. 

ಐಟಿಬಿಟಿ ಸಂಸ್ಥೆಗಳು ಕನ್ನಡಿಗರನ್ನು ಕಡೆಗಣಿಸುತ್ತಿವೆ. ಅಲ್ಲದೆ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಗಳು ಅನ್ಯಭಾಷಿಕರ ಪಾಲಾಗುತ್ತಿವೆ ಎಂಬ ದೂರುಗಳು ಪ್ರಾಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪರಿಶೀಲನಾ ಸಭೆ ನಡೆಸಲಾಯಿತು.

ನೋಂದಣಿ ಇಲಾಖೆಯಲ್ಲಿ ಕನ್ನಡ ಕಡ್ಡಾಯಕ್ಕೆ ಸೂಚನೆ: T S ನಾಗಾಭರಣ

ಈ ವೇಳೆ ಐಟಿಬಿಟಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಡೆಗಣಿಸಲಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಕೂಡಲೇ ಕ್ರಮವಹಿಸಿ ಪ್ರಾಧಿಕಾರಕ್ಕೆ ವರದಿ ನೀಡುವಂತೆ ಟಿ.ಎಸ್‌.ನಾಗಾಭರಣ ಸೂಚಿಸಿದ್ದಾರೆ. 

ಕೆಟಿಐಎಸ್‌ನಲ್ಲಿ ಅನ್ಯಭಾಷಿಕರು ಸಲಹೆಗಾರರನ್ನಾಗಿ ನೇಮಕಗೊಂಡಿರುವುದರಿಂದ ರಾಜ್ಯ ಸರ್ಕಾರದ ಯೋಜನೆಗಳು ಹೊರಗಿನವರ ಪಾಲಾಗುತ್ತಿವೆ. ಇಂತಹ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗದಂತೆ ತಡೆಯಲು ಮುಂದಿನ ಹೊಸ ನೀತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖಾ ನಿರ್ದೇಶಕರಿಗೆ ಹೇಳಿದರು.

ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ವೆಬ್‌ ಪೋರ್ಟಲ್‌ನ ಯೋಜನಾಧಿಕಾರಿ ಸತೀಶ್‌ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.