ಬೆಂಗಳೂರು(ಜು.09): ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯ ಎಲ್ಲಾ ಹಂತಗಳಲ್ಲೂ ಒಂದು ತಿಂಗಳ ಕಾಲಮಿತಿಯೊಳಗೆ ಕಡ್ಡಾಯವಾಗಿ ಕನ್ನಡ ಅನುಷ್ಠಾನಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಸೂಚಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೋಂದಣಿ ಮತ್ತು ಮುದ್ರಾಂಕ ಇಲಾಖೆಯೊಂದಿಗೆ ‘ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ’ ಕುರಿತು ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸರ್ಕಾರಕ್ಕೆ ಆದಾಯ ತಂದುಕೊಡುವ ನೋಂದಣಿ ಇಲಾಖೆ ಜನಸ್ನೇಹಿಯಾಗಬೇಕು ಎಂದರು.

ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುವಲ್ಲಿ ಪ್ರಮುಖ ವಹಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಗಳಲ್ಲಿ ವರ್ಷಕ್ಕೆ ಸುಮಾರು 20 ಲಕ್ಷ ದಸ್ತಾವೇಜುಗಳು ನೋಂದಣಿಯಾಗುತ್ತಿವೆ. ಆದರೆ ಇವೆಲ್ಲವೂ ಆಂಗ್ಲಭಾಷೆಯಲ್ಲಿ ಆಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇನ್ನೊಂದು ತಿಂಗಳ ಕಾಲಮಿತಿಯೊಳಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ನೋಂದಣಿಯಾಗುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ.ಮೋಹನ್‌ ರಾಜ್‌ ಅವರಿಗೆ ಸೂಚಿಸಿದರು.

ಸ್ಫೋಟಕ ಮಾಹಿತಿ ಹೊರಹಾಕಿದ ಸಿಎಂ ಯಡಿಯೂರಪ್ಪ..!

ಆಂಗ್ಲಭಾಷಾ ನೋಂದಣಿ ಏಕೆ?: ರಾಜ್ಯದಲ್ಲಿ 286 ನೋಂದಣಾಧಿಕಾರಿಗಳ (ಸಬ್‌ರಿಜಿಸ್ಟ್ರಾರ್‌) ಕಚೇರಿಗಳಿವೆ. ಈ ಎಲ್ಲಾ ಕಚೇರಿಗಳಲ್ಲೂ ಆಂಗ್ಲ ಭಾಷೆಯಲ್ಲಿಯೇ ನೋಂದಣಿ ಮಾಡಲಾಗುತ್ತಿದೆ. ಅಪಾರ್ಟ್‌ಮೆಂಟ್‌ ಮತ್ತು ಫ್ಲಾಟ್‌ಗಳ ಕ್ರಯಪತ್ರಗಳು ಕೂಡ ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ನೋಂದಣಿಯಾಗುತ್ತಿವೆ. ಇದು ರಾಜ್ಯ ಸರ್ಕಾರದ ಭಾಷಾ ನೀತಿಯ ಉಲ್ಲಂಘನೆಯಾಗಿದ್ದು, ಸಂಬಂಧಿಸಿದ ಅಧಿಕಾರಿ ಅಥವಾ ನೌಕರರ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ ಎಂದು ಎಚ್ಚರಿಸಿದರು.

ಈ ವೇಳೆ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಅವರು ಮಾದರಿ ಜಾಲತಾಣಗಳ ಬಗ್ಗೆ ಮಾಹಿತಿ ನೀಡಿದರು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ಪಿ.ಮೋಹನ್‌ ರಾಜ್‌, ಮಹಾ ಪರಿವೀಕ್ಷಕ ಇ.ಪಿ.ಮಧುಸೂಧನ್‌, ವೆಬ್‌ಪೋರ್ಟಲ್‌ ಯೋಜನಾಧಿಕಾರಿ ಸತೀಶ್‌, ಕನ್ನಡ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಇನ್ನಿತರರು ಇದ್ದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ಕಾವೇರಿ ಆನ್‌ಲೈನ್‌ ಸೇವೆ ಕೂಡ ಇಂಗ್ಲಿಷ್‌ನಲ್ಲಿದೆ ಎಂದು ಉದಾಹರಣೆ ಸಹಿತ ವೆಬ್‌ಸೈಚ್‌ ಪ್ರದರ್ಶಿಸಿ ಮಾತು ಮುಂದುವರಿಸಿದ ನಾಗಾಭರಣ ಅವರು, ಇನ್ನು ಮುಂದೆ ಕಡ್ಡಾಯವಾಗಿ ದಸ್ತಾವೇಜುಗಳು ಕನ್ನಡದಲ್ಲಿದ್ದರೆ ಮಾತ್ರ ನೋಂದಣಿ ಮಾಡುವಂತೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಿದರು.