ಬೆಂಗಳೂರು [ಮಾ.01]:  ಸಾಂಕ್ರಾಮಿಕ ಕಾಯಿಲೆ ಹರಡದಂತೆ ಸಲಹೆ ಹಾಗೂ ಎಚ್ಚರಿಕೆ ನೀಡುವ ವೈದ್ಯರೇ ಎಚ್‌1ಎನ್‌1 ಸೋಂಕಿಗೆ ಗುರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಎಚ್‌1ಎನ್‌1 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರಿಗೆ ಸೋಂಕು ತಗುಲಿದೆ.

ನಗರದ ಬನಶಂಕರಿ 1ನೇ ಹಂತದ ಸೀತಾ ಸರ್ಕಲ್‌ ಬಳಿಯ ಪ್ರಶಾಂತ್‌ ಆಸ್ಪತ್ರೆಯಲ್ಲಿ ಇತ್ತೀಚೆಗೆ 8ಕ್ಕೂ ಹೆಚ್ಚು ಎಚ್‌1ಎನ್‌1 ಪ್ರಕರಣಗಳು ದೃಢಪಟ್ಟಿವೆ. ವಿಪರ್ಯಾಸವೆಂದರೆ ಅದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೂ ಎಚ್‌1ಎನ್‌1 ಸೋಂಕು ತಗುಲಿದೆ. ಅದೃಷ್ಟವಶಾತ್‌ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿದ್ದು, ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಎಚ್‌1ಎನ್‌1 (ಹಂದಿಜ್ವರ) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗಾಗಲೇ ಮೂರು ವ್ಯಕ್ತಿಗಳನ್ನು ಬಲಿ ಪಡೆದಿದೆ. ಎರಡು ತಿಂಗಳಲ್ಲಿ ಬರೋಬ್ಬರಿ 220 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸರ್ಕಾರದ ಮಾಹಿತಿ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಕರಣ ದೃಢಪಟ್ಟಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಪ್ರಶಾಂತ್‌ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್‌.ಎನ್‌. ಮೋಹನ್‌, ಆಸ್ಪತ್ರೆಯಲ್ಲಿ ಇತ್ತೀಚೆಗೆ ಎಚ್‌1ಎನ್‌1 ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗುತ್ತದೆ. ಸದರಿ ವೈದ್ಯರು ಆಸ್ಪತ್ರೆಗೆ ಕನ್ಸಲ್ಟೆಂಟ್‌ ಆಗಿ ಸೇವೆ ನೀಡುತ್ತಿದ್ದುದರಿಂದ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಹೀಗಾಗಿ ಇವರಿಗೆ ಸೋಂಕು ತಗುಲಿದೆ ಎಂದರು.

ಜಗತ್ತಿಗೆ ಕೊರೊನಾ ಭಯ, ಬೆಂಗಳೂರಿಗೆ H1N1 ಆತಂಕ!...

ಆಸ್ಪತ್ರೆಯಲ್ಲಿ ಈವರೆಗೂ ಎಚ್‌1ಎನ್‌1ಗೆ ಚಿಕಿತ್ಸೆ ಪಡೆದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಂಕಿತ ವೈದ್ಯರಿಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆತಂಕಗೊಳ್ಳುವ ಅಗತ್ಯವಿಲ್ಲ. ಬದಲಿಗೆ ಮುಂಜಾಗ್ರತಾ ಕ್ರಮವಾಗಿ ಎಚ್‌1ಎನ್‌1 ಲಸಿಕೆ ಹಾಕಿಸಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಜಾಗೃತಿ ಕಾರ್ಯಕ್ರಮ:

ಆರೋಗ್ಯ ಇಲಾಖೆಯಿಂದ ಎಚ್‌1ಎನ್‌1 ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಲು ದೂರದರ್ಶನ ಹಾಗೂ ರೇಡಿಯೋ ಮತ್ತು ರಾಜ್ಯದ 570 ಚಿತ್ರಮಂದಿರಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ. ಕೆಎಸ್‌ಆರ್‌ಟಿಸಿ , ಬಿಎಂಟಿಸಿ ಸೇರಿದಂತೆ 170 ಬಸ್‌ ನಿಲ್ದಾಣಗಳು, ಮೆಟ್ರೋ ಹಾಗೂ ರೈಲು ನಿಲ್ದಾಣಗಳಲ್ಲಿ ರೇಡಿಯೋ ಮೂಲಕ ಜಿಂಗಲ್ಸ್‌ ಹಾಗೂ ಕ್ಲಿಪ್ಪಿಂಗ್ಸ್‌ ಮೂಲಕ ಎಚ್‌1ಎನ್‌1 ಕುರಿತು ಮಾಹಿತಿ ಹಾಗೂ ಜಾಗೃತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಸರ್ಕಾರ ಕೈಗೊಂಡ ಕ್ರಮವೇನು?

ಎಚ್‌1ಎನ್‌1 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಹಾಗೂ ಜಿಲ್ಲಾ, ತಾಲೂಕು ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದೆ. ಈಗಾಗಲೇ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 5 ಹಾಸಿಗೆಗಳ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆಗಳ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಇದ್ದವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಅಗತ್ಯ ಲಸಿಕೆ ಖರೀದಿಸಲು 27.50 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದ್ದು, ರಾಜ್ಯಾದ್ಯಂತ 238 ಖಾಸಗಿ ಔಷಧಾಲಯಗಳಲ್ಲಿ ಟಾಮಿಫ್ಲೂ ಮಾತ್ರೆಗಳು ದೊರೆಯುವಂತೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಎಚ್‌1ಎನ್‌1 ಪರೀಕ್ಷೆ?

ಬೆಂಗಳೂರಿನ ನಿಮ್ಹಾನ್ಸ್‌, ನಾರಾಯಣ ನೇತ್ರಾಲಯ, ಮಣಿಪಾಲ್‌ ಆಸ್ಪತ್ರೆ, ಕಮಾಂಡ್‌ ಆಸ್ಪತ್ರೆ ಮತ್ತು ಉಡುಪಿಯ ಮಣಿಪಾಲ್‌ ಆಸ್ಪತ್ರೆಯ ಪರೀಕ್ಷಾ ಕೇಂದ್ರಗಳಲ್ಲಿ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ನಿಮ್ಹಾನ್ಸ್‌ ಮತ್ತು ಕೆ.ಎಂ.ಸಿ. ಮಣಿಪಾಲ್‌ನಲ್ಲಿ ಉಚಿತ ಪರೀಕ್ಷೆ ಮಾಡಲಾಗುವುದು. ಬೆಂಗಳೂರಿನ ಕಮಾಂಡ್‌ ಆಸ್ಪತ್ರೆ ಮತ್ತು ನಾರಾಯಣ ನೇತ್ರಾಲಯದಲ್ಲಿ ಸೈನಿಕರ ಕುಟುಂಬ ಹೊರತುಪಡಿಸಿ ಉಳಿದಂತೆ ಪ್ರತಿ ಪರೀಕ್ಷೆಗೆ 2,500 ರು. ನಿಗದಿಪಡಿಸಲಾಗಿದೆ.